Vaibhav: ಮೊದ್ಲು ಯುವ ಆಟಗಾರರನ್ನ ಪ್ರೋತ್ಸಾಹಿಸಿ: ಗಂಭೀರ್‌ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕ್ಲಾಸ್
Vaibhav Sooryavanshi: ಇದೀಗ ಸದ್ಯ ಭಾರತ ಹಾಗೂ ಜಿಂಬಾಬ್ವೆ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ನಡುವೆಯೇ ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯಲ್ಲಿ ವೈಭವ್ ಸೂರ್ಯವಂಶಿ ಅವರನ್ನ ಪಂದ್ಯದಿಂದ ಹೊರಗಿಟ್ಟ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕೃಷ್ಣಮಾಚಾರಿ ಶ್ರೀಕಾಂತ್ ಅಸಮಾಧಾನ ಹೊರಹಾಕಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತೆಗದುಕೊಂಡ ನಿರ್ಧಾರದ ವಿರುದ್ಧ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕೃಷ್ಣಮಾಚಾರಿ ಶ್ರೀಕಾಂತ್ ವಾಗ್ದಾಳಿ ನಡೆಸಿದ್ದಾರೆ. 'ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಕೆಲವೇ ಪಂದ್ಯಗಳ ವೈಫಲ್ಯದ ಆಧಾರದ ಮೇಲೆ ತಂಡದಿಂದ ಹೊರಗಿಟ್ಟ ಗಂಭೀರ್ ಅವರ ನಡೆ ಮೂರ್ಖತನ ಮತ್ತು ಆಟಗಾರನ ಆತ್ಮವಿಶ್ವಾಸವನ್ನು ಕುಗ್ಗಿಸುವಂತಹದ್ದು,' ಎಂದು ಅಸಮಾಧಾನ ಹೊರಹಾಕಿದ್ದಾರೆ.

ಜಿಂಬಾಬ್ವೆ ವಿರುದ್ಧ ಸ್ಫೋಟಕ ಬ್ಯಾಟಿಂಗ್
15 ವರ್ಷದ ಸ್ಫೋಟಕ ಬ್ಯಾಟರ್ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯಗಳಲ್ಲಿ ಕ್ರಮವಾಗಿ 14, 13 ಮತ್ತು 15 ರನ್‌ಗಳನ್ನು ಮಾತ್ರ ಗಳಿಸಿದ್ದರು. ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಗಂಭೀರ್ ಅವರನ್ನು ಮುಂದಿನ ಪಂದ್ಯದಿಂದ ಕೈಬಿಟ್ಟಿದ್ದರು. ಆದರೆ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದರಿಂದ ವಂಡರ್ ಕಿಡ್‌ಗೆ ಮತ್ತೆ ಅವಕಾಶ ಸಿಕ್ಕಿದ್ದು, ಅವರು ಇದನ್ನು ಸರಿಯಾಗಿ ಬಳಸಿಕೊಂಡು ಅಬ್ಬರದ ಆಟ ಆಡಿದರು.
ಭರ್ಜರಿ ಕಂಬ್ಯಾಕ್ ಮಾಡಿದ ವೈಭವ್
ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ ಅರ್ಧಶತಕ (50 ರನ್, 19 ಎಸೆತಗಳಲ್ಲಿ 4 ಸಿಕ್ಸರ್, 4 ಬೌಂಡರಿ) ಸಿಡಿಸಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಕಿರಿಯ ವಯಸ್ಸಿನಲ್ಲಿ ಅರ್ಧಶತಕ ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ವಂಡರ್ ಕಿಡ್ ಆಕ್ರಮಣಕಾರಿ ಆಟದ ನೆರವಿನಿಂದ ಭಾರತ ತಂಡವು 126 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿ ಭರ್ಜರಿ ಜಯ ಸಾಧಿಸಿತು.
ಗೌತಮ್ ಗಂಭೀರ್ ವಿರುದ್ಧ ಆಕ್ರೋಶ
'ವೈಭವ್ ಅವರಂತಹ ಅದ್ಭುತ ಪ್ರತಿಭೆಯನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ಆಧಾರದಲ್ಲಿ ಹೊರಗಡೆ ಕೂರಿಸಿದ್ದು ಸರಿಯಲ್ಲ. ಈ ರೀತಿ ಮಾಡುವುದರಿಂದ ಉದಯೋನ್ಮುಖ ಆಟಗಾರರ ಆತ್ಮವಿಶ್ವಾಸ ಕುಸಿಯುತ್ತದೆ,' ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂಗ್ಲೆಂಡ್ ಸರಣಿಯ ನಂತರ ವೈಭವ್ ಮನೆಗೆ ಹೋಗದೆ ನೇರವಾಗಿ ರಾಜಸ್ಥಾನ್ ರಾಯಲ್ಸ್ ಕ್ಯಾಂಪ್‌ಗೆ ತೆರಳಿ ಶಾರ್ಟ್ ಬಾಲ್ ಎದುರಿಸುವ ತರಬೇತಿ ಪಡೆದರು. ಅವರ ಈ ಮನೋಭಾವವನ್ನು ಶ್ರೀಕಾಂತ್ ಕೊಂಡಾಡಿದ್ದಾರೆ. 'ಮೂರು ಪಂದ್ಯಗಳಲ್ಲಿ ವಿಫಲರಾದಾಗ ಸಾಮಾನ್ಯವಾಗಿ ಆಟಗಾರರು ನಂತರ ಪಂದ್ಯಗಳಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಸಿಂಗಲ್ಸ್ ಆಡಲು ಭಯಸುತ್ತಾರೆ. ಆದರೆ ವೈಭವ್ ಯಾವುದೇ ಒತ್ತಡವಿಲ್ಲದೆ 250ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಯಾವುದೇ ಭಯವಿಲ್ಲದೆ ಧೈರ್ಯದಿಂದ ಬ್ಯಾಟ್ ಬೀಸಿದ್ದಾರೆ. ಅವರ ಈ ಕೌಶಲ್ಯ ಅದ್ಭುತವಾದದ್ದು,' ಎಂದು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ವೈಭವ್ ಸೂರ್ಯವಂಶಿ ಅವರ ಈ ಸ್ಫೋಟಕ ಅರ್ಧಶತಕವು ತಮ್ಮನ್ನು ಆರಂಭದಲ್ಲೇ ಕೈಬಿಟ್ಟಿದ್ದ ಗೌತಮ್ ಗಂಭೀರ್ ಅವರ ನಿರ್ಧಾರಕ್ಕೆ ತಕ್ಕ ಉತ್ತರ ನೀಡಿದಂತಾಗಿದೆ ಎಂದು ಶ್ರೀಕಾಂತ್ ಅವರ ಅಭಿಪ್ರಾಯವಾಗಿದೆ. ಅಲ್ಲದೆ, ಗಂಭೀರ್ ಅವರು ಇದರಿಂದ ಕಲಿಯಬೇಕು ಅಂತಲೂ ಎಚ್ಚರಿಕೆಯ ಸೂಚನೆಯನ್ನು ಕೂಡ ನೀಡಿದಂತಿದೆ.


Click it and Unblock the Notifications
