ಬೆಂಗಳೂರು ಮೆಟ್ರೋದಲ್ಲಿ 'ಮೈಸೂರು ಎಕ್ಸ್‌ಪ್ರೆಸ್' ಪ್ರಯಾಣ, ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಸರಳತೆಗೆ ಮೆಚ್ಚುಗೆಗಳ ಸುರಿಮಳೆ
Javagal Srinath: ಸೆಲೆಬ್ರೆಟಿಗಳು ಒಂದಲ್ಲ ಒಂದು ವಿಚಾರಕ್ಕೆ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಟೀಮ್ ಇಂಡಿಯಾ ಮಾಜಿ ಸ್ಟಾರ್ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಅವರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಲಗೇಜ್ ಬ್ಯಾಗ್ ಹಿಡಿದು ಪ್ರಯಾಣ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅವರ ಸರಳತೆಗೆ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಸಾಮಾನ್ಯವಾಗಿ ಬಹುತೇಕ ಸೆಲೆಬ್ರೆಟಿಗಳು ತಮ್ಮ ಸ್ವಂತ ವಾಹನಗಳಲ್ಲಿ ಸಂಚಾರ ಮಾಡುತ್ತಾರೆ. ಆದರೆ ಈ ನಡುವೆ ಕೆಲವರು ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಈ ಸಾಲಿಗೆ ಟೀಮ್ ಇಂಡಿಯಾ ಮಾಜಿ ಸ್ಟಾರ್ ಕ್ರಿಕೆಟರ್, ಕನ್ನಡಿಗ ಜಾವಗಲ್ ಶ್ರೀನಾಥ್ ಅವರು ಸೇರಿದ್ದಾರೆ. ಸದ್ಯ ಈ ಫೋಟೋಗಳು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ.

ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ
ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಹಾಗೂ ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಟ್ರಾಲಿ ಬ್ಯಾಗ್ ಹಿಡಿದು ಸಾಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಯಾವುದೇ ಹಮ್ಮು-ಬಿಮ್ಮಿಲ್ಲದೆ ಅತ್ಯಂತ ಸರಳವಾಗಿ ಪ್ರಯಾಣಿಸಿದ 'ಮೈಸೂರು ಎಕ್ಸ್‌ಪ್ರೆಸ್' ನಡೆಗೆ ಕ್ರಿಕೆಟ್ ಪ್ರೇಮಿಗಳು ಮತ್ತು ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಸಾಧಾರಣ ಪ್ರಯಾಣಿಕನಂತೆ ಪ್ರಯಾಣಿಸಿದ ಶ್ರೀನಾಥ್
ವೈರಲ್ ಆಗಿರುವ ಫೋಟೋದಲ್ಲಿ, 'ಮೈಸೂರ್ ಎಕ್ಸ್‌ಪ್ರೆಸ್' ಅಂತಲೇ ಪ್ರಸಿದ್ಧಿಯಾಗಿರುವ ಜಾವಗಲ್ ಶ್ರೀನಾಥ್ ಅವರು ತಿಳಿನೀಲಿ ಬಣ್ಣದ ಶರ್ಟ್ ಮತ್ತು ಜೀನ್ಸ್ ಧರಿಸಿ, ಕಿವಿಗೆ ಇಯರ್‌ಬಡ್ಸ್ ಹಾಕಿಕೊಂಡು ತಮ್ಮ ಲಗೇಜ್ ಬ್ಯಾಗ್‌ನೊಂದಿಗೆ ಮೆಟ್ರೋ ರೈಲಿನಲ್ಲಿ ನಿಂತಿರುವುದು ಕಂಡುಬಂದಿದೆ. ತಮ್ಮ ಸುತ್ತಮುತ್ತ ಯಾವುದೇ ಕಾಯ್ದಿರಿಸಿದ ಸೀಟ್ ಇಲ್ಲದೆ ಅವರು ಸಾಮಾನ್ಯ ಪ್ರಯಾಣಿಕರಂತೆ ನಿಂತುಕೊಂಡೇ ಪ್ರಯಾಣಿಸಿ ಗಮನ ಸೆಳೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಭಾರಿ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಅಭಿಮಾನಿಗಳು, ಜಾವಗಲ್ ಶ್ರೀನಾಥ್ ಅವರ ಈ ಸರಳತೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. 'ಕ್ರೀಡಾ ಲೋಕದಲ್ಲಿ ಅಪಾರ ಸಾಧನೆ ಮತ್ತು ಖ್ಯಾತಿ ಗಳಿಸಿದ್ದರೂ, ಅದನ್ನು ತಮ್ಮ ದೈನಂದಿನ ಜೀವನದ ಮೇಲೆ ಪ್ರಭಾವ ಬೀರಲು ಬಿಡದ ನಡವಳಿಕೆ ಅವರದ್ದು,' ಎಂದು ಬಣ್ಣಿಸಿದ್ದಾರೆ.
ಕರ್ನಾಟಕದ ಇತರ ದಿಗ್ಗಜ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ವೆಂಕಟೇಶ್ ಪ್ರಸಾದ್ ಅವರ ಉದಾಹರಣೆ ನೀಡಿದ ಹಲವರು, 'ಕರ್ನಾಟಕದ ಈ ಕ್ರಿಕೆಟಿಗರು ಮೈದಾನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಿಜಜೀವನದಲ್ಲಿ ಅತ್ಯಂತ ಸರಳ ವ್ಯಕ್ತಿಗಳಾಗಿದ್ದಾರೆ,' ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ.
ಈ ಹಿಂದೆ ಕೂಡ ಮೈಸೂರು ರೈಲು ನಿಲ್ದಾಣದಲ್ಲಿ ಜಾವಗಲ್ ಶ್ರೀನಾಥ್ ಅವರು ಸಾಮಾನ್ಯರಂತೆ ಬೆನ್ನಿಗೆ ಬ್ಯಾಗ್ ಹಾಕಿಕೊಂಡು ರೈಲಿಗಾಗಿ ಕಾಯುತ್ತಿದ್ದ ಫೋಟೋ ವೈರಲ್ ಆಗಿದ್ದನ್ನು ಹಲವರು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಅವರ ಈ ಸರಳ ನಡೆಗೆ ಸಲಾಂ ಅಂತಾ ಹೇಳಿದ್ದಾರೆ.
ಕ್ರಿಕೆಟ್‌ನಲ್ಲಿ ಜಾವಗಲ್ ಶ್ರೀನಾಥ್ ಸಾಧನೆ ಏನು?
ಭಾರತ ತಂಡದ ಪರ 67 ಟೆಸ್ಟ್ ಹಾಗೂ 229 ಏಕದಿನ ಪಂದ್ಯಗಳನ್ನು ಆಡಿರುವ ಜಾವಗಲ್ ಶ್ರೀನಾಥ್ ಅವರು, 1990ರ ದಶಕದಲ್ಲಿ ಭಾರತದ ಪ್ರಮುಖ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಆಟಗಾರನಾಗಿ ನಿವೃತ್ತರಾದ ಬಳಿಕವೂ ಕ್ರಿಕೆಟ್‌ನಿಂದ ದೂರವಾಗದ ಅವರು, ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿಯಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಪ್ರಸಿದ್ಧಿಯ ಶೋಕಿ ಇಲ್ಲದೆ, ತಮ್ಮದೇ ರಾಜ್ಯದಲ್ಲಿ ಸಾಮಾನ್ಯ ನಾಗರಿಕನಂತೆ ಬದುಕುವ ಜಾವಗಲ್ ಶ್ರೀನಾಥ್ ಅವರ ಈ ನಡೆ ಇಂದಿನ ತಲೆಮಾರಿಗೆ ಮಾದರಿಯಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದ್ದಾರೆ. ಇತ್ತೀಚೆಗಷ್ಟೇ ಅನಿಲ್ ಕುಂಬ್ಳೆ ಅವರು ಅವರು ಸಹ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಬೆಳೆಸಿ ಭಾರಿ ಮೆಚ್ಚುಗೆಗೆ ಪಾತ್ರರಾಗಿದ್ದರು.


Click it and Unblock the Notifications
