IPL 2027: ಡೆಲ್ಲಿ ಕ್ಯಾಪಿಟಲ್ಸ್ ನೂತನ ಹೆಡ್ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ
IPL 2027: ಐಪಿಎಲ್‌ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಮುಂಬರುವ 2027ನೇ ಆವೃತ್ತಿಗಾಗಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಭಾರತೀಯ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಅವರನ್ನು ನೂತನ ಮುಖ್ಯ ಕೋಚ್ ಆಗಿ ಅಧಿಕೃತವಾಗಿ ನೇಮಕಗೊಳಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಸೌರವ್ ಗಂಗೂಲಿ ಅವರು ಡೆಲ್ಲಿ ಫ್ರಾಂಚೈಸಿ ಜೊತೆ ಹಲವು ವರ್ಷಗಳಿಂದ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2019ರಲ್ಲಿ ಮೊದಲ ಬಾರಿಗೆ ಸಲಹೆಗಾರರಾಗಿ ಡಿಸಿ ಜೊತೆ ಕೈಜೋಡಿಸಿದ್ದರು. ಆ ಸೀಸನ್‌ನಲ್ಲಿ ತಂಡವು ಹಲವು ವರ್ಷಗಳ ಬಳಿಕ ಪ್ಲೇಆಫ್ ತಲುಪಿ ಸಾಧನೆ ಮಾಡಿತ್ತು.

ಸೌರವ್ ಗಂಗೂಲಿ - ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅವಿನಾಭಾವ ಸಂಬಂಧ
ಬಳಿಕ ಜಾಗತಿಕ ಮಟ್ಟದಲ್ಲಿ ಡೆಲ್ಲಿ ಫ್ರಾಂಚೈಸಿಯ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳ 'ಡೈರೆಕ್ಟರ್ ಆಫ್ ಕ್ರಿಕೆಟ್' ಆಗಿ ಜವಾಬ್ದಾರಿ ನಿಭಾಯಿಸಿದ್ದರು. ಇದೀಗ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಮುಖ್ಯ ಕೋಚ್ ಆಗಿ ಪೂರ್ಣ ಪ್ರಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಹೇಮಂಗ್ ಬದಾನಿ ಅವರಿಂದ ಚುಕ್ಕಾಣಿ ಪಡೆದುಕೊಂಡಿದ್ದಾರೆ.
ಸಂತಸ ವ್ಯಕ್ತಪಡಿಸಿದ ಸೌರವ್ ಗಂಗೂಲಿ
ನೇಮಕಾತಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸೌರವ್ ಗಂಗೂಲಿ ಅವರು, 'ಐಪಿಎಲ್‌ನಲ್ಲಿ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುತ್ತಿರುವುದು ನನಗೆ ಅಪಾರ ಸಂತೋಷ ಹಾಗೂ ಉತ್ಸಾಹ ತಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ಫ್ರಾಂಚೈಸಿ,' ಎಂದು ಹೇಳಿದ್ದಾರೆ.
'ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕರು, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಮತ್ತು ಆಟಗಾರರೊಂದಿಗೆ ನನಗೆ ವರ್ಷಗಳಿಂದ ಉತ್ತಮ ಬಾಂಧವ್ಯವಿದೆ. ನಮ್ಮ ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದು, ಹೊಸ ಸೀಸನ್‌ನಲ್ಲಿ ಪ್ರತಿಯೊಬ್ಬರ ಜೊತೆ ಕೆಲಸ ಮಾಡಿ, ಅತ್ಯಂತ ಬಲಿಷ್ಠ ತಂಡವನ್ನು ಕಟ್ಟಲು ನಾನು ಕಾತರನಾಗಿದ್ದೇನೆ,' ಎಂದು ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಹೇಳಿದ್ದೇನು?
ಡೆಲ್ಲಿ ಕ್ಯಾಪಿಟಲ್ಸ್ ಅಧ್ಯಕ್ಷ ಮತ್ತು ಸಹ-ಮಾಲೀಕ ಪಾರ್ಥ್ ಜಿಂದಾಲ್ ಪ್ರತಿಕ್ರಿಯಿಸಿ, 'ದಾದಾ ಯಾವಾಗಲೂ ಡೆಲ್ಲಿ ಕ್ಯಾಪಿಟಲ್ಸ್ ಕುಟುಂಬದ ಅವಿಭಾಜ್ಯ ಅಂಗ. ಭಾರತದ ಸಾರ್ವಕಾಲಿಕ ಶ್ರೇಷ್ಠ ನಾಯಕ ಹಾಗೂ ಸಮರ್ಥ ಆಡಳಿತಗಾರರೊಬ್ಬರು ಈಗ ನಮ್ಮ ತಂಡದ ಮುಖ್ಯ ಕೋಚ್ ಆಗಿ ಮೈದಾನಕ್ಕಿಳಿಯುತ್ತಿರುವುದು ಹೆಮ್ಮೆಯ ವಿಷಯ. ಅವರ ಅಪಾರ ಅನುಭವ, ದೂರದೃಷ್ಟಿ ಮತ್ತು ನಾಯಕತ್ವದ ಗುಣಗಳು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ನೆರವಾಗಲಿವೆ. ಆಟಗಾರರು ಅವರಿಂದ ಕಲಿಯಲು ಕಾತರರಾಗಿದ್ದಾರೆ,' ಎಂದಿದ್ದಾರೆ.
ಈಗಾಗಲೇ ತಮ್ಮ ಆಕ್ರಮಣಕಾರಿ ನಾಯಕತ್ವದಿಂದ ಭಾರತೀಯ ಕ್ರಿಕೆಟ್‌ನ ದಿಕ್ಕನ್ನೆ ಬದಲಾಯಿಸಿದ್ದ ಸೌರವ್ ಗಂಗೂಲಿ ಅವರು, ಇದೀಗ ಕೋಚಿಂಗ್ ರೂಪದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಐಪಿಎಲ್ ಟ್ರೋಫಿ ತಂದುಕೊಡುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸೌರವ್ ಗಂಗೂಲಿಗಿರುವ ಅನುಭವದ ವಿವರ
ಆಟಗಾರರಾಗಿ, ನಾಯಕರಾಗಿ, ಬಿಸಿಸಿಐ ಅಧ್ಯಕ್ಷರಾಗಿ ಹಾಗೂ ಮಾರ್ಗದರ್ಶಕರಾಗಿ ಕ್ರಿಕೆಟ್ ಜಗತ್ತನ್ನು ಆಳಿದ್ದ 'ದಾದಾ', ಇದೀಗ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಆಗಿ ಮೈದಾನಕ್ಕಿಳಿಯುತ್ತಿದ್ದಾರೆ. ಸೌರವ್ ಗಂಗೂಲಿ ಅವರಿಗೆ ಡೆಲ್ಲಿ ಫ್ರಾಂಚೈಸಿ ಹೊಸದೇನಲ್ಲ.
* 2019ರ ಸೀಸನ್: ಮೊದಲ ಬಾರಿಗೆ ರಿಕಿ ಪಾಂಟಿಂಗ್ ಅವರೊಂದಿಗೆ ಸಲಹೆಗಾರರಾಗಿ ಕೈಜೋಡಿಸಿ ತಂಡ ಪ್ಲೇಆಫ್ ತಲುಪಲು ನೆರವಾಗಿದ್ದರು.
* ಡೈರೆಕ್ಟರ್ ಆಫ್ ಕ್ರಿಕೆಟ್: JSW ಗ್ರೂಪ್‌ನ ಸಹ-ಮಾಲೀಕತ್ವದ ಅಡಿಯಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳ 'ಡೈರೆಕ್ಟರ್ ಆಫ್ ಕ್ರಿಕೆಟ್' ಆಗಿ ಕಾರ್ಯನಿರ್ವಹಿಸಿದ್ದರು.
* ದಕ್ಷಿಣ ಆಫ್ರಿಕಾ ಲೀಗ್ ಅನುಭವ: 2025ರ ಆಗಸ್ಟ್‌ನಲ್ಲಿ SA20 ಲೀಗ್‌ನ 'ಪ್ರಿಟೋರಿಯಾ ಕ್ಯಾಪಿಟಲ್ಸ್' ತಂಡದ ಮುಖ್ಯ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.


Click it and Unblock the Notifications
