ಪ್ಲೀಸ್.. ವೈಭವ್ ಸೂರ್ಯವಂಶಿ ಆಟ ಫಾಲೋ ಮಾಡ್ಬೇಡಿ: ಆರ್ಸಿಬಿ ಸ್ಟಾರ್, ಕನ್ನಡಿಗ ದೇವದತ್ ಪಡಿಕ್ಕಲ್ ಹೀಗ್ ಹೇಳೋದಾ?
Vaibhav Sooryavanshi: ಸದ್ಯ ನಡೆಯುತ್ತಿರುವ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿರುವ ದೇವದತ್ ಪಡಿಕ್ಕಲ್ ಅವರು ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ್ದಾರೆ. ಯಾರೂ ಸಹ ವೈಭವ್ ಆಟವನ್ನು ಫಾಲೋ ಮಾಡಬೇಡಿ ಎಂದು ಯುವ ಆಟಗಾರರಿಗೆ ಸಲಹೆ ಕೊಟ್ಟಿದ್ದಾರೆ. ಹಾಗಾದ್ರೆ ಅವರು ಹೀಗೆ ಹೇಳಲು ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಂದರ್ಶನವೊಂದರಲ್ಲಿ ಮಾತನಾಡಿದ ಕನ್ನಡಿಗ ದೇವದತ್ ಪಡಿಕ್ಕಲ್, "15 ವರ್ಷದ ವೈಭವ್ ಸೂರ್ಯವಂಶಿ ಅವರು ಅದ್ಭುತ ಪ್ರತಿಭೆ ಹೊಂದಿರುವ ಆಟಗಾರ. ಈ ವಯಸ್ಸಿನಲ್ಲಿ ಅವರು ಹೊಂದಿರುವ ಬ್ಯಾಟಿಂಗ್ ಶೈಲಿಯನ್ನು ಯಾರೂ ನಕಲು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಯಾರಾದರೂ ಅನುಕರಿಸಲು ಪ್ರಯತ್ನಿಸುವುದು ಮೂರ್ಖತನವಾಗುತ್ತದೆ. ಏಕೆಂದರೆ ಪ್ರತಿಯೊಬ್ಬ ಆಟಗಾರನಿಗೂ ತಮ್ಮದೇ ಆದ ಬಲ ಮತ್ತು ಆಟದ ವಿಧಾನವಿರುತ್ತದೆ," ಎಂದು ತಿಳಿಸಿದ್ದಾರೆ.

ದೇವದತ್ ಪಡಿಕ್ಕಲ್ ಮಹತ್ವದ ಸಲಹೆ
"ಕ್ರಿಕೆಟ್ನಲ್ಲಿ ಯಶಸ್ಸು ಸಾಧಿಸಲು ತಮ್ಮ ಶೈಲಿಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇನ್ನೊಬ್ಬರಂತೆ ಆಡಲು ಪ್ರಯತ್ನಿಸಿದರೆ ತಮ್ಮ ತನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಯುವ ಆಟಗಾರರು ತಮ್ಮ ಸಾಮರ್ಥ್ಯವನ್ನು ನಂಬಿಕೊಂಡು ಮುಂದೆ ಸಾಗಬೇಕು," ಎಂದು ಸಲಹೆ ನೀಡಿದ್ದಾರೆ.
ದಿಗ್ಗಜರ ಗಮನ ಸೆಳೆದ ವೈಭವ್ ಸೂರ್ಯವಂಶಿ
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. ಯುವ ಆಟಗಾರನಾಗಿದ್ದರೂ ಅವರು ಯಾವುದೇ ಭಯವಿಲ್ಲದೆ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ಕಾರಣಕ್ಕೆ ಹಲವರು ಅವರ ಆಟದ ಶೈಲಿಯನ್ನು ಅನುಸರಿಸಲು ಯತ್ನಿಸುತ್ತಿದ್ದಾರೆ. ಆದರೆ ದೇವದತ್ ಪಡಿಕ್ಕಲ್ ಅವರು "ಪ್ರತಿಯೊಬ್ಬ ಕ್ರಿಕೆಟಿಗನೂ ತನ್ನದೇ ಆದ ಸಾಮರ್ಥ್ಯ ಹೊಂದಿರುವುದು ತುಂಬಾ ಮುಖ್ಯ," ಎಂದು ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ.
ದೇವದತ್ ಪಡಿಕ್ಕಲ್ ಅವರು ಈ ಸೀಸನ್ನಲ್ಲಿ ಆರ್ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಮತ್ತೊಂದೆಡೆ ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಭವಿಷ್ಯದ ಸ್ಟಾರ್ ಆಟಗಾರನಾಗಿ ಹೊರಹೊಮ್ಮುತ್ತಿದ್ದಾರೆ. ಇಬ್ಬರೂ ಯುವ ಆಟಗಾರರ ಈ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.












Click it and Unblock the Notifications