IPL 2023: ಗಂಗೂಲಿಯನ್ನು ಅನ್‌ಫಾಲೋ ಮಾಡಿದ ಕೊಹ್ಲಿ: ಮತ್ತೊಂದು ವಿಡಿಯೋ ವೈರಲ್!
ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ ಜಟಾಪಟಿ ಸಖತ್ ಸದ್ದು ಮಾಡ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ನಡೆದು ಎರಡು ದಿನವಾಗಿದೆ. ಆದರೂ ಗಂಗೂಲಿ-ಕೊಹ್ಲಿ ನಡುವಿನ ಘಟನೆ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಈ ಬೆನ್ನಲ್ಲೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೇ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಗಂಗೂಲಿಯನ್ನು ಅನ್‌ಫಾಲೊ ಮಾಡಿದ್ದಾರೆ.
The way Virat Kohli looked at ganguly pic.twitter.com/pLoAzyn9EI
— itz_mksoni25 (@_itz_mksoni25) April 17, 2023
ಶನಿವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಅಬ್ಬರಿಸಿದ್ದರು. ಐಪಿಎಲ್ 2023ರ ಆವೃತ್ತಿಯಲ್ಲಿ ಕೊಹ್ಲಿ ಮೂರು ಅರ್ಧಶತಕ ಬಾರಿಸಿದ್ದಾರೆ. ಮೊದಲ ಎರಡು ಅರ್ಧಶತಕ ಗಳಿಸಿದ್ದಾಗ ಕೊಹ್ಲಿ ಹೆಚ್ಚಿನದಾಗಿ ಸಂಭ್ರಮಿಸಿರಲಿಲ್ಲ, ಆದರೆ ಡೆಲ್ಲಿ ವಿರುದ್ಧ ಅರ್ಧಶತಕ ಗಳಿಸಿದ ನಂತರ ಹಳೆಯ ಕೊಹ್ಲಿಯಂತೆ ಅಬ್ಬರಿಸಿದ್ದರು.

ನಂತರ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಡಗೌಟ್‌ನಲ್ಲಿ ಕುಳಿತಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ತೀಕ್ಷ್ಣವಾಗಿ ನೋಡುವ ಮೂಲಕ ಗಮನ ಸೆಳೆದಿದ್ದರು. ಮಾತ್ರವಲ್ಲದೆ ಪಂದ್ಯ ಮುಗಿದ ಬಳಿಕ ಎರಡೂ ತಂಡಗಳ ಆಟಗಾರರು, ಸಿಬ್ಬಂದಿ ಪರಸ್ಪರ ಕೈ ಕುಲುಕುವ ವೇಳೆಯಲ್ಲಿ ಕೂಡ ಕೊಹ್ಲಿ ಗಂಗೂಲಿಗೆ ಥ್ಯಾಂಕ್ಸ್ ಕೊಡುವುದನ್ನು ತಪ್ಪಿಸಿದ್ದರ, ರಿಕಿ ಪಾಂಟಿಂಗ್ ಕೊಹ್ಲಿ ಬಳಿ ಗಂಗೂಲಿ ಕೈ ಕುಲುಕಲು ಹೇಳಿದರು ಅವರು ಅದನ್ನು ನಿರಾಕರಿಸುವಂತೆ ಸನ್ನೆ ಮಾಡಿದ್ದು ವಿಡಿಯೋದಲ್ಲಿ ಕಂಡು ಬಂದಿತ್ತು.
ಭಾರಿ ಚರ್ಚೆಗೆ ಕಾರಣವಾಗಿದೆ ವಿಡಿಯೋ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಹಲವು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೆಲವರು ಕೊಹ್ಲಿ ಮಾಡಿದ್ದು ಸರಿ ಇದೆ ಎಂದರೆ, ಮತ್ತೆ ಕೆಲವರು ಗಂಗೂಲಿ ಪರವಾಗಿ ವಾದಿಸಿದ್ದರು. ಏನೇ ಆದರೂ ಕೊಹ್ಲಿ ತಮಗೆ ಯಾರಾದರೂ ಏನಾದರೂ ಕೊಟ್ಟರೆ ಅದನ್ನು ವಾಪಸ್ ಕೊಡ್ತಾರೆ ಎಂದು ಹೇಳಿದ್ದರು.
ಎರಡು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಕೊಹ್ಲಿ ಗಂಗೂಲಿಯನ್ನು ದಿಟ್ಟಿಸಿ ನೋಡುತ್ತಿರುವ ಮತ್ತೊಂದು ವಿಡಿಯೋ ಈಗ ಸಖತ್ ಸದ್ದು ಮಾಡ್ತಿದೆ. ಬ್ಯಾಟಿಂಗ್ ಆರಂಭಿಸಲು ಹೆಲ್ಮೆಟ್, ಪ್ಯಾಡ್ ಧರಿಸಿ ಕೊಹ್ಲಿ ಡಗೌಟ್‌ನಲ್ಲಿ ಕೂತಿರುವ ಸಂದರ್ಭದಲ್ಲಿ ಅವರ ಮುಂದೆಯೇ ಗಂಗೂಲಿ ಹಾದು ಹೋಗುತ್ತಾರೆ, ಗಂಗೂಲಿ ಕೊಹ್ಲಿ ಕಡೆ ತಿರುಗಿ ನೋಡದೆ ಮುಂದೆ ಸಾಗಿದರೆ, ಕೊಹ್ಲಿ ಮಾತ್ರ ಗಂಗೂಲಿಯನ್ನು ಗುರಾಯಿಸುಂತೆ ನೋಡುತ್ತಾರೆ. ನಂತರ ಬರುವ ಇತರೆ ಡೆಲ್ಲಿ ಆಟಗಾರರ ಜೊತೆ ನಗುತ್ತಲೇ ಮಾತನಾಡಿದ್ದಾರೆ.

ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ
ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ಮತ್ತು ಭಾರತ ತಂಡದ ಮಾಜಿ ನಾಯಕ ಕೊಹ್ಲಿ ನಡುವೆ ಯಾವುದೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 2021ರ ನವೆಂಬರ್ ತಿಂಗಳಿನಿಂದ ಈ ರೀತಿ ಜಟಾಪಟಿ ನಡೆಯುತ್ತಿದೆ ಎನ್ನುವುದು ತಿಳಿದುಬಂದಿದೆ. ಈ ಘಟನೆ ನಡೆದ ನಂತರ ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಂಗೂಲಿ ಅವರನ್ನು ಅನ್‌ಫಾಲೋ ಮಾಡಿದ್ದಾರೆ.
ಇಬ್ಬರ ನಡುವೆ ಜಟಾಪಟಿ ಇದ್ದರೂ ಅದು ಹೊರಜಗತ್ತಿಗೆ ಅಷ್ಟಾಗಿ ಗೊತ್ತಿರಲಿಲ್ಲ, ಆದರೆ, ಮಾಜಿ ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಚೇತನ್ ಶರ್ಮಾ ಕುಟುಕು ಕಾರ್ಯಾಚರಣೆಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಗಂಗೂಲಿ ಕಾರಣ, ಅವರಿಗೆ ಕೊಹ್ಲಿ ಕಂಡರೆ ದ್ವೇಷ ಇದೆ ಎನ್ನುವ ಗಂಭೀರ ಆರೋಪ ಮಾಡಿದ್ದರು.












Click it and Unblock the Notifications