Karun Nair: ಇಂಗ್ಲೆಂಡ್‌ನಲ್ಲಿ ಕನ್ನಡಿಗ ಕರುಣ್ ನಾಯರ್ ಅಮೋಘ ಶತಕ
ಡಿಯರ್ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು ಎಂದು ಕೇಳಿದ್ದ ಕನ್ನಡಿಗ ಕರುಣ್ ನಾಯರ್ ಅವರಿಗೆ ಕ್ರಿಕೆಟ್ ಮತ್ತೊಂದು ಅವಕಾಶ ಕೊಟ್ಟಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕಣಕ್ಕಿಳಿದ ಕರುಣ್ ನಾಯರ್ ಮೊದಲ ಪಂದ್ಯದಲ್ಲೇ ಅಬ್ಬರಿಸುವ ಮೂಲಕ ಭಾರತ ತಂಡದ ಆಯ್ಕೆದಾರರ ಗಮನ ಸೆಳೆದಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಅವರು ಸದ್ಯ ಭಾರತ ಎ ತಂಡಕ್ಕಾಗಿ ಆಡುತ್ತಿದ್ದು ಸಿಕ್ಕಿರುವ ಮೊದಲ ಅವಕಾಶದಲ್ಲೇ ಅಬ್ಬರಿಸಿದ್ದಾರೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಬಳಿಕ ಕರುಣ್ ನಾಯರ್ ಅವರಂತಹ ಅನುಭವಿ ಬ್ಯಾಟರ್ ತಂಡಕ್ಕೆ ಅಗತ್ಯ ಎಂದು ಆಯ್ಕೆ ಮಾಡಲಾಗಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ತಂಡದ ಪರವಾಗಿ ಆಡುತ್ತಿರುವ ಕರುಣ್ ನಾಯರ್ ಮೊದಲ ದಿನವೇ ಶತಕ ಬಾರಿಸಿದ್ದಾರೆ.

ಕ್ಯಾಂಟರ್ ಬರಿಯ ಸೈಂಟ್ ಲಾರೆನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಭಾರತ ಎ ತಂಡ ಬೃಹತ್ ಮೊತ್ತ ಕಲೆಹಾಕಿದೆ. ಟಾಸ್ ಗೆದ್ದ ಇಂಗ್ಲೆಂಡ್ ಲಯನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ 81 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 357 ರನ್‌ಗಳ ಭಾರಿ ಮೊತ್ತ ಕಲೆಹಾಕಿದೆ.
ಕರುಣ್ ನಾಯರ್ ಅಮೋಘ ಶತಕ
ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರುಣ್ ನಾಯರ್ ಅನಧಿಕೃತ ಟೆಸ್ಟ್‌ನಲ್ಲಿ ಅಮೋಘ ಶತಕ ಸಿಡಿಸುವ ಮೂಲಕ ಟೆಸ್ಟ್ ಸರಣಿಯಲ್ಲಿ ಮಿಂಚಲು ನಾನು ಸಿದ್ಧ ಎನ್ನುವ ಸಂದೇಶ ಕೊಟ್ಟಿದ್ದಾರೆ. 81 ಓವರ್ ಮುಗಿದಿದ್ದ ಸಂದರ್ಭದಲ್ಲಿ ಕರುಣ್ ನಾಯರ್ 223 ಎಸೆತಗಳಲ್ಲಿ 21 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 160 ರನ್ ಗಳಿಸಿದ್ದಾರೆ. ಈ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲೇ ಪ್ಲೇಯಿಂಗ್ ಇಲೆವೆನ್‌ನಲ್ಲಿ ತಮ್ಮ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದ್ದಾರೆ.
ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿ ಔಟಾದರೆ, ಭಾರತ ಎ ತಂಡದ ನಾಯಕತ್ವ ವಹಿಸಿಕೊಂಡಿರುವ ಅಭಿಮನ್ಯು ಈಶ್ವರನ್ ಕೇವಲ 8 ರನ್ ಗಳಿಸಿ ಔಟಾದರು. ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯುವಲ್ಲಿ ವಿಫಲವಾಗಿರುವ ಸರ್ಫರಾಜ್ ಖಾನ್ ಈ ಪಂದ್ಯದಲ್ಲಿ 92 ರನ್ ಗಳಿಸುವ ಮೂಲಕ ಆಯ್ಕೆದಾರರಿಗೆ ಬಲವಾದ ಸಂದೇಶ ಕಳಿಸಿದ್ದಾರೆ. ಧ್ರುವ್ ಜುರೆಲ್ ಕೂಡ ಅಜೇಯ 61 ರನ್ ಗಳಿಸಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.












Click it and Unblock the Notifications