IPL 2023: ಅತಿಹೆಚ್ಚು 200+ ರನ್ ಹರಿದುಬಂದದ್ದು ಯಾವ ಸೀಸನ್‌ನಲ್ಲಿ?

ನಿನ್ನೆ ( ಮೇ 29 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದ ಮೂಲಕ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬಿದ್ದಿದೆ.
ಮೊನ್ನೆಯೇ ಮುಕ್ತಾಯಗೊಳ್ಳಬೇಕಿದ್ದ ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿದ ಕಾರಣ ನಿನ್ನೆಗೆ ಮುಂದೂಡಲ್ಪಟ್ಟಿತ್ತು. ಆದರೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡು ಎರಡನೇ ಇನ್ನಿಂಗ್ಸ್ ಆರಂಭಗೊಳ್ಳುತ್ತಿದ್ದಂತೆ ಮತ್ತೆ ಮಳೆ ಸುರಿಯಲಾರಂಭಿಸಿತು. ಮಳೆಯ ಹೊಡೆತಕ್ಕೆ ಪಂದ್ಯ ಐದು ಓವರ್ ಕಡಿತಗೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.
ಆದರೆ ಮಳೆಯ ಕಾರಣದಿಂದಾಗಿ 15 ಓವರ್‌ಗಳಿಗೆ ಪಂದ್ಯ ಕುಸಿದು ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 171 ರನ್ ಬಾರಿಸಬೇಕಾದ ಅಗತ್ಯವಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 15 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವನ್ನು ಕಂಡಿತು.
ಹೀಗೆ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡ 200ಕ್ಕಿಂತ ಹೆಚ್ಚು ರನ್ ಕಲೆಹಾಕಿದ ಪರಿಣಾಮ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 37ನೇ ಬಾರಿಗೆ 200ಕ್ಕಿಂತ ಹೆಚ್ಚು ರನ್‌ಗಳು ಹರಿದುಬಂತು. ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಬಾರಿ 200ಕ್ಕಿಂತ ಹೆಚ್ಚು ರನ್ ಹರಿದುಬಂದದ್ದು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿಯೇ ಎಂಬ ದಾಖಲೆ ಸಹ ಸೃಷ್ಟಿಯಾಯಿತು.
ಹೌದು, ಇಲ್ಲಿಯವರೆಗೂ ನಡೆದಿರುವ ಒಟ್ಟು 16 ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳ ಪೈಕಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿಯೇ ಅತಿಹೆಚ್ಚು ಬಾರಿ ಇನ್ನೂರಕ್ಕಿಂತ ಹೆಚ್ಚಿ ರನ್ ಹರಿದುಬಂದಿದೆ.
ಅತಿಹೆಚ್ಚು ಬಾರಿ 200+ ರನ್ ಹರಿದುಬಂದ ಟಾಪ್ 3 ಆವೃತ್ತಿಗಳ ಪಟ್ಟಿ ಈ ಕೆಳಕಂಡಂತಿದೆ..
* ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 37 ಇನ್ನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚಿನ ರನ್ ಹರಿದುಬಂದಿದೆ.
* 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 18 ಇನ್ನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚಿನ ರನ್ ಹರಿದುಬಂದಿತ್ತು.
* 2018ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 15 ಇನ್ನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚಿನ ರನ್ ಹರಿದುಬಂದಿತ್ತು.












Click it and Unblock the Notifications