IPL 2025: ಐಪಿಎಲ್‌ನಲ್ಲಿ ಹಲವು ನಿಯಮಗಳ ಬದಲಾವಣೆ; ಮತ್ತಷ್ಟು ರೋಚಕವಾಗಲಿವೆ ಪಂದ್ಯಗಳು!
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಸೀಸನ್ ಸಮೀಪಿಸುತ್ತಿದೆ. ಐಪಿಎಲ್ ಆರಂಭಕ್ಕೆ ಎರಡು ದಿನಗಳ ಮೊದಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಫ್ರಾಂಚೈಸಿಗಳ ನಾಯಕರು ಮತ್ತು ರೆಫರಿಗಳ ಸಭೆಯನ್ನು ನಡೆಸಿತು. ಸಭೆಯ ಬಳಿಕ ಐಪಿಎಲ್‌ಗೆ ಸಂಬಂಧಪಟ್ಟಂತೆ ಹಲವು ನಿಯಮಗಳನ್ನು ಬದಲಾಯಿಸಿದ್ದು ಈ ಬಾರಿ ಪಂದ್ಯಗಳು ಮತ್ತಷ್ಟು ರೋಚಕವಾಗಿರುವ ಸಾಧ್ಯತೆ ಇದೆ.
ಮುಂಬೈನ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿಯಮಗಳ ಬದಲಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಚೆಂಡಿಗೆ ಎಂಜಲು ಹಚ್ಚುವುದು, ಇಂಪ್ಯಾಕ್ಟ್ ಪ್ಲೇಯರ್ ನಿಯಮ ಮುಂದುವರೆಸುವುದು ಸೇರಿದಂತೆ ಹಲವು ನಿಯಮಗಳಿಗೆ ಒಪ್ಪಿಗೆ ನೀಡಲಾಗಿದೆ. ಮಾರ್ಚ್ 22ರಿಂದ ಈ ಬಾರಿ ಐಪಿಎಲ್‌ಗೆ ಅದ್ದೂರಿ ಚಾಲನೆ ಸಿಗಲಿದೆ. ಹಾಗಾದರೆ ಏನೆಲ್ಲಾ ನಿಯಮ ಬದಲಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಎಂಜಲು ಹಚ್ಚುವುದು ಮೇಲಿನ ನಿಷೇಧ ತೆರವು
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಆಟಗಾರರು ಆರೋಗ್ಯ ಮತ್ತು ಸುರಕ್ಷತೆಯ ಭಾಗವಾಗಿ ಚೆಂಡಿನ ಹೊಳಪು ಹೆಚ್ಚಿಸಲು ಲಾಲಾರಸ ಅಥವಾ ಎಂಜಲು ಬಳಸಲು ನಿಷೇಧ ಹೇರಲಾಗಿತ್ತು. ಈಗ ಎಂಜಲು ಹಚ್ಚುವುದರ ಮೇಲಿದ್ದ ನಿಷೇಧವನ್ನು ಬಿಸಿಸಿಐ ತೆಗೆದುಹಾಕಿದೆ.
ನಾಯಕರ ಸಭೆಯಲ್ಲಿ ನಡೆದ ಚರ್ಚೆಗಳ ನಂತರ, ತಂಡದ ಬಹುಪಾಲು ನಾಯಕರು ನಿಯಮಗಳ ಬದಲಾವಣೆಗೆ ಬೆಂಬಲ ಕೊಟ್ಟಿದ್ದಾರೆ. ಇದರಿಂದ ಆಟಗಾರರಿಗೆ ಮತ್ತೊಮ್ಮೆ ಲಾಲಾರಸ ಬಳಸಲು ಬಿಸಿಸಿಐ ಅವಕಾಶ ನೀಡಲು ನಿರ್ಧರಿಸಿದೆ. ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತು ಟಿಮ್ ಸೌಥಿ ಸೇರಿದಂತೆ ಅನೇಕ ಆಟಗಾರರು ಸ್ವಿಂಗ್ ಮತ್ತು ರಿವರ್ಸ್ ಸ್ವಿಂಗ್ ಆಗಲು ಇದು ಸಹಕಾರಿಯಾಗಿದ್ದು, ಬಿಸಿಸಿಐ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಎರಡು ಚೆಂಡುಗಳ ಬಳಕೆ
ರಾತ್ರಿ ಪಂದ್ಯಗಳ ವೇಳೆ ಹೆಚ್ಚಾಗಿ ಇಬ್ಬನಿ ಬೀಳುವುದರಿಂದ ಚಂಡು ಹೆಚ್ಚಾಗಿ ಒದ್ದೆಯಾಗುತ್ತಿದ್ದು ಚೇಸಿಂಗ್ ಮಾಡುವ ತಂಡಕ್ಕೆ ಸುಲಭವಾಗುತ್ತಿತ್ತು. ಎರಡನೇ ಇನ್ನಿಂಗ್ಸ್ ಬೌಲಿಂಗ್ ಮಾಡಲು ಕಷ್ಟವಾಗುತ್ತಿತ್ತು. ಈ ಸಮಸ್ಯೆಯನ್ನು ಕಡಿಮೆ ಮಾಡಲು ಎರಡನೇ ಇನ್ನಿಂಗ್ಸ್‌ನಲ್ಲಿ ಹೊಸ ಚೆಂಡು ಬಳಕೆ ಮಾಡುವ ನಿಯಮ ಜಾರಿಗೆ ತರಲು ಬಿಸಿಸಿಐ ನಿರ್ಧರಿಸಿದೆ.
ಇಬ್ಬನಿ ಪರಿಸ್ಥಿತಿಗಳ ಆಧಾರದ ಮೇಲೆ ಚೆಂಡಿನ ಬದಲಾವಣೆ ಅಗತ್ಯವಿದೆಯೇ ಎಂದು ಪಂದ್ಯದ ಅಂಪೈರ್‌ಗಳು ನಿರ್ಧಾರ ಮಾಡಲಿದ್ದಾರೆ. ಇಬ್ಬನಿ ಬೀಳುವ ಸಂದರ್ಭದಲ್ಲಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡುತ್ತಿದ್ದರು. ಈಗ ಚೇಸಿಂಗ್ ಮಾಡುವ ತಂಡದ ಅನುಕೂಲವನ್ನು ಕಡಿಮೆ ಮಾಡಲಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮ ಯಥಾಸ್ಥಿತಿ
ಐಪಿಎಲ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಈ ಬಾರಿ ಕೂಡ ಮುಂದುವರೆಯಲಿದೆ. ತಂಡಗಳು ಪಂದ್ಯದ ಸಮಯದಲ್ಲಿ ತಲಾ ಒಬ್ಬ ಆಟಗಾರನನ್ನು ಬದಲಾಯಿಸಲು ಈ ನಿಯಮ ಅವಕಾಶ ಮಾಡಿಕೊಡುತ್ತದೆ. 2027 ರವರೆಗೆ, ಈ ನಿಯಮ ಮುಂದುವರೆಸಲು ಬಿಸಿಸಿಐ ಅನುಮೋದನೆ ನೀಡಿದೆ.
ಎತ್ತರ ಮತ್ತು ಆಫ್-ಸೈಡ್ ವೈಡ್‌ಗಳಿಗೆ ಡಿಆರ್‌ಎಸ್
ಆಫ್-ಸ್ಟಂಪ್‌ನ ಹೊರಗೆ ಎತ್ತರದ ವೈಡ್ ಮತ್ತು ವೈಡ್‌ಗಳಿಗೆ ಕರೆಗಳನ್ನು ಸೇರಿಸಲು ನಿರ್ಧಾರ ಪರಿಶೀಲನಾ ವ್ಯವಸ್ಥೆ (ಡಿಆರ್‌ಎಸ್) ಅನ್ನು ವಿಸ್ತರಣೆ ಮಾಡಲಾಗಿದೆ. ಹಾಕ್-ಐ ತಂತ್ರಜ್ಞಾನ ಮತ್ತು ಬಾಲ್ ಟ್ರ್ಯಾಕಿಂಗ್ ಬಳಕೆಯು ಅಂಪೈರ್‌ಗಳು ಈ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.












Click it and Unblock the Notifications