IPL Auction 2025: ಮೆಗಾ ಹರಾಜಿನಲ್ಲಿರುವ ಕರ್ನಾಟಕ ಕ್ರಿಕೆಟಿಗರು
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿಗೆ ದಿನಗಣನೆ ಆರಂಭವಾಗಿದೆ. ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ. 1500ಕ್ಕೂ ಹೆಚ್ಚು ಕ್ರಿಕೆಟಿಗರು ಮೆಗಾ ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ತೋರಿಸಿದ್ದರು. ಐಪಿಎಲ್ ಆಡಳಿಯ ಮಂಡಳಿ ಇದೀಗ 1500ಕ್ಕಿಂತ ಹೆಚ್ಚು ಆಟಗಾರರ ಪಟ್ಟಿಯನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, ಹರಾಜಿನಲ್ಲಿ 574 ಕ್ರಿಕೆಟಿಗರು ಅಂತಿಮವಾಗಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಾ ಫ್ರಾಂಚೈಸಿಗಳಿಂದ ಒಟ್ಟು ಗರಿಷ್ಠ 204 ಆಟಗಾರರನ್ನು ಖರೀದಿ ಮಾಡಲು ಅವಕಾಶವಿದೆ.
ಈ ಬಾರಿ ಮೆಗಾ ಹರಾಜಿನಲ್ಲಿ ಕನ್ನಡಿಗರು ಕೂಡ ಗಮನ ಸೆಳೆಯುತ್ತಿದ್ದಾರೆ. ಒಟ್ಟು 24 ಕರ್ನಾಟಕದ ಆಟಗಾರರು ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2 ಕೋಟಿ ಮೂಲಬೆಲೆಯಿಂದ 30 ಲಕ್ಷ ಮೂಲ ಬೆಲೆಯವರೆಗೆ ನಿಗದಿಯಾಗಿದ್ದು ವಿವಿಧ ತಂಡಗಳಲ್ಲಿ ಮಿಂಚಲು ಸಿದ್ದವಾಗಿದ್ದಾರೆ.

ಹರಾಜಿನಲ್ಲಿರುವ ಕನ್ನಡಿಗರು ಯಾರು?
ಕೆಎಲ್ ರಾಹುಲ್ ಈ ಬಾರಿ ಮೆಗಾ ಹರಾಜಿನಲ್ಲಿ ಗಮನ ಸೆಳೆಯುತ್ತಿರುವ ಆಟಗಾರ. ಎಲ್‌ಎಸ್‌ಜಿಯಿಂದ ಹೊರ ಬಂದ ಬಳಿಕ ಕೆಎಲ್ ರಾಹುಲ್ ಯಾವ ತಂಡವನ್ನು ಸೇರುತ್ತಾರೆ ಎನ್ನುವ ಕುತೂಹಲವಿದೆ. ಆರ್ ಸಿಬಿ ತಂಡಕ್ಕೆ ಬರಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಕೆಎಲ್ ರಾಹುಲ್ ಕೂಡ ಹಲವು ಬಾರಿ ಆರ್ ಸಿಬಿ ನನ್ನ ನೆಚ್ಚಿನ ತಂಡ ಎಂದೇ ಹೇಳಿದ್ದಾರೆ. ಕೆಎಲ್ ರಾಹುಲ್ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದು ದಾಖಲೆಯ ಮೊತ್ತಕ್ಕೆ ಹರಾಜಾಗುವ ಸಾಧ್ಯತೆ ಇದೆ.
ಮನೀಶ್ ಪಾಂಡೆ ಕೂಡ ಈ ಬಾರಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಕೆಕೆಆರ್ ತಂಡದಲ್ಲಿದ್ದ ಅವರು, ಈ ಬಾರಿ ಮೆಗಾ ಹರಾಜಿನಲ್ಲಿ 75 ಲಕ್ಷ ರೂಪಾಯಿ ಮೂಲ ಬೆಲೆ ನಿಗದಿಪಡಿಸಿದ್ದಾರೆ. ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಕೂಡ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು 1 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದಾರೆ. ದೇವದತ್ ಪಡಿಕ್ಕಲ್ 2 ಕೋಟಿ ಮೂಲ ಬೆಲೆ ಹೊಂದಿದ್ದಾರೆ. ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಕೂಡ 2 ಕೋಟಿ ಮೂಲ ಬೆಲೆ ಹೊಂದಿದ್ದು ದೊಡ್ಡ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಇದೆ.
ಕರ್ನಾಟಕದ ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ₹30 ಲಕ್ಷ ಮೂಲ ಬೆಲೆ ಹೊಂದಿದ್ದು, ಕೋಟಿ ಕೋಟಿ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಗುಜರಾತಗ ಟೈಟಾನ್ಸ್ ಪರವಾಗಿ ಆಡಿರುವ ಅವರು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಮಾಜಿ ಆರ್ ಸಿಬಿ ವೇಗಿ ವೈಶಾಖ್ ವಿಜಯ್‌ಕುಮಾರ್ ಕೂಡ 30 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದು ಮತ್ತೆ ಆರ್ ಸಿಬಿ ಸೇರುವ ಸಾಧ್ಯತೆ ಹೆಚ್ಚಾಗಿದೆ.
ಮಯಾಂಕ್ ಅಗರ್ವಾಲ್ ₹1 ಕೋಟಿ, ವಿಕೆಟ್ ಕೀಪರ್ ಬ್ಯಾಟರ್ ಲವನಿತ್ ಸಿಸೋಡಿಯಾ 30 ಲಕ್ಷ ರೂಪಾಯಿ, ಎಲ್‌ಆರ್ ಚೇತನ್, ಬಿಆರ್ ಶರತ್ ಕುಮಾರ್, ಸಮರನ್ ರವಿಚಂದ್ರನ್, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಶ್ರೀಜಿತ್ ಕೃಷ್ಣನ್, ಮನ್ವಂತ್ ಕುಮಾರ್ ಎಲ್, ದೀಪಕ್ ದೇವಾಡಿಗ, ಹಾರ್ದಿಕ್ ರಾಜ್, ವಿದ್ಯಾದರ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್, ವಿದ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಮತ್ತು ಅಭಿಲಾಷ್ ಶೆಟ್ಟಿ 30 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿರುವ ಕರ್ನಾಟಕದ ಆಟಗಾರರಾಗಿದ್ದಾರೆ.












Click it and Unblock the Notifications