Ranji Trophy: ಕರ್ನಾಟಕದ ವಿರುದ್ಧ ಹರಿಯಾಣ ಸಮಬಲದ ಹೋರಾಟ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 304 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಹರಿಯಾಣ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 232 ರನ್ ಗಳಿಸಿದೆ.
ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 267 ರನ್ ಗಳಿಸಿದ್ದ ಕರ್ನಾಟಕ, ಎರಡನೇ ದಿನ ಬೇಗನೆ ವಿಕೆಟ್ ಕಳೆದುಕೊಂಡಿತು. 101 ಓವರ್ ಗಳಲ್ಲಿ 304 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಯಶೋವರ್ಧನ್ ಪರಂತಾಪ್ (35 ರನ್), ಕೆಎಲ್ ಶ್ರೀಜಿತ್ (37 ರನ್) ಔಟ್ ಆದ ಬಳಿಕ ಕರ್ನಾಟಕ ಬೇಗನೆ ವಿಕೆಟ್ ಕಳೆದುಕೊಂಡಿತು. ಅನ್ಷುಲ್ ಕಾಂಬೋಜ್ ಮತ್ತು ಅನುಜ್ ಥಕ್ರಾಲ್ ತಲಾ 4 ವಿಕೆಟ್ ಪಡೆದರು.

ಹರಿಯಾಣ ಉತ್ತಮ ಆರಂಭ
ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಹರಿಯಾಣ ಕರ್ನಾಟಕ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದು ಉತ್ತಮ ಆರಂಭ ಪಡೆದುಕೊಂಡಿತು. ಲಕ್ಷ್ಯ ಸುಮನ್ ದಲಾಲ್ ಮತ್ತು ಅಂಕಿತ್ ಕುಮಾರ್ ಮೊದಲ ವಿಕೆಟ್‌ಗೆ 74 ರನ್ ಗಳಿಸಿದರು. ಲಕ್ಷ್ಯ ಸುಮನ್ 22 ರನ್ ಗಳಿಸಿ ಔಟಾದರು.
ಬಳಿಕ ಜೊತೆಯಾದ ಅಂಕಿತ್ ಕುಮಾರ್ ಮತ್ತು ಯುವರಾಜ್ ಸಿಂಗ್ ಮತ್ತೊಂದು ಉತ್ತಮ ಜೊತೆಯಾಟ ಆರಂಭಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 78 ರನ್ ಕಲೆಹಾಕಿತು. 33 ರನ್ ಗಳಿಸಿದ ಯುವರಾಜ್ ಸಿಂಗ್ ಔಟಾದರು. ಬಳಿಕ ಬಂದ ಹೆಚ್ ಜೆ ರಾಣಾ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಾಯಕ ಅಂಕಿತ್ ಕುಮಾರ್ ಶತಕ ಗಳಿಸುವ ಮೂಲಕ ಹರಿಯಾಣಕ್ಕೆ ಆಸರೆಯಾದರು 154 ಎಸೆತಗಳಲ್ಲಿ 19 ಬೌಂಡರಿ ಸಹಿತ 118 ರನ್ ಗಳಿಸಿದರು.
ನಿಶಾಂತ್ ಸಿಂಧು ಅಜೇಯ 35 ರನ್ ಗಳಿಸಿದ್ದು ವಿಕೆಟ್ ಕಾಯ್ದುಕೊಂಡಿದ್ದಾರೆ. ಧೀರು ಸಿಂಗ್ 8 ರನ್ ಗಳಿಸಿ ಔಟಾದರೆ, ಆರ್ ಪಿ ಶರ್ಮಾ ಅಜೇಯ 9 ರನ್ ಗಳಿಸಿದ್ದಾರೆ. ಯಶೋವರ್ಧನ್ ಪರಂತಾಪ್ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ಹಾರ್ದಿಕ್ ರಾಜ್ ಮತ್ತು ವಾಸುಕಿ ಕೌಶಿಕ್ ತಲಾ ಒಂದು ವಿಕೆಟ್ ಪಡೆದರು.
ಕ್ವಾರ್ಟರ್ ಫೈನಲ್ ಗೆಲ್ಲಲು ಕರ್ನಾಟಕ ಈ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ. ಆದರೆ ಸದ್ಯ ಹರಿಯಾಣ ಕೂಡ ಉತ್ತಮ ಸ್ಥಿತಿಯಲ್ಲಿದ್ದು ಪಂದ್ಯದ ಫಲಿತಾಂಶ ಅತಂತ್ರವಾಗಿದೆ. ಮೂರನೇ ದಿನ ಕರ್ನಾಟಕ ಬೇಗನೆ ಹರಿಯಾಣವನ್ನು ಆಲೌಟ್ ಮಾಡಿ ಇನ್ನಿಂಗ್ಸ್ ಮುನ್ನಡೆ ಪಡೆದರೆ ದೊಡ್ಡ ಗೆಲುವು ಸಾಧಿಸಲು ಯೋಜಿಸಬಹುದು.












Click it and Unblock the Notifications