India vs Australia: ಆಸ್ಟ್ರೇಲಿಯಾದಲ್ಲಿ ಮಿಂಚಿದ ಕನ್ನಡಿಗ; ಮುಂದುವರೆದ ಕೆಎಲ್ ರಾಹುಲ್ ವೈಫಲ್ಯ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಕಂಡಿರುವ ಭಾರತ ಇದೀಗ ಆಸ್ಟ್ರೇಲಿಯಾ ಪ್ರವಾಸ ಮಾಡಲಿದ್ದು ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಭಾರತಕ್ಕೆ ಈ ಸರಣಿ ಗೆಲ್ಲುವುದು ತುಂಬಾ ಮುಖ್ಯವಾಗಿದೆ. ಈಗಾಗಲೇ ಭಾರತ ಎ ತಂಡ ಆಸ್ಟ್ರೇಲಿಯಾದಲ್ಲಿ ಎರಡು ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಸೋತಿರುವುದು ಭಾರತದ ತಲೆ ನೋವು ಹೆಚ್ಚಿಸಿದೆ.
ಇಂದು ಮುಕ್ತಾಯವಾದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. ಭಾರತ ಬ್ಯಾಟಿಂಗ್ ವಿಭಾಗದಲ್ಲಿ ವಿಫಲವಾಗಿದ್ದು ಈ ಸೋಲಿಗೆ ಪ್ರಮುಖ ಕಾರಣವಾಗಿದೆ. ಭಾರತದ ಯುವ ಆಟಗಾರರು ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದರು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 161 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ಪ್ರದರ್ಶನ ನೀಡಿತು. ವಿಕೆಟ್ ಕೀಪರ್ ಧ್ರುವ್ ಜುರೆಲ್ ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಬಳಿಕ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡ 223 ರನ್‌ಗಳಿಗೆ ಆಲೌಟ್ ಆದರೂ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿತು. ಪ್ರಸಿದ್ಧ್ ಕೃಷ್ಣ 4 ವಿಕೆಟ್ ಪಡೆದರೆ, ಮುಖೇಶ್ ಕುಮಾರ್ 3 ಮತ್ತು ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು.
ಬಳಿಕ ಬ್ಯಾಟಿಂಗ್ ಮಾಡಿದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 229 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲೂ ಧ್ರುವ್ ಜುರೆಲ್ 68 ರನ್ ಗಳಿಸಿ ಮತ್ತೆ ಆಸರೆಯಾದರು. ನಿತೀಶ್ ರೆಡ್ಡಿ 38 ರನ್ ಗಳಿಸಿದರೆ, ತನುಷ್ ಕೊಟ್ಯಾನ್ 44 ರನ್ ಗಳಿಸಿದರು. ಪ್ರಸಿದ್ಧ್ ಕೃಷ್ಣ 29 ರನ್ ಗಳಿಸಿದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 169 ರನ್‌ಗಳ ಗುರಿಯನ್ನು ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು ಬೆನ್ನಟ್ಟುವ ಮೂಲಕ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದು ಗಮನ ಸೆಳೆದರು.
ಕೆಎಲ್ ರಾಹುಲ್ ವೈಫಲ್ಯ, ಪ್ರಸಿದ್ಧ್ ಮಿಂಚು
ಈ ಸರಣಿಯಲ್ಲಿ ಇಬ್ಬರು ಕನ್ನಡಿಗರು ಭಾರತ ತಂಡದಲ್ಲಿ ಅವಕಾಶ ಪಡೆದಿದ್ದರು. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ವಿಫಲವಾಗಿದ್ದ ಕೆಎಲ್ ರಾಹುಲ್ ಆಸ್ಟ್ರೇಲಿಯಾದಲ್ಲಿ ಕೂಡ ವೈಫಲ್ಯ ಅನುಭವಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 10 ರನ್ ಗಳಿಸಿದರು. ಅದರಲ್ಲೂ ಅವರು ಔಟಾದ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಕೆಎಲ್ ರಾಹುಲ್ ಬಗ್ಗೆ ಭಾರಿ ಅಸಮಾಧಾನ ವ್ಯಕ್ತವಾಗುತ್ತಿದೆ.
ಮತ್ತೊಂದು ಕಡೆ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ, ಎರಡನೇ ಪಂದ್ಯದಲ್ಲಿ ಒಟ್ಟು 6 ವಿಕೆಟ್ ಪಡೆದು ಮಿಂಚಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣ ಸ್ಥಾನ ಪಡದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications