Get Updates
Get notified of breaking news, exclusive insights, and must-see stories!

ಕ್ರಿಕೆಟ್ ಆಟ, ಬೆಟ್ಟಿಂಗ್ ದಂಧೆ, ಜೂಜಿನ ಮಜಾ ಇದೇ ಮಾರ್ಚ್ 28ರಿಂದ ಪ್ರಾರಂಭ: ವಿವೇಕಾನಂದ ಎಚ್.ಕೆ. ಮಹತ್ವದ ಸಂದೇಶ

IPL 2026: ಐಪಿಎಲ್‌ ಯುವ ಕ್ರಿಕೆಟಿಗರಿಗೆ ಒಂದು ಉತ್ತಮ ವೇದಿಯಾದರೆ, ಮತ್ತೊಂದೆಡೆ ಇದು ದೊಡ್ಡ ವ್ಯಾಪಾರದ ಜಾಲವಾಗಿ ಮಾರ್ಪಟ್ಟುಬಿಟ್ಟಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗೆಯೇ ಇದೀಗ ವಿಶ್ಲೇಷಕರೊಬ್ಬರು ಈ ಲೀಗ್‌ ಹಿಂದಿನ ಉದ್ಧೇಶ ಏನು ಎನ್ನುವ ಮಾಹಿತಿಯನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಅವರು ಏನು ಹೇಳಿದ್ದಾರೆಯೋ ಅದನ್ನ ಇಲ್ಲಿ ಯಥಾವತ್ತಾಗಿ ನಿಮ್ಮ ಮುಂದೆ ಇಡಲಾಗಿದೆ.

ಐಪಿಎಲ್ ಎಂಬುದು ಒಂದು ಕ್ರೀಡಾ ಚಟುವಟಿಕೆಯೇ ಅಲ್ಲ. ಅದು ಕ್ರಿಕೆಟ್ ಎಂಬ ಕ್ರೀಡೆಯ ರೂಪಾಂತರಗೊಂಡ ಜೂಜಾಟದ ಒಂದು ಪ್ರಕಾರ. ಕೆಲವು ಶ್ರೀಮಂತ ಸಂಸ್ಥೆಗಳು ಬಿಸಿಸಿಐ ಅಡಿಯಲ್ಲಿ ನೊಂದಾಯಿಸಿಕೊಂಡು, ಅದರ ನಿಯಮದ ಪ್ರಕಾರ ಫ್ರಾಂಚೈಸಿ ಅಥವಾ ಕ್ಲಬ್ ರೂಪದ ಆಕಾರ ಪಡೆದಿದೆ. ಈ ಮೂಲಕ ವಿಶ್ವದ ಪ್ರಖ್ಯಾತ ಕ್ರಿಕೆಟ್ ಆಟಗಾರರನ್ನು ವಸ್ತುವಿನ ರೀತಿಯಲ್ಲಿ ಹರಾಜಿನಲ್ಲಿ ಕೊಂಡುಕೊಳ್ಳುತ್ತಿದ್ದಾರೆ.

IPL 2026 Analyst Questions Commercialization Calls League a Betting-Driven Business Model

ಐಪಿಎಲ್‌ ಹಿಂದಿನ ಉದ್ದೇಶ ಏನು?

ವಸ್ತುವಿಗೆ ನೀಡುವ ರೀತಿಯಲ್ಲಿ ಆಟಗಾರರಿಗೆ ಬೆಲೆ ಫಿಕ್ಸ್‌ ಮಾಡಿ ತಂಡ ಕಟ್ಟುತ್ತಾರೆ. ಇದು ಕೇವಲ 20 ಓವರ್‌ಗಳ (120 ಎಸೆತಗಳ) ಆಟವನ್ನು ಆಡಿಸಿ ಜನರನ್ನು ಹುಚ್ಚೆಬ್ಬಿಸಿ ದುಡ್ಡು ಮಾಡುವ ವ್ಯಾಪಾರ, ಮನರಂಜನೆ, ವಿಕೃತತೆಯ ಒಂದು ರೂಪ. ಐಪಿಎಲ್ ಎಂಬುದು ಜೂಜಾಟ ಮಾತ್ರವಲ್ಲ, ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್, ಪೆಪ್ಸಿ, ಕೋಕ್, ಅನೇಕ ಕ್ಲಬ್, ಬಾರ್, ರೆಸಾರ್ಟ್, ರೆಸ್ಟೋರೆಂಟ್, ಕ್ಯಾಸಿನೊ ಮುಂತಾದ ಮನರಂಜನಾ ಉದ್ಯಮಗಳ ಆರ್ಥಿಕ ಲಾಭ ಹಾಗೂ ಇಂದಿನ ಯುವ ಜನಾಂಗದ ಸೀಡ್ಲೆಸ್ ಮನಸ್ಥಿತಿಯ ಸಂಪೂರ್ಣ ಉಪಯೋಗ ಪಡೆಯುವ ಒಂದು ವಿಸ್ತೃತ ರೂಪ.

ಒಳ್ಳೆಯದಕ್ಕೆ ಆದ್ಯತೆ ಕೊಡದ ಸ್ಟಾರ್ ಆಟಗಾರರು

ಇಂತಹ ಜೂಜಾಟವನ್ನು ಇಡೀ ರಾಷ್ಟ್ರಕ್ಕೆ ಹುಚ್ಚಿನಂತೆ ಹಬ್ಬಿಸಿ, ಅದೊಂದು ಮಹಾನ್ ಸಾಧನೆಯಂತೆ ಬಿಂಬಿಸಿ, ಜನರನ್ನು ಮರಳು ಮಾಡುವ ದಂಧೆ. ಏಕೆಂದರೆ ಇದರಲ್ಲಿ ಭಾಗವಹಿಸಿದ ಆಟಗಾರರು ಬಹುತೇಕ ಜೂಜುಕೋರರು, ಜೂಜನ್ನು ಪ್ರೇರೇಪಿಸುವವರು, ಪೆಪ್ಸಿ ಕೋಲಾಗಳ ಜಾಹೀರಾತು ಮಾಡೆಲ್‌ಗಳು. ಇವರು ಒಂದು ದಿನಕ್ಕೂ ಎಳನೀರು, ಕಬ್ಬಿನ ಹಾಲು, ರಾಗಿ ಗಂಜಿ, ಸಿರಿಧಾನ್ಯಗಳ ಜ್ಯೂಸ್ ಅಥವಾ ಇನ್ಯಾವುದೇ ಆರೋಗ್ಯಕರ ಪೇಯಗಳ ಬಗ್ಗೆ ಜಾಹೀರಾತು ನೀಡಿಲ್ಲ. ಯಾವುದೇ ಸಾಮಾಜಿಕ ಜವಾಬ್ದಾರಿ ಮೆರೆದಿಲ್ಲ. ಕೇವಲ ಹೊಡಿಬಡಿ ಆಟ ಮತ್ತು ಹಣದ ಹಿಂದೆ ಹೋದವರು.

ಆದರೂ ಇಂತಹ ಆಟಗಳನ್ನೇ ಬೆಂಬಲಿಸುವವರ ಸಂಖ್ಯೆ ತುಂಬಾ ಇದೆ. ಐಪಿಎಲ್‌ ಬಂತೆಂದರೆ, ಸಾಲ ಮಾಡಿಯಾದರೂ ಮೊಬೈಲ್‌, ಟಿವಿಗಳಿಗೆ ರಿಚಾರ್ಚ್‌ ಮಾಡಿಸಿಕೊಳ್ಳುತ್ತಾರೆ. ಅಷ್ಟೇ ಸಾಲದೆಂಬಂತೆ ಪ್ರತಿ ಬಾಲ್‌, ಓವರ್, ಟಾಸ್‌, ವಿಕೆಟ್‌, ಕ್ಯಾಚ್‌ಗಳಿಗೂ ಸಹ ಬೆಟ್ಟಿಂಗ್ ಕಟ್ಟಿಕೊಳ್ಳುವವರು ಇದ್ದಾರೆ. ಈ ಜಾಲಕ್ಕೆ ಸಿಲುಕಿ ಎಷ್ಟೋ ಜನ ಕೊನೆಗೆ ಬೀದಿಗೆ ಬಂದ ಉದಾಹರಣೆಗಳಿವೆ. ಮತ್ತೊಂದೆಡೆ, ಇನ್ನೂ ಕೆಲವರು ಎಷ್ಟು ಖರ್ಚಾದರೂ ಪರ್ವಾಗಿಲ್ಲ ಸ್ಟೇಡಿಂಗೆ ಹೋಗಿ ಮ್ಯಾಚ್‌ ನೋಡಬೇಕೆಂದು ನಿರ್ಧಾರ ಮಾಡುತ್ತಾರೆ. ಜನರ ಈ ಹುಚ್ಚೇ ಕಳೆದ ಬಾರಿ 11 ಜನರ ಸಾವಿಗೆ, 25ಕ್ಕೂ ಹೆಚ್ಚು ಜನರ ಗಾಯಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಕ ವಿವೇಕಾನಂದ. ಎಚ್.ಕೆ. ಅವರು ಹೇಳಿದ್ದಾರೆ.

ಸಮಾಜದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ‌ಸಮಾಧಾನಕರ ಉತ್ತರ ಹೇಳಬಹುದು. ಆದರೆ ಈ ಕೊಳ್ಳುಬಾಕ ಸಂಸ್ಕೃತಿ - ಕಾರ್ಪೊರೇಟ್ ವ್ಯವಸ್ಥೆ, ಜನರ ದುರಾಸೆಯ ಪ್ರವೃತ್ತಿ, ಸುಲಭವಾಗಿ ಹಣ ಮಾಡಬೇಕೆಂಬ ಮನೋಭಾವ ಎಲ್ಲವೂ ಇರುವಾಗ ಅವರಿಗೆ ಇದೇ ಲಾಭದ ಮಾರ್ಗಗಳು. ಇದನ್ನು ಕೇವಲ ಹಣದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಧಃಪತನದ ಹಾದಿಯಾಗಿ ಗುರುತಿಸಬೇಕು.

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಟ್ಟಿಂಗ್ ದಂಧೆ

ಬೆಟ್ಟಿಂಗ್ ಆಡುವವರ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಉದ್ಯಮಿಗಳು ಹಣ ಮಾಡುತ್ತಾರೆ, ಬೆಟ್ಟಿಂಗ್ ಆಡುವವರು ಬಲೆಗೆ ಬೀಳುತ್ತಾರೆ ಅಷ್ಟೇ ಎಂಬಾಂತಾಗಿದೆ. ಜನರ ಮನಸ್ಥಿತಿಗಳು ಯಾವಾಗ ಬದಲಾಗಿ ಬೆಟ್ಟಿಂಗ್ ವಿಚಾರದಿಂದ ದೂರ ಸರಿಯುತ್ತಾರೋ ಆಗ ಮಾತ್ರ ಇಂತಹ ಜಾಲಗಳು ಮುಚ್ಚಲು ಸಾಧ್ಯ ಅಂತಲೂ ಹೇಳಿದ್ದಾರೆ.

ವಿವಿಧ ರೀತಿಯ ಆಕರ್ಷಕ ಲಾಭದ ಬೆಟ್ಟಿಂಗ್ ಆ್ಯಪ್‌ಗಳು ಮಾರುಕಟ್ಟೆಯಲ್ಲಿ ದಾಳಿ ಇಟ್ಟಿವೆ. ಸಾಕಷ್ಟು ಮಧ್ಯಮ ವರ್ಗದ ಜನರೇ ಇದರಲ್ಲಿ ಹಣ ಹೂಡುತ್ತಾರೆ. ಈ ಜೂಜಿನಲ್ಲಿ ಲಾಭ ಮಾಡಿ ಯಶಸ್ವಿಯಾದವರು‌ ತುಂಬಾ ತುಂಬಾ ಕಡಿಮೆ. ನಷ್ಟ ಅನುಭವಿಸಿ ಎಲ್ಲವನ್ನೂ ಕಳೆದುಕೊಂಡವರು ಕೊನೆಗೆ ಪ್ರಾಣವನ್ನೂ ಕಳೆದುಕೊಂಡವರೇ ಹೆಚ್ಚು.

ಪ್ರಾರಂಭದಲ್ಲಿ ಸರಳವಾಗಿ ಖುಷಿ ಖುಷಿಯಾಗಿ ಇದು ನಮ್ಮನ್ನು ಸೆಳೆಯತೊಡಗುತ್ತದೆ. ಹಾಗೆಯೇ ಮುಂದುವರೆದಂತೆ ಆಳಕ್ಕೆ ಎಳೆದೊಯ್ಯುತ್ತದೆ. ಕೊನೆಗೆ ನಮ್ಮ ಅಸ್ತಿತ್ವವನ್ನೇ ಮರೆಸುತ್ತದೆ. ನಮ್ಮ ಭಾವನೆಗಳನ್ನು ಬೆಟ್ಟಿಂಗ್ ನಿಯಂತ್ರಿಸುತ್ತದೆ. ಮಾನ ಮರ್ಯಾದೆ, ಕುಟುಂಬದ ಜವಾಬ್ದಾರಿ, ಭವಿಷ್ಯದ ಕಷ್ಟಗಳು ಯಾವುದೂ ಆ ಕ್ಷಣದಲ್ಲಿ ನೆನಪಾಗದಂತೆ ಮಾಡುತ್ತದೆ.

ಬೆಟ್ಟಿಂಗಾಗಿ ಏನೆಲ್ಲಾ ಮಾಡುತ್ತಾರೆ?

ಬೆಟ್ಟಿಂಗ್‌ ಜಾಲ ಹಣಕ್ಕಾಗಿ ಯಾರನ್ನು ಬೇಕಾದರೂ ಅಂಗಲಾಚುವ, ಏನನ್ನೂ ಬೇಕಾದರೂ ಮಾಡುವ, ಯಾವುದನ್ನು ಬೇಕಾದರೂ ಮಾರುವ ಮನಸ್ಥಿತಿ ಸೃಷ್ಟಿ ಮಾಡುತ್ತದೆ. ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕರು ಇದರಿಂದ ಹೊರಬರಲಾಗದೆ ಹತಾಶರಾಗುತ್ತಾರೆ. ಕೆಲವರು ದುಷ್ಚಟಗಳಿಗೆ ಬಲಿಯಾದರೆ, ಮತ್ತೆ ಕೆಲವರು ಎಲ್ಲವನ್ನೂ ಕಳೆದುಕೊಂಡು ತೀರಾ ಕೆಳಹಂತಕ್ಕೆ ಕುಸಿದರೆ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ಊರು ಬಿಟ್ಟು ಓಡಿ ಹೋಗುವವರು, ಸಂಸಾರದಿಂದ ವಿಚ್ಚೇದಿತರಾಗುವವರು, ಮಾನಸಿಕ ಖಿನ್ನತೆಗೆ ಒಳಗಾಗುವವರು ಸಹ ಸಾಕಷ್ಟು ಜನರಿದ್ದಾರೆ. ಇದು ಅಧೀಕೃತವಾದರು - ಅನಧೀಕೃತವಾದರೂ ಪರಿಣಾಮಗಳಲ್ಲಿ ಅಂತಹ ವ್ಯತ್ಯಾಸವೇನು ಆಗುವುದಿಲ್ಲ. ಕಾರಣ ಈ‌ ನೆಲದ ಸಂಸ್ಕೃತಿಗೆ ಈ‌ ಬೆಟ್ಟಿಂಗ್ ಒಗ್ಗುವುದಿಲ್ಲ. ಶ್ರಮ ಸಂಸ್ಕೃತಿ, ಕಾಯಕವೇ ಕೈಲಾಸ, ಉದ್ಯೋಗಂ ಪುರುಷ ಲಕ್ಷಣಂ, ಎಂಬ ಮಾತುಗಳ ಜೊತೆಗೆ ಅನೇಕ ಗಾದೆ ಮಾತುಗಳು ಈ ರೀತಿ ಸುಲಭವಾಗಿ ಬಂದ ಹಣ ಉಳಿಯುವುದಿಲ್ಲ ಅಥವಾ ಅದು ನಮ್ಮನ್ನು ದಾರಿ ತಪ್ಪಿಸುತ್ತದೆ ಎಂದೇ ಅನುಭವದಿಂದ ಸಾಬೀತಾಗಿದೆ.

ಈಗಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ, ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ, ಜನರ ಹುಚ್ಚು ಮನಸ್ಸಿನ ಹೊಳೆಯಲ್ಲಿ ಬೆಟ್ಟಿಂಗ್ ನಿಲ್ಲಿಸುವುದು ಅಥವಾ ಇಲ್ಲದಂತೆ ಮಾಡುವುದು ಕಷ್ಟ. ಅದಕ್ಕೆ ಬದಲಾಗಿ ನಾವುಗಳೇ ಆ ಚಟಕ್ಕೆ ಬಲಿಯಾಗದಂತೆ ಸ್ವಯಂ ನಿಯಂತ್ರಣ ಹೊಂದಬೇಕು ಮತ್ತು ನಮ್ಮ ‌ಸುತ್ತಮುತ್ತಲಿನ ಪರಿಚಿತರು ಸ್ನೇಹಿತರು ಇದಕ್ಕೆ ಬಲಿಯಾಗದಂತೆ ನಮ್ಮ ಕೈಲಾದಷ್ಟು ಪ್ರಯತ್ನಿಸಬೇಕು. ಸಂಘ ಸಂಸ್ಥೆಗಳನ್ನು ನಡೆಸುವವರು ತಮ್ಮ ಸದಸ್ಯರುಗಳಿಗೆ ಸಾಧ್ಯವಾದಷ್ಟು ಎಚ್ಚರಿಕೆ ನೀಡಬೇಕು ಎಂದು ಹೇಳಿದ್ದಾರೆ.

ಒಂದು ಅತ್ಯುತ್ತಮ ಆಟ ನಿಧಾನವಾಗಿ ಮನರಂಜನೆಯ ಹೆಸರಿನಲ್ಲಿ ದೊಡ್ಡ ಉದ್ಯಮವಾಗಿ ಬೆಳೆದು ಬೆಟ್ಟಿಂಗ್ ದಂಧೆಯಾಗಿ ಮಾರ್ಪಟ್ಟು ಒಂದು ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ದುರ್ಗತಿಗೆ ಕಾರಣವಾಗುತ್ತಿರುವುದು ನಮ್ಮ ಸಮಾಜದ ಭವಿಷ್ಯದ ಬಗ್ಗೆ ಚಿಂತಿಸುವಂತೆ ಮಾಡಿದೆ. ಆಡಳಿತಾತ್ಮಕ ವ್ಯವಸ್ಥೆ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ ಎಂದು ಹೇಳಿದ್ದಾರೆ.

ಕಿಚ್ಚು, ಹುಚ್ಚು ಪದ ಪರಿಚಯಿಸಿದ್ದು ಯಾರು?

ಐಪಿಎಲ್ ಅಥವಾ ಅದರಿಂದಾಗುವ ಬೆಟ್ಟಿಂಗ್ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿ ಎಂದು ನಾನು ಆಗಾಗ ಹೇಳುವಂತೆ ಇದು ಸೀಡ್ಲೆಸ್ ಯುವ ಜನಾಂಗ. ಯೋಚನಾ ಶಕ್ತಿಗೆ ಬದಲು ಗುಲಾಮಿ ಮನಸ್ಥಿತಿ ಬೆಳೆದಿದೆ. ಕಳೆದ ವರ್ಷ ಆರ್‌ಸಿಬಿ ಪ್ರಶಸ್ತಿ ಗೆದ್ದಾಗ 18 ವರ್ಷ ಕಾದಿದ್ದೇವೆ ಎಂಬ ಹುಚ್ಚನ್ನು, ಕಿಚ್ಚನ್ನು ಎಬ್ಬಿಸಿದ್ದು ಈ ಮಾಧ್ಯಮಗಳು ಅಂತಲೂ ಆಕ್ರೋಶ ಹೊರಹಾಕಿದ್ದಾರೆ.

ದಯವಿಟ್ಟು ಕನಿಷ್ಠ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು, ಯಾವುದು ಮಾಡಬೇಕು, ಯಾವುದು ಮಾಡಬಾರದು, ಯಾವುದು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಎಂಬುದನ್ನಾದರೂ ಆಲೋಚಿಸುವ ಪ್ರಬುದ್ಧತೆ ನಮ್ಮ ಜನರಿಗೆ ಬರಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದ್ದಾರೆ.

- ವಿವೇಕಾನಂದ ಎಚ್.ಕೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+