IPL 2023 :ಕ್ವಾಲಿಫೈಯರ್ 1, ಎಲಿಮಿನೇಟರ್ ಪಂದ್ಯಗಳಿಗೆ ಚೆನ್ನೈ ಆತಿಥ್ಯ: ಅಹಮದಾಬಾದ್‌ನಲ್ಲಿ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯ
ಇಂಡಿಯನ್ ಪ್ರೀಮಿಯರ್ ಲೀಗ್ 2023 ಆವೃತ್ತಿಯ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೇ 23 ಮತ್ತು ಮೇ 24ರಂದು ಚೆನ್ನೈನ ಚೆಪಾಕ್‌ನಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ. ಮೇ 26ರಂದು ಕ್ವಾಲಿಫೈಯರ್ 2 ಪಂದ್ಯ ನಡೆಯಲಿದ್ದು, ಮೇ 28ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಎರಡೂ ಪಂದ್ಯಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಐಪಿಎಲ್ 2023 ಲೀಗ್ ಹಂತದ ಪಂದ್ಯಗಳ ವೇಳಾಪಟ್ಟಿಯನ್ನು ಘೋಷಿಸಿದ್ದ ಬಿಸಿಸಿಐ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳು ನಡೆಯುವ ದಿನಾಂಕ ಮತ್ತು ಸ್ಥಳಗಳನ್ನು ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ, ಆದರೂ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತದೆ ಎಂದು ತಿಳಿಸಲಾಗಿತ್ತು. ಜೂನ್ 7ರಂದು ಭಾರತ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯವನ್ನಾಡಲಿದ್ದು, ಮೇ ಅಂತ್ಯದಲ್ಲಿ ಐಪಿಎಲ್ ಪಂದ್ಯಾವಳಿ ಮುಗಿಸಲು ನಿರ್ಧರಿಸಿದೆ.

ನಾಲ್ಕು ವರ್ಷಗಳ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಚೆನ್ನೈ ಚೆಪಾಕ್ ಅಂಗಳಕ್ಕೆ ವಾಪಸಾಗಿತ್ತು. ಎಂಎಸ್ ಧೋನಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಈಗ ಚೆನ್ನೈ ಸೂಪರ್ ಕಿಂಗ್ಸ್‌ನ ಲೀಗ್ ಪಂದ್ಯಗಳನ್ನು ಮಾತ್ರವಲ್ಲದೆ, ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ನೋಡುವ ಅದೃಷ್ಟ ಚೆನ್ನೈ ಕ್ರಿಕೆಟ್ ಅಭಿಮಾನಿಗಳ ಪಾಲಾಗಿದೆ.
ಗಿನ್ನೆಸ್ ದಾಖಲೆ ಸೇರಿರುವ 2022ರ ಫೈನಲ್ ಪಂದ್ಯ
ಕಳೆದ ವರ್ಷ ಕೂಡ ಐಪಿಎಲ್‌ನ ಕ್ವಾಲಿಫೈಯರ್ 2 ಮತ್ತು ಫೈನಲ್ ಪಂದ್ಯಗಳಿಗೆ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಿಕೊಂಡಿತ್ತು. ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಫೈನಲ್ ಪಂದ್ಯವನ್ನು 1,01,566 ಜನ ಕ್ರೀಡಾಂಗಣದಲ್ಲಿ ವೀಕ್ಷಣೆ ಮಾಡುವ ಮೂಲಕ ಅತಿ ಹೆಚ್ಚು ಮಂದಿ ಕ್ರೀಡಾಂಗಣದಲ್ಲಿ ವೀಕ್ಷಿಸಿದ ಕ್ರಿಕೆಟ್ ಪಂದ್ಯ ಎಂದು ಗಿನ್ನೆಸ್ ದಾಖಲೆ ಮಾಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ಒಂದು ವೇಳೆ ಪ್ಲೇ ಆಫ್‌ಗೆ ಪ್ರವೇಶಿಸಿದರೆ ತಂಡಕ್ಕೆ ವರದಾನವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿಯ ಐಪಿಎಲ್ ಭಾರಿ ಪೈಪೋಟಿಯಿಂದ ಕೂಡಿದ್ದು ಎಲ್ಲಾ ತಂಡಗಳು ಸಮಬಲದ ಹೋರಾಟ ನಡೆಸುತ್ತಿವೆ. 6 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ರಾಜಸ್ಥಾನ ರಾಯಲ್ಸ್ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್ ಕೂಡ 6 ಪಂದ್ಯಗಳಲ್ಲಿ 4 ಗೆಲುವು 2 ಸೋಲಿನೊಂದಿಗೆ 8 ಅಂಕಗಳನ್ನು ಗಳಿಸಿದ್ದರೂ, ರನ್ ರೇಟ್ ಕಡಿಮೆ ಇರುವುದರಿಂದ ಎರಡನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ 3ನೇ ಸ್ಥಾನದಲ್ಲಿದ್ದು, ಗುಜರಾತ್ ಟೈಟಾನ್ಸ್ 4ನೇ ಸ್ಥಾನದಲ್ಲಿದೆ. ಗುರುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಏರಿಕೆ ಕಂಡಿದೆ.












Click it and Unblock the Notifications