Ind Vs Eng: ಇಂಗ್ಲೆಂಡ್ ವಿರುದ್ಧ ಸರಣಿ; ಭಾರತ ತಂಡಕ್ಕೆ ಬುಮ್ರಾ ಶಾಕ್!
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 1-3 ಅಂತರದಲ್ಲಿ ಸೋತಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕನಸು ಭಗ್ನವಾಗಿದೆ. ಭಾರತ ಈಗ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯತ್ತ ಕಣ್ಣಿಟ್ಟಿದೆ. ಅದಕ್ಕೂ ಮುನ್ನ ಭಾರತ ಇಂಗ್ಲೆಂಡ್ ವಿರುದ್ಧ 5 ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲಿದೆ.
ಸಿಡ್ನಿಯಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಕಾರಣ ಮೈದಾನ ತೊರೆದಿದ್ದರು. ಬಳಿಕ ಅವರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಬೌಲಿಂಗ್ ಮಾಡಲು ಕೂಡ ಸಾಧ್ಯವಾಗಲಿಲ್ಲ. ಬುಮ್ರಾ ಗಾಯದ ಪ್ರಮಾಣ ಎಷ್ಟಿದೆ, ಅವರಿಗೆ ಇನ್ನೆಷ್ಟು ದಿನ ವಿಶ್ರಾಂತಿ ಬೇಕು ಎನ್ನುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಆದರೆ, ಜಸ್ಪ್ರೀತ್ ಬುಮ್ರಾ ಅವರ ಗಾಯದ ಸಮಸ್ಯೆ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬುಮ್ರಾಗೆ ಚಿಕಿತ್ಸೆಯ ಅಗತ್ಯವಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವುದು ಕೂಡ ಅನುಮಾನವಾಗಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಅವರು ಆಡುವುದು ಕಷ್ಟ ಎನ್ನಲಾಗಿದೆ.
ಎನ್‌ಸಿಎ ಅನುಮತಿ ಬೇಕು..
ರೇವ್‌ಸ್ಪೋರ್ಟ್ಸ್ ವರದಿ ಮಾಡಿರುವ ಪ್ರಕಾರ, ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆ ಅಂದುಕೊಂಡಷ್ಟು ಸುಲಭವಾಗಿಲ್ಲ. ಆಯ್ಕೆದಾರರು ಅವರ ಫಿಟ್‌ನೆಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾರನ್ನು ಹೊರಗಿಡಲು ಆಯ್ಕೆದಾರರು ತೀರ್ಮಾನಿಸಿದ್ದು, ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಾರಾ ಇಲ್ಲವಾ ಎನ್ನುವ ಅನುಮಾನ ಶುರುವಾಗಿದೆ.
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಜಸ್ಪ್ರೀತ್ ಬುಮ್ರಾ ಆಡಬೇಕು ಎಂದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ವೈದ್ಯಕೀಯ ಸಿಬ್ಬಂದಿಯಿಂದ ತಂಡದ ಮ್ಯಾನೇಜ್‌ಮೆಂಟ್ ಅನುಮತಿ ಪಡೆಯಬೇಕಾಗುತ್ತದೆ.
ಸಿಡ್ನಿ ಟೆಸ್ಟ್ ಬಳಿಕ ಮಾತನಾಡಿದ್ದ ಜಸ್ಪ್ರೀತ್ ಬುಮ್ರಾ, "ನನಗೆ ನಿರಾಸೆಯಾಗಿದೆ, ಆದರೆ ನಿಮ್ಮ ದೇಹವನ್ನು ನೀವು ಗೌರವಿಸಬೇಕು ಅದರ ವಿರುದ್ಧ ಹೋರಾಡಲು ಸಾಧ್ಯವಿಲ್ಲ. ನಾವು ಅದನ್ನು ಒಪ್ಪಿಕೊಳ್ಳಬೇಕು" ಎಂದು ಹೇಳಿದ್ದರು.
ಮೊಹಮ್ಮದ್ ಶಮಿ ವಾಪಸ್?
ಬುಮ್ರಾ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಕಣಕ್ಕಿಳಿಯುವ ಸಾಧ್ಯತೆ ಇದೆ. ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಅವರು ಬೆಂಗಾಳ ತಂಡದ ಪರವಾಗಿ ಆಡುತ್ತಿದ್ದು ಈಗಾಗಲೇ ಫಿಟ್ ಆಗಿರುವ ಸೂಚನೆ ಕೊಟ್ಟಿದ್ದಾರೆ. ಕುಲದೀಪ್ ಯಾದವ್ ಕೂಡ ತಂಡಕ್ಕೆ ವಾಪಸಾತಿ ಮಾಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ನಿತೀಶ್ ಕುಮಾರ್ ರೆಡ್ಡಿ ಕೂಡ ಆಯ್ಕೆದಾರರ ಗಮನ ಸೆಳೆದಿದ್ದು ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಅವಕಾಶ ಪಡೆಯುವ ವಿಶ್ವಾಸದಲ್ಲಿದ್ದಾರೆ.












Click it and Unblock the Notifications