Ranji Trophy: ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮಯಾಂಕ್, ವೈಶಾಖ್ ಆಸರೆ
ತ್ರಿಪುರಾ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲನೇ ದಿನದಾಟ 8 ವಿಕೆಟ್ ಕಳೆದುಕೊಂಡು 241 ಕಲೆ ಹಾಕುವ ಮೂಲಕ ಸವಾಲಿನ ಮೊತ್ತ ಕಲೆಹಾಕಿದೆ. ಅಗರ್‍ತಲಾದ ಮಹಾರಾಜ ವೀರ್ ವಿಕ್ರಮ್ ಕಾಲೇಜು ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ತ್ರಿಪುರಾ ತಂಡವನ್ನು ಎದುರಿಸುತ್ತಿದೆ.
ಟಾಸ್ ಗೆದ್ದ ತ್ರಿಪುರಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ಆರಂಭದಲ್ಲೇ ಆಘಾತ ಅನುಭವಿಸಿತು. ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ 1 ರನ್ ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬಂದ ಅನೀಶ್ ಕೂಡ 1 ರನ್ ಗಳಿಸಿ ಔಟಾದರು.

ನಾಯಕ ಮಯಾಂಕ್ ಅಗರ್ವಾಲ್ 51 ರನ್ ಗಳಿಸುವ ಮೂಲಕ ಕರ್ನಾಟಕ ತಂಡಕ್ಕೆ ಆಸರೆಯಾದರು. ನಿಕಿನ್ ಜೋಸ್ 4 ರನ್ ಗಳಿಸಿ ಔಟಾದರೆ, ಕಿಶನ್ ಬೆದರೆ 61 ರನ್ ಗಳಿಸುವ ಮೂಲಕ ನಾಯಕನಿಗೆ ಜೊತೆಯಾದರು. ಶ್ರೀನಿವಾಸ್ ಶರತ್ 25, ಹಾರ್ದಿಕ್ ರಾಜ್ 9 ರನ್ ಗಳಿಸಿದರು.
ವೈಶಾಕ್ ಅರ್ಧಶತಕ
164 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ತಂಡಕ್ಕೆ ವೈಶಾಕ್ ವಿಜಯ್ ಕುಮಾರ್ ಆಸರೆಯಾದರು. 61 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 51 ರನ್ ಗಳಿಸಿರುವ ಅವರು ಶಶಿ ಕುಮಾರ್ ಅವರ ಜೊತೆ ಉತ್ತಮ ಜೊತೆಯಾಟ ಕಲೆ ಹಾಕಿದರು. ಶಶಿ ಕುಮಾರ್ ಉಪಯುಕ್ತ 19 ರನ್ ಗಳಿಸಿದರು.
ವಿಧ್ವತ್ ಕಾವೇರಪ್ಪ ಅಜೇಯ 4 ರನ್ ಗಳಿಸಿದ್ದು ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ 78 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 241 ರನ್ ಗಳಿಸಿದೆ.
ತ್ರಿಪುರ ಉತ್ತಮ ಬೌಲಿಂಗ್ ಮಾಡುವ ಮೂಲಕ ಕರ್ನಾಟಕ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಎಂಬಿ ಮುರಾ ಸಿಂಗ್ ಮತ್ತು ಎ.ಕೆ. ಸರ್ಕಾರ್ ತಲಾ ಎರಡು ವಿಕೆಟ್ ಪಡೆದರು. ರಾಣಾ ದತ್ತಾ 3 ವಿಕೆಟ್ ಪಡೆದು ಮಿಂಚಿದರೆ, ಬಿಬಿ ದೇಬನಾಥ್ ಒಂದು ವಿಕೆಟ್ ಪಡೆದುಕೊಂಡರು.
ಈ ಬಾರಿಯ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದು, ಒಂದು ಪಂದ್ಯ ಸೋತಿರುವ ಕರ್ನಾಟಕ. ಗೋವಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಈ ಪಂದ್ಯ ಕರ್ನಾಟಕ ತಂಡ ಮುಂದಿನ ಹಂತಕ್ಕೆ ತಲುಪಲು ಮುಖ್ಯವಾಗಿದ್ದು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.












Click it and Unblock the Notifications