ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನಲ್ಲಿ ಕರ್ನಾಟಕದ ಬಾಲೆಗೆ 2 ಕಂಚಿನ ಪದಕ
KIWG 2026: ಕರ್ನಾಟಕದ 17 ವರ್ಷದ ಆಲ್ಪೈನ್ ಸ್ಕೀಯರ್ ಜಿಯಾ ಆರ್ಯನ್, ಖೇಲೋ ಇಂಡಿಯಾ ವಿಂಟರ್ ಗೇಮ್ಸ್ 2026ರಲ್ಲಿ ತಮ್ಮ ಎರಡನೇ ಭಾಗವಹಿಸುವಿಕೆಯನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. ಸವಾಲಿನಿಂದ ಕೂಡಿದ್ದ ಕೊಂಗ್ಡೂರಿ ಇಳಿಜಾರುಗಳಲ್ಲಿ ಸತತ ಎರಡು ದಿನಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಜಿಯಾ ಆರ್ಯನ್ ಅವರು ಫೆಬ್ರವರಿ 23ರಂದು ಮೊದಲ ದಿನ ನಡೆದ 'ಸ್ಲಾಲಂ' ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ತಮ್ಮ ಅಭಿಯಾನವನ್ನು ಆರಂಭಿಸಿದರು. ನಂತರ ಫೆಬ್ರವರಿ 24ರಂದು ನಡೆದ ಎರಡನೇ ದಿನ 'ಜೈಂಟ್ ಸ್ಲಾಲಂ' ವಿಭಾಗದಲ್ಲೂ ಮತ್ತೊಂದು ಕಂಚಿನ ಪದಕವನ್ನು ಮುಡಿಗೇರಿಸಿಕೊಂಡರು. ಈ ಮೂಲಕ ವಿವಿಧ ಸ್ಕೀಯಿಂಗ್ ವಿಭಾಗಗಳಲ್ಲಿ ಅದ್ಭುತ ಪ್ರದರ್ಶನ ತೋರಿ ತಮ್ಮ ಸಾಮಾರ್ಥ್ಯವನ್ನು ಸಾಬೀತುಪಡಿಸಿಕೊಂಡು, ಭಾರತೀಯ ಆಲ್ಪೈನ್ ಸ್ಕೀಯಿಂಗ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಅದ್ಭುತ ಪ್ರತಿಭೆ ಎಂಬುದನ್ನು ಎತ್ತಿ ತೋರಿಸಿದರು.

ಒನ್ ಇಂಡಿಯಾ ಮೈಖೇಲ್‌ನೊಂದಿಗೆ ಜಿಯಾ ಅವರು ಮಾತನಾಡುತ್ತಾ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಸ್ಪರ್ಧೆಗಳ, ಮಂಜಿನ ಕಠಿಣ ಪರಿಸ್ಥಿತಿಗಳು, ಹಿರಿಯ ಕ್ರೀಡಾಪಟುಗಳ ವಿರುದ್ಧದ ಪೈಪೋಟಿ, ಇಟಲಿಯಲ್ಲಿ ತಾವು ಪಡೆದ ತರಬೇತಿ ಮತ್ತು ಮುಂದಿನ ತಮ್ಮ ಗುರಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ಪದಕಗಳು ಬಂದಿದ್ದರೂ ನಿರಾಸೆ ಎಂದಿದ್ದೇಕೆ?
ಸತತ ಎರಡು ಬಾರಿ ಪದಕ ಗೆದ್ದು ವೇದಿಕೆ ಏರಿದರೂ, ಜಿಯಾ ಅವರು ತಮ್ಮ 'ಜೈಂಟ್ ಸ್ಲಾಲಂ' ಓಟದ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. "ಸತತ ಎರಡು ಪದಕಗಳು ಬಂದಿವೆ. ಆದರೆ, ಎರಡೂ ಪದಕಗಳ ಬಣ್ಣ ಒಂದೇ ಆಗಿರುವುದು ಸ್ವಲ್ಪ ನಿರಾಸೆ ತಂದಿದೆ," ಎಂದು ಬೆಂಗಳೂರಿನ ಈ ಪ್ರತಿಭಾನ್ವಿತ ಜಿಯಾ ಆರ್ಯನ್ ಅಭಿಪ್ರಾಯಪಟ್ಟಿದ್ದಾರೆ.
"ಮೊದಲ ಸುತ್ತಿನಲ್ಲಿ ನಾನು ಅತ್ಯುತ್ತಮ ಪ್ರದರ್ಶನ ನೀಡಿದ್ದೆ, ಹಾಗಾಗಿ ಗೆಲುವಿನ ಉತ್ತಮ ಅವಕಾಶ ನನದಾಗಿತ್ತು. ಆದರೆ, ಎರಡನೇ ಸುತ್ತಿನಲ್ಲಿ ಒಳಗಿನ ಸ್ಕೀ ಮೇಲೆ ಸ್ವಲ್ಪ ವಾಲಿ ನಿಯಂತ್ರಣ ಕಳೆದುಕೊಂಡೆ. ಆದರೂ, ತಕ್ಷಣವೇ ಚೇತರಿಸಿಕೊಂಡು, ಮತ್ತೆ ಟ್ರ್ಯಾಕ್‌ಗೆ ಹಿಂತಿರುಗಿ ನನ್ನನ್ನು ನಾನು ತಳ್ಳಿಕೊಂಡೆ," ಎಂದು ಹೇಳಿದರು.
ತಪ್ಪಿನ ನಂತರ ಚೇತರಿಕೆ ಕಂಡಿದ್ದು, ಅತ್ಯಂತ ಮಹತ್ವದ್ದಾಗಿತ್ತು. ಆ ಕ್ಷಣದಲ್ಲೇ ಆತ್ಮವಿಶ್ವಾಸ ಕಳೆದುಕೊಳ್ಳದೇ, ತನ್ನ ಓಟವನ್ನು ಅವರು ಮುಂದುವರಿಸಿದರು. "ಆದರೂ ನಾನು ಮತ್ತೆ ಟ್ರ್ಯಾಕ್‌ಗೆ ಹಿಂತಿರುಗಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಿ ಸೋಲೊಪ್ಪಿಕೊಳ್ಳದೆ ಹೋರಾಡಿದ್ದಕ್ಕಾಗಿ ನನ್ನ ಬಗ್ಗೆ ನನಗೆ ಹೆಮ್ಮೆಯಿದೆ," ಎಂದು ರಿಲಯನ್ಸ್ ಫೌಂಡೇಶನ್ ಅಥ್ಲೀಟ್ ಜಿಯಾ ಹೆಮ್ಮೆಯಿಂದ ಹೇಳಿದರು.
ಕಠಿಣ ಮಂಜಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಈ ಸ್ಪರ್ಧೆಯಲ್ಲಿ ದೊಡ್ಡ ಸವಾಲಾಗಿತ್ತು. "ಹವಾಮಾನ ಮತ್ತು ಮಂಜಿನ ಗುಣಮಟ್ಟ ಸ್ಪರ್ಧೆಯ ಸಮಯದಲ್ಲಿ ಮಹತ್ವದ ಪಾತ್ರವಹಿಸಿತು. ಟ್ರ್ಯಾಕ್‌ನ ಮೇಲಿನ ಹಿಮದ ಸ್ಥಿತಿ ಬದಲಾಗುತ್ತಿದ್ದು, ಆಟಗಾರರು ಹೊಸ ಸವಾಲುಗಳನ್ನು ಎದುರಿಸಬೇಕಾಯಿತು. ಈ ರೀತಿಯ ಕಠಿಣ ಪರಿಸ್ಥಿತಿಗಳಿಗೆ ತಕ್ಷಣ ಹೊಂದಿಕೊಳ್ಳುವ ಸಾಮರ್ಥ್ಯವೇ ಸ್ಪರ್ಧೆಯಲ್ಲಿ ನಿರ್ಣಾಯಕವಾಗಿತ್ತು.
"ನಾವು ಬೆಳಿಗ್ಗೆ ಬೇಗನೆ ಸ್ಪರ್ಧೆ ಆರಂಭಿಸಿದ ಹಿನ್ನೆಲೆ ಟ್ರ್ಯಾಕ್ ಸ್ಥಿತಿ ನಿಜಕ್ಕೂ ತುಂಬಾ ಚೆನ್ನಾಗಿತ್ತು. ಆದ್ದರಿಂದ ಮೊದಲ ಸುತ್ತಿನ ಸಮಯದಲ್ಲಿ ಮಂಜು ಗಟ್ಟಿಯಾದ ಸ್ಥಿತಿಯಲ್ಲಿ ಇತ್ತು," ಎಂದು ಹೇಳಿದರು. ಆದರೆ, ನಂತರ ತಾಪಮಾನ ಹೆಚ್ಚಾದಂತೆ ಮಂಜಿನ ಮೇಲ್ಮೈ ಮೃದುವಾಗತೊಡಗಿತು.
"ಎರಡನೇ ಸುತ್ತಿನ ವೇಳೆಗೆ ಬಿಸಿಲು ಹೆಚ್ಚಾಗಿದ್ದು, ಮಂಜಿನ ಪ್ರಮಾಣ ಕಡಿಮೆಯಾಗುತ್ತದೆ. ಆದರೆ, ನಮಗೆ ಸಿಕ್ಕ ಪರಿಸ್ಥಿತಿಯಲ್ಲೇ ನಾವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗಾಗಿ ನಾವು ಅಂತಹ ಸವಾಲುಗಳನ್ನು ಎದುರಿಸಲು ಸದಾ ಸಿದ್ಧರಿರುತ್ತೇವೆ," ಎಂದು ಜಿಯಾ ಅವರು ಹೇಳಿದರು. ಅವರ ಈ ಶಾಂತ ಮತ್ತು ಪ್ರಬುದ್ಧವಾದ ವಿಶ್ಲೇಷಣೆಯು ಒಬ್ಬ ವೃತ್ತಿಪರ ರೇಸರ್‌ನ ಪಕ್ವತೆಯನ್ನು ಪ್ರತಿಬಿಂಬಿಸುತ್ತದೆ. ಅಂದರೆ, ಪರಿಸ್ಥಿತಿಗಳನ್ನು ದೂರುವ ಬದಲು, ಅವುಗಳಿಗೆ ತಕ್ಕಂತೆ ತಮ್ಮನ್ನು ತಾವು ಒಗ್ಗಿಸಿಕೊಳ್ಳುವ ಅವರ ಗುಣ ಇಲ್ಲಿ ಎದ್ದು ಕಾಣುತ್ತದೆ.
ಪ್ರಬಲ ಸ್ಪರ್ಧಿಗಳೊಂದಿಗೆ ಪೈಪೋಟಿ
ಜಿಯಾ ಅವರು ಕಳೆದ ವರ್ಷ ಹಾರ್ಬಿನ್‌ನಲ್ಲಿ ನಡೆದ ವಿಂಟರ್ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಆಂಚಲ್ ಠಾಕೂರ್ ಮತ್ತು ಸಂಧ್ಯಾ ಠಾಕೂರ್ ಅವರಂತಹ ಘಟಾನುಘಟಿಗಳ ಜೊತೆಗೆ ಮತ್ತು ಇತರ ಪ್ರಬಲ ಸ್ಪರ್ಧಿಗಳ ವಿರುದ್ಧ ಕಣಕ್ಕಿಳಿದಿದ್ದರು. "ಅವರ ವಿರುದ್ಧ ಸ್ಪರ್ಧಿಸುವುದು ಸಂತೋಷದ ವಿಷಯವಾಗಿದೆ. ವಿಶೇಷವಾಗಿ ಅನ್ಶುಲ್, ತನುಜಾ ಮತ್ತು ಸಂಧ್ಯಾ ಅವರು ಉತ್ತಮ ವ್ಯಕ್ತಿತ್ವ ಹೊಂದಿರುವವರು. ಕ್ರೀಡಾಂಗಣದ ಹೊರಗೆ ಎಷ್ಟು ಒಳ್ಳೆಯವರೋ, ಕ್ರೀಡಾಂಗಣದ ಒಳಗೆ ಅಷ್ಟೇ ಅದ್ಭುತವಾದ ಕ್ರೀಡಾಪಟುಗಳು," ಎಂದು ಹೊಗಳಿದರು. "ಅವರು ಹುರಿದುಂಬಿಸುತ್ತಾರೆ ಮತ್ತು ಇಂತಹ ಉನ್ನತ ಮಟ್ಟದ ಸ್ಪರ್ಧೆಯಲ್ಲಿ ಇಂತಹ ಕ್ರೀಡಾ ಮನೋಭಾವವನ್ನು ನೋಡುವುದೇ ಒಂದು ಸಂಭ್ರಮ," ಎಂದು ಹೇಳಿದರು.
ಕಳೆದ ವರ್ಷ ಜಿಯಾ ಅವರು ದೇಶದ ಹೊರಗಿದ್ದ ಕಾರಣ ವಿಂಟರ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಇಲ್ಲಿನ ವೃತ್ತಿಪರತೆ ಹಾಗೂ ವ್ಯವಸ್ಥೆಯನ್ನು ಕಂಡು ಅವರು ಬೆರಗಾಗಿದ್ದಾರೆ. ಜಿಯಾ ಅವರು ಹಿಂದಿನ ರಾಷ್ಟ್ರೀಯ ಸ್ಪರ್ಧೆಗಳಿಗೆ ಹೋಲಿಸಿದರೆ ಈ ಬಾರಿ ಕ್ರೀಡಾಕೂಟದ ಒಟ್ಟಾರೆ ಮಟ್ಟ ಗಣನೀಯವಾಗಿ ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವಾಗಿ ಉತ್ತಮವಾದ ಕೋರ್ಸ್ ಸೆಟ್ಟಿಂಗ್ ಮತ್ತು ಸಂಘಟನೆಯನ್ನು ಅವರು ಶ್ಲಾಘಿಸಿದ್ದಾರೆ. ಅವರ ಪ್ರಕಾರ, ಇಳಿಜಾರುಗಳ ತಾಂತ್ರಿಕ ವಿನ್ಯಾಸವು ಕ್ರೀಡಾಪಟುಗಳಿಗೆ ರೇಸ್ ಅನ್ನು ಆನಂದಿಸುವುದರ ಜೊತೆಗೆ ಸಂಪೂರ್ಣವಾಗಿ ತಮ್ಮ ಪ್ರದರ್ಶನದ ಮೇಲೆ ಗಮನಹರಿಸಲು ಸಹಾಯ ಮಾಡಿತು. ಕಾಶ್ಮೀರವನ್ನು ತಮ್ಮ 'ಎರಡನೇ ಮನೆ' ಎಂದು ಕರೆದ ಜಿಯಾ, ಮತ್ತೆ ಗುಲ್ಮಾರ್ಗ್‌ಗೆ ಮರಳಿರುವುದಕ್ಕೆ ಸಂತಸವಾಗಿದೆ ಎಂದು ಹೇಳಿದರು.
ಜಿಯಾಗೆ ತಂದೆಯೇ ಪ್ರೇರಣೆ
ಜಿಯಾ ಕಳೆದ 7 ವರ್ಷಗಳಿಂದ ಸ್ಕೀಯಿಂಗ್ ಮಾಡುತ್ತಿದ್ದು, ಐದು ವರ್ಷಗಳ ಹಿಂದೆ ವೃತ್ತಿಪರರಾಗಿ ಗುರುತಿಸಿಕೊಂಡರು. ಸಾಹಸ ಕ್ರೀಡೆಗಳ ಮೇಲೆ ಅವರಿಗಿದ್ದ ಆಸಕ್ತಿಗೆ ಅವರ ತಂದೆಯೇ ಪ್ರೇರಣೆ. ಗುಲ್ಮಾರ್ಗ್‌ನಲ್ಲಿ ನಡೆದ ಮಿಲಿಟರಿ ತರಬೇತಿ ಶಿಬಿರವೊಂದು ಅವರ ಬದುಕಿನಲ್ಲಿ ಮಹತ್ವದ ತಿರುವು ನೀಡಿತು. ಅಲ್ಲಿ ಜಿಯಾ ಅವರ ಪ್ರತಿಭೆಯನ್ನು ಗುರುತಿಸಿ, ಅವರನ್ನು ಒಬ್ಬ 'ಪ್ರತಿಭಾವಂತ ಅಥ್ಲೀಟ್' ಎಂದು ಪರಿಗಣಿಸಲಾಯಿತು ಹಾಗೂ ವ್ಯವಸ್ಥಿತ ತರಬೇತಿ ಮಾರ್ಗಗಳ ಮೂಲಕ ಬೆಳೆಸಲಾಯಿತು.
ಶಿಕ್ಷಣ ಮತ್ತು ಕ್ರೀಡೆಯನ್ನು ಸಮತೋಲನದಲ್ಲಿ ಕೊಂಡೊಯ್ಯುತ್ತಿರುವ ಅವರು, ಪ್ರಸ್ತುತ ಎನ್‌ಐಒಎಸ್ ಮೂಲಕ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ತಾಯಿ ಐಬಿಎಂ ಸಂಸ್ಥೆಯಲ್ಲಿ ಐಟಿ ಉದ್ಯೋಗಿಯಾಗಿದ್ದು, ತಂದೆ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ. ಕುಟುಂಬವು ಅವರ ಆಲ್ಪೈನ್ ಕನಸುಗಳ ಹಿಂದೆ ಬೆಂಬಲವಾಗಿ ನಿಂತಿರವುದೇ ಅವರಿಗೆ ದೊಡ್ಡ ಶಕ್ತಿ.
ಜಿಯಾಗೆ ತರಬೇತಿ ಎಲ್ಲಿ?
ಭಾರತದಲ್ಲಿ ಸ್ಕೀಯಿಂಗ್‌ಗೆ ಪೂರಕವಾದ ಮೂಲಸೌಕರ್ಯಗಳು ಸೀಮಿತವಾಗಿರುವುದರಿಂದ, ಜಿಯಾ ಅವರು ಚಳಿಗಾಲದ ಅವಧಿಯಲ್ಲಿ ಪ್ರಮುಖವಾಗಿ ಇಟಲಿಯ ಕ್ರಾನ್‌ಪ್ಲಾಟ್ಜ್‌ನಲ್ಲಿ ತರಬೇತಿ ಪಡೆಯುತ್ತಾರೆ. ಇನ್ನು ಬೇಸಿಗೆಯ ಸಮಯದಲ್ಲಿ ಜಿಮ್ ಅಭ್ಯಾಸ, ಓಟ ಮತ್ತು ಶಕ್ತಿ ಅಭಿವೃದ್ಧಿ ತರಬೇತಿಗಳಿಗೆ ಹೆಚ್ಚಿನ ಒತ್ತು ನೀಡುತ್ತಾರೆ. ಇದು ಸ್ಕೀಯಿಂಗ್ ಚಲನೆಗಳನ್ನು ಅನುಕರಿಸಲು ಮತ್ತು ಸ್ನಾಯುಗಳ ಸಹಿಷ್ಣುತೆಯನ್ನು ಹೆಚ್ಚಿಸಲು ಅವರಿಗೆ ಸಹಾಯ ಮಾಡುತ್ತದೆ.
ಜಿಯಾ ಸಾಧನೆಗಳು
* ಖೇಲೋ ಇಂಡಿಯಾದಲ್ಲಿ ಹಿಂದಿನ ಬಾರಿ ಕಂಚಿನ ಪದಕ ಜಯಿಸಿದ್ದರು.
* ಇಟಲಿಯಲ್ಲಿ ನಡೆದ 18 ವರ್ಷದೊಳಗಿನವರ (U18) ಸ್ಲಾಲಮ್ ವಿಭಾಗದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳು
* ಹಿಮಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ
* ಚಿನ್ನಾರ್ ಕಪ್ (Chinnar Cup): ಚಿನ್ನದ ಪದಕ
* ತಮ್ಮ ಮೊದಲ ರಾಷ್ಟ್ರೀಯ ಕ್ರೀಡಾಕೂಟದಲ್ಲೇ ಬೆಳ್ಳಿ ಪದಕ
* ಸರ್ಬಿಯಾದಲ್ಲಿ ನಡೆದ 16 ವರ್ಷದೊಳಗಿನವರ (U16)ಸ್ಪರ್ಧೆಯಲ್ಲಿ ಚಿನ್ನದ ಪದಕ
ಜಿಯಾ ಅವರು ಇತ್ತೀಚೆಗೆ ನಡೆದ 2026ರ ವಿಂಟರ್ ಒಲಿಂಪಿಕ್ಸ್ ಅನ್ನು ಹತ್ತಿರದಿಂದ ಗಮನಿಸಿದ್ದು, ಇಟಲಿಯ ಆಲ್ಪೈನ್ ಸ್ಕೀಯರ್ ಫೆಡೆರಿಕಾ ಬ್ರಿಗೋನ್ ಅವರನ್ನು ತಮ್ಮ ಆದರ್ಶವಾಗಿ ಪರಿಗಣಿಸಿದ್ದಾರೆ. ಬ್ರಿಗೋನ್ ಅವರು ಇಟಲಿಯ ಕಾರ್ಟಿನಾದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಉನ್ನತ ಮಟ್ಟದ ಕ್ರೀಡೆಗೆ ಮರಳಿದ ಬ್ರಿಗೋನ್ ಅವರ ಛಲ ಮತ್ತು ಆತ್ಮವಿಶ್ವಾಸವನ್ನು ಜಿಯಾ ಮೆಚ್ಚಿಕೊಂಡಿದ್ದಾರೆ. ಅವರ ಈ ಚೇತರಿಸಿಕೊಳ್ಳುವ ಗುಣ ಮತ್ತು ಸ್ವಯಂ ನಂಬಿಕೆಯೇ ಜಿಯಾ ಅವರಿಗೆ ದೊಡ್ಡ ಸ್ಫೂರ್ತಿಯಾಗಿದೆ.
ಜಿಯಾ ಮತ್ತು ಅವರ ಸಹ-ಕ್ರೀಡಾಪಟುಗಳಿಗೆ 'ಖೇಲೋ ಇಂಡಿಯಾ' ಎಂಬುದು ಈಗ ಕೇವಲ ಒಂದು ಕ್ರೀಡಾ ಹಬ್ಬವಲ್ಲ. ಅದು ಒಂದು ನಿರ್ಣಾಯಕ ರಾಷ್ಟ್ರೀಯ ವೇದಿಕೆಯಾಗಿ ರೂಪಾಂತರಗೊಂಡಿದೆ. ಅಧಿಕೃತ ಮಾನ್ಯತೆ ಮತ್ತು ಹೆಚ್ಚುತ್ತಿರುವ ಗುಣಮಟ್ಟದೊಂದಿಗೆ, ಭಾರತೀಯ ಸ್ಕೀಯರ್‌ಗಳು ದೇಶದ ಅತ್ಯುತ್ತಮ ಕ್ರೀಡಾಪಟುಗಳ ವಿರುದ್ಧ ತಮ್ಮ ಸಾಮರ್ಥ್ಯವನ್ನು ಅಳೆದುಕೊಳ್ಳಲು ಇರುವ "ಅಂತಿಮ ಹಣಾಹಣಿ" ಎಂದು ಹೇಳಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications