RCB Jacob Bethel: 'ಆರ್‌ಸಿಬಿ ಬಿಟ್ಟು ಓಡಿ ಬಾ': ಬೆಥೆಲ್‌ಗೆ ಸಲಹೆ ಕೊಟ್ಟ ಕುಕ್‌ಗೆ ಐಪಿಎಲ್‌ ಬಗ್ಗೆ ಪಾಠ ಮಾಡಿದ ಪೀಟರ್ಸನ್

Jacob Bethell: ಐಪಿಎಲ್‌ 2026ರಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಬಲಿಷ್ಠ ತಂಡವನ್ನೇ ಹೊಂದಿದೆ. ಆದರೆ, ಯುವ ಆಟಗಾರ ಜೇಕಬ್ ಬೆಥೆಲ್ ಅವರಿಗೆ ತಂಡದಲ್ಲಿದ್ದರೂ ಆಡುವ ಅವಕಾಶ ಸಿಗುತ್ತಿಲ್ಲ, ಬದಲಿಗೆ ಬೆಂಚ್ ಕಾಯುತ್ತಿದ್ದಾರೆ. ಈ ಬಗ್ಗೆ ಇಂಗ್ಲೆಂಡ್‌ನ ಮಾಜಿ ಆಟಗಾರರಾದ ಕೆವಿನ್ ಪೀಟರ್ಸನ್ ಮತ್ತು ಅಲಸ್ಟೇರ್ ಕುಕ್ ನಡುವೆ ವಾಕ್ಸಮರವೇ ನಡೆದಿದೆ.

ಆರ್‌ಸಿಬಿ ತಂಡದ ಆಲ್‌ರೌಂಡರ್ ಜೇಕಬ್ ಬೆಥೆಲ್ ಅವರಿಗೆ ಐಪಿಎಲ್ ತೊರೆದು ಕೌಂಟಿ ಕ್ರಿಕೆಟ್‌ಗೆ ಮರಳುವಂತೆ ಅಲಸ್ಟೈರ್ ಕುಕ್ ನೀಡಿದ್ದ ಸಲಹೆಯನ್ನು ಕೆವಿನ್ ಪೀಟರ್ಸನ್ ತೀವ್ರವಾಗಿ ಖಂಡಿಸಿದ್ದಾರೆ. 2026ರ ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಬೆಥೆಲ್ ಅವರನ್ನು ಆರ್‌ಸಿಬಿ ಈ ಬಾರಿಯ ಐಪಿಎಲ್‌ಗಾಗಿ ಉಳಿಸಿಕೊಂಡಿತ್ತು. ಆದರೆ, ಬೆಥೆಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಇದುವರೆಗೆ ಅವಕಾಶ ಸಿಕ್ಕಿಲ್ಲ.

Jacob Bethell IPL 2026 Pietersen vs Cook Clash Over RCB Star Sitting on Bench Goes Huge Viral

ಅಲಸ್ಟೇರ್ ಕುಕ್‌ಗೆ ಪೀಟರ್ಸನ್ ಕೌಂಟರ್

ಈ ಬಗ್ಗೆ ಮಾತನಾಡಿದ್ದ ಅಲಸ್ಟೇರ್ ಕುಕ್, "ಬೆಂಚ್‌ ಕಾಯುವ ಬದಲು ಬೆಥೆಲ್‌ ಇಂಗ್ಲೆಂಡ್‌ಗೆ ಮರಳಿ ಕೌಂಟಿ ಕ್ರಿಕೆಟ್ ಆಡುವುದು ಉತ್ತಮ," ಎಂಬ ಸಲಹೆ ನೀಡಿದ್ದರು. ಕುಕ್ ಅವರ ಈ ಮಾತಿನಿಂದ ಕೆರಳಿದ ಪೀಟರ್ಸನ್, ಯುವ ಆಟಗಾರರಿಗೆ ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಸಿಗುವ ಅನುಭವ ಮತ್ತು ತರಬೇತಿ ಕೌಂಟಿ ಕ್ರಿಕೆಟ್‌ಗಿಂತ ಮೌಲ್ಯಯುತವಾದುದು. ವಿಶ್ವದ ಶ್ರೇಷ್ಠ ಆಟಗಾರರ ಜೊತೆ ಇರುವುದು ಬೆಥೆಲ್ ಕ್ರಿಕೆಟ್‌ ವೃತ್ತುಜೀವನಕ್ಕೆ ತುಂಬಾ ಸಹಕಾರಿಯಾಗಲಿದೆ," ಎಂದು ಅವರು ವಾದಿಸಿದ್ದಾರೆ.

ಬೆಥೆಲ್ ಸದ್ಯ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರೂ, ತಂಡದ ಸಮತೋಲನದ ಕಾರಣದಿಂದ ಹೊರಗುಳಿಯಬೇಕಾಗಿ ಬಂದಿದೆ. ಜೇಕಬ್ ಬೆಥೆಲ್ 2026ರ ಟಿ20 ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ನೇಪಾಳ ವಿರುದ್ಧ ಅರ್ಧಶತಕ (55 ರನ್) ಹಾಗೂ ಭಾರತದ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ 45 ಎಸೆತಗಳಲ್ಲಿ ಭರ್ಜರಿ ಶತಕ (105 ರನ್) ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು.

ಅಲಸ್ಟೇರ್‌ ಕುಕ್ ಅಸಮಾಧಾನ

ಆದರೂ ಸಹ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ವಿದೇಶಿ ಆಟಗಾರರ ಕೋಟಾದಲ್ಲಿ ಹೆಚ್ಚಿನ ಬದಲಾವಣೆ ಮಾಡದ ಕಾರಣ, ಬೆಥೆಲ್ ಈ ಸೀಸನ್‌ನಲ್ಲಿ ಇನ್ನೂ ಮೈದಾನಕ್ಕಿಳಿಯಲು ಸಾಧ್ಯವಾಗಿಲ್ಲ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೇರ್ ಕುಕ್ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ಬೆಥೆಲ್ ಆರ್‌ಸಿಬಿಯಲ್ಲಿ ಬೆಂಚ್ ಕಾಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

"ಅವನು ಅಲ್ಲಿ ಸುಮ್ಮನೆ ಕುಳಿತಿದ್ದಾನೆ. ಅದರ ಬದಲು ಇಂಗ್ಲೆಂಡ್‌ಗೆ ಮರಳಿ ವಾರ್ವಿಕ್‌ ಶೈರ್ ಪರ ಆರಂಭಿಕನಾಗಿ ಕಣಕ್ಕಿಳಿದರೆ ಅದು ಇಂಗ್ಲೆಂಡ್ ತಂಡಕ್ಕೂ ಸಹಾಯವಾಗುತ್ತದೆ. ಐಪಿಎಲ್‌ನಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಕೌಂಟಿ ಕ್ರಿಕೆಟ್ ಆಡುವುದು ಉತ್ತಮ," ಎಂದು ಕುಕ್ ಹೇಳಿದ್ದಾರೆ.

ಕೆವಿನ್ ಪೀಟರ್ಸನ್ ತಿರುಗೇಟು

ಕುಕ್ ಅವರ ಈ ಸಲಹೆಗೆ ಕೆವಿನ್ ಪೀಟರ್ಸನ್ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿ ಕೆಂಡಕಾರಿದ್ದಾರೆ. "ಐಪಿಎಲ್‌ನಲ್ಲಿ ಇರುವುದು ಎಂದರೆ ಹೇಗಿರುತ್ತದೆ ಎಂಬುದು ಅಲಸ್ಟೇರ್‌ ಕುಕ್‌ಗೆ ಸ್ವಲ್ಪವೂ ತಿಳಿದಿಲ್ಲ. ವಿಶ್ವದ ಶ್ರೇಷ್ಠ ಆಟಗಾರರ ನಡುವೆ ಇರುವುದು ಎಂತಹ ಅನುಭವ ಎಂಬುದು ಅವರಿಗೆ ಗೊತ್ತಿಲ್ಲ. ಹಾಗಾಗಿ ಬೆಥೆಲ್ ವಿಷಯದಲ್ಲಿ ಕುಕ್ ಅವರ ಅಭಿಪ್ರಾಯಕ್ಕೆ ಯಾವುದೇ ಬೆಲೆ ಇಲ್ಲ. ಜೇಕಬ್ ನೀನು ಭಾರತದಲ್ಲೇ ಇರು. ಪಂದ್ಯ ಆಡದಿದ್ದರೂ ಸಹ ಇಲ್ಲಿ ಕಲಿಯುವ ವಿಷಯಗಳು ನಿನ್ನನ್ನು ಒಬ್ಬ ಉತ್ತಮ ಆಟಗಾರನನ್ನಾಗಿ ಮಾಡುತ್ತದೆ," ಎಂದು ಪೀಟರ್ಸನ್ ಹೇಳಿದ್ದಾರೆ.

ಬೆಥೆಲ್ ಇತ್ತೀಚೆಗೆ ನಡೆದ ಆಶಸ್ ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ತಮ್ಮ ಅದ್ಭುತ ಫಾರ್ಮ್ ಅನ್ನು ಸಾಬೀತುಪಡಿಸಿದ್ದಾರೆ. ಇನ್ನು ಕೆವಿನ್ ಪೀಟರ್ಸನ್ ಅವರ ಬಗ್ಗೆ ಹೇಳುವುದಾದರೆ, ಅವರು ಆರ್‌ಸಿಬಿ ತಂಡದ ಅತ್ಯಂತ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದರು. 2009ರಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಅವರು ಬರೋಬ್ಬರಿ 1.55 ಮಿಲಿಯನ್ ಅಮೇರಿಕನ್ ಡಾಲರ್ (ಆ ಸಮಯದಲ್ಲಿ ಸುಮಾರು ₹7.5 ಕೋಟಿಯಿಂದ ₹9.8 ಕೋಟಿ) ಮೊತ್ತಕ್ಕೆ ಮಾರಾಟವಾಗುವ ಮೂಲಕ ಅಂದಿನ ಕಾಲದ ದುಬಾರಿ ಆಟಗಾರ ಎನಿಸಿಕೊಂಡಿದ್ದರು.

ಇನ್ನೂ ಅಲಸ್ಟೇರ್‌ ಕುಕ್ ಅವರು ತಮ್ಮ ವೃತ್ತಿಜೀವನದಲ್ಲಿ ಒಮ್ಮೆಯೂ ಐಪಿಎಲ್‌ನಲ್ಲಿ ಆಡಿಲ್ಲ. ಅಷ್ಟೇ ಅಲ್ಲದೆ, ಅವರು ಇಂಗ್ಲೆಂಡ್ ಪರ ಕೇವಲ 4 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ, ಐಪಿಎಲ್‌ನ ಬಗ್ಗೆ ಕುಕ್‌ಗೆ ಅರಿವಿಲ್ಲ ಎಂದು ಪೀಟರ್ಸನ್ ಟೀಕಿಸಿದ್ದಾರೆ.

ಐಪಿಎಲ್‌ನಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ

ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವು ಸ್ಥಿರ ಪ್ರದರ್ಶನ ಕಾಯ್ದುಕೊಂಡಿದ್ದು, ಈವರೆಗೆ ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಕಂಡಿದ್ದರೆ, ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋಲನುಭವಿಸಿದೆ. ಹಾಲಿ ಚಾಂಪಿಯನ್ ಆಗಿರುವ ಬೆಂಗಳೂರು ತಂಡವು ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇಟ್ಟಿನಲ್ಲಿ ಬೆಥೆಲ್ ಅವರಂತಹ ಪ್ರತಿಭಾವಂತ ಆಟಗಾರರು ಬೆಂಚ್ ಕಾಯುತ್ತಿದ್ದರೂ, ತಂಡವು ಗೆಲುವಿನ ಓಟ ಮುಂದುವರಿಸಿರುವುದು ತಂಡದ ಬಲಿಷ್ಠತೆಯನ್ನು ಎತ್ತಿತೋರಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+