Krunal Pandya: ನಾನು ಗೆಲ್ಲಿಸುತ್ತೇನೆ! ಕೊಟ್ಟ ಮಾತು ಉಳಿಸಿಕೊಂಡು ಹೀರೊ ಆದ ಕೃನಾಲ್ ಪಾಂಡ್ಯ
ಐಪಿಎಲ್ 2025ರ ಆವೃತ್ತಿಯಲ್ಲಿ ತವರಿನ ಹೊರಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಬ್ಬರ ಮುಂದುವರೆದಿದೆ. ತವರಿನ ಹೊರಗೆ ಆಡಿರುವ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದ್ದ ಆರ್ ಸಿಬಿ ಭಾನುವಾರ ಆರನೇ ಪಂದ್ಯವನ್ನೂ ಕೂಡ ಗೆದ್ದುಕೊಂಡಿದೆ. ದೆಹಲಿಯ ಅರುಣ್ ಜೈಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕೃನಾಲ್ ಪಾಂಡ್ಯ ಕೊನೆಗೂ ಆರ್ ಸಿಬಿ ಅಭಿಮಾನಿಗಳಿಗೆ ಕೊಟ್ಟ ಮಾತು ಉಳಿಸಿಕೊಂಡರು.
ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತು. ಭುವನೇಶ್ವರ್ ಕುಮಾರ್ 3 ವಿಕೆಟ್ ಪಡೆದರೆ, ಜೋಶ್ ಹೇಜಲ್‌ವುಡ್ 2 ವಿಕೆಟ್ ಪಡೆದರು. ಕೃನಾಲ್ ಪಾಂಡ್ಯ ಮತ್ತು ಯಶ್ ದಯಾಳ್ ಒಂದು ವಿಕೆಟ್ ಪಡೆದರು. ಕೆಎಲ್ ರಾಹುಲ್ 41 ರನ್, ಅಭಿಷೇಕ್ ಪೊರೆಲ್ 28 ರನ್, ಟ್ರಿಸ್ಟನ್ ಸ್ಟಬ್ಸ್ 34 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸಾಧಾರಣ ಮೊತ್ತ ಕಲೆಹಾಕಿದರು.

ಆರಂಭದಲ್ಲೇ ಆರ್ ಸಿಬಿಗೆ ಆಘಾತ
163 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಆರ್ ಸಿಬಿಗೆ ಆರಂಭದಲ್ಲೆ ದೊಡ್ಡ ಆಘಾತ ಸಿಕ್ಕಿತು. 12 ರನ್ ಗಳಿಸಿದ ಜೇಕಬ್ ಬೆಥೆಲ್ ಔಟಾದ ಬಳಿಕ ಬಂದ ದೇವದತ್ ಪಡಿಕ್ಕಲ್ ಎರಡನೇ ಎಸೆತದಲ್ಲೇ ರನ್ ಗಳಿಸುವ ಮುನ್ನವೇ ಔಟಾದರು. ಬಳಿಕ ಬಂದ ನಾಯಕ ರಜತ್ ಪಟಿದಾರ್ 6 ರನ್ ಗಳಿಸಿದ್ದಾಗ ರನೌಟ್ ಆದರು.
ದೇವರಂತೆ ಬಂದ ಕೃನಾಲ್ ಪಾಂಡ್ಯ
ಒಂದು ಕಡೆ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಆಡುತ್ತಿದ್ದರೂ ಇನ್ನೊಂದು ಕಡೆ ಮೂರು ವಿಕೆಟ್ ಬಿದ್ದವು, ಪಡಿಕ್ಕಲ್ ಔಟಾಗುತ್ತಿದ್ದಂತೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದ ಕೃನಾಲ್ ಪಾಂಡ್ಯ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಬಂದರು. ಈ ಜೋಡಿ ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸುತ್ತಾ ವಿಕೆಟ್ ಬೀಳದಂತೆ ನೋಡಿಕೊಂಡರು.
ಆರಂಭದಲ್ಲಿ ನಿಧಾನಗತಿಯಲ್ಲಿ ರನ್ ಗಳಿಸಿದರೂ ಒಮ್ಮೆ ಸೆಟ್ ಆಗುತ್ತಿದ್ದಂತೆ ಕೃನಾಲ್ ಪಾಂಡ್ಯ ಬಿರುಸಾಗಿ ಆಡಲು ಆರಂಭಿಸಿದರು. ಮತ್ತೊಂದು ಕಡೆ ವಿರಾಟ್ ಕೊಹ್ಲಿ ನಿಧಾನವಾಗಿ ರನ್ ಕದಿಯುತ್ತಾ ಕೃನಾಲ್ ಪಾಂಡ್ಯಗೆ ಧೈರ್ಯ ತುಂಬಿದರು. ಪಾಂಡ್ಯ ಬಳಿಕ ಬೌಂಡರಿ ಗಳಿಸಲು ಶುರು ಮಾಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 119 ರನ್ ಕಲೆಹಾಕುವ ಮೂಲಕ ಆರ್ ಸಿಬಿ ಗೆಲುವನ್ನು ಸುಲಭವಾಗಿಸಿದರು.
ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿ ಸಹಿತ 51 ರನ್ ಗಳಿಸಿ ಔಟಾದರೆ. ಕೃನಾಲ್ ಪಾಂಡ್ಯ 47 ಎಸೆತಗಳಲ್ಲಿ 5 ಬೌಂಡರಿ 4 ಭರ್ಜರಿ ಸಿಕ್ಸರ್ ಸಹಿತ ಅಜೇಯ 73 ರನ್ ಗಳಿಸಿದರು. ಕೊಹ್ಲಿ ಔಟಾದ ಬಳಿಕ ಬಂದ ಟಿಮ್ ಡೇವಿಡ್ 5 ಎಸೆತಗಳಲ್ಲಿ 3 ಬೌಂಡರಿ 1 ಸಿಕ್ಸರ್ ಸಹಿತ 19 ರನ್ ಗಳಿಸುವ ಮೂಲಕ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಆರ್ ಸಿಬಿ ಗೆಲುವು ಸಾಧಿಸಿತು.
ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಗೆಲುವಿನ ಬಳಿಕ ಮಾತನಾಡಿದ್ದ ಕೃನಾಲ್ ಪಾಂಡ್ಯ, ತಂಡವು ಕಷ್ಟದ ಸಮಯದಲ್ಲಿದ್ದಾಗ ನಾನು ಆಡಿ ಗೆಲ್ಲಿಸುತ್ತೇನೆ ಎಂದಿದ್ದರು. ಮುಂದಿನ ಪಂದ್ಯದಲ್ಲೇ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಪಾಂಡ್ಯ ಈ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ತಂಡದ ಆಪದ್ಭಾಂಧವನಾಗಿದ್ದಾರೆ. ಡೆಲ್ಲಿ ವಿರುದ್ಧದ ಗೆಲುವಿನ ಬಳಿಕ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.












Click it and Unblock the Notifications