India vs West Indies: ಭಾರತಕ್ಕಿಂದು ಐತಿಹಾಸಿಕ ಪಂದ್ಯ: ಗೆದ್ದು ಬೀಗುತ್ತಾ ಯುವ ಪಡೆ?
ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಗೆದ್ದಿರುವ ಭಾರತ ತಂಡ ಈಗ ಟಿ20 ಸರಣಿಗೆ ಸಜ್ಜಾಗಿದೆ. ಇಂದು ಭಾರತ ವೆಸ್ಟ್ ಇಂಡೀಸ್ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಇತಿಹಾಸ ನಿರ್ಮಿಸಲು ಭಾರತ ತಂಡ ಸಜ್ಜಾಗಿದೆ.
ಭಾರತ ತಂಡ ಇಂದು ತನ್ನ 200ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಲಿದ್ದು ಇತಿಹಾಸ ನಿರ್ಮಿಸಲಿದೆ. 2006ರಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡಿದೆ. ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗುವ ಮೂಲಕ ದಾಖಲೆ ಬರೆದಿದೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಸೇರಿದಂತೆ ಹಿರಿಯ ಆಟಗಾರರು ಟಿ20 ಕ್ರಿಕೆಟ್‌ನಿಂದ ಹೊರಗುಳಿದಿದ್ದು, ಯುವ ಪಡೆ ಕಣಕ್ಕಿಳಿಯಲಿದೆ. 2024ರ ಟಿ20 ವಿಶ್ವಕಪ್‌ಗೆ ತಂಡ ಕಟ್ಟಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಲವು ಆಟಗಾರರು ಅವಕಾಶ ಪಡೆಯಲಿದ್ದಾರೆ.
ಪಾಂಡ್ಯ ನೇತೃತ್ವದಲ್ಲಿ ಸರಣಿ ಸೋತಿಲ್ಲ
ಹಾರ್ದಿಕ್ ಪಾಂಡ್ಯ ಭಾರತ ಟಿ20 ತಂಡದ ನಾಯಕತ್ವ ವಹಿಸಿಕೊಂಡಾಗಿನಿಂದ ಭರ್ಜರಿ ಪ್ರದರ್ಶನ ನೀಡಿದೆ. ಪಾಂಡ್ಯ ನಾಯಕತ್ವದಲ್ಲಿ ಆಡಿದ ಎಲ್ಲಾ ಸರಣಿಗಳನ್ನು ಗೆದ್ದಿದ್ದು ದಾಖಲೆಯನ್ನು ಮುಂದುವರೆಸುವ ವಿಶ್ವಾಸದಲ್ಲಿದೆ. ಪಾಂಡ್ಯ ನೇತೃತ್ವದಲ್ಲಿ ಭಾರತ 11 ಟಿ20 ಪಂದ್ಯಗಳನ್ನು ಆಡಿದ್ದು ಇದರಲ್ಲಿ 8 ಪಂದ್ಯಗಳಲ್ಲಿ ಗೆದ್ದಿದೆ.
ಟಿ20 ತಂಡದಲ್ಲಿ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ ಮುಖೇಶ್ ಕುಮಾರ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಆಟಗಾರರು ಇದ್ದಾರೆ. ಮುಂದಿನ ವರ್ಷ ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ವೆಸ್ಟ್ ಇಂಡೀಸ್ ಸರಣಿಯು ತಯಾರಿಗೆ ಸೂಕ್ತವಾಗಿದೆ.
ಟೆಸ್ಟ್ ಸರಣಿಯಲ್ಲಿ ಆಡಿದ್ದ ಯಶಸ್ವಿ ಜೈಸ್ವಾಲ್ ಈಗಾಗಲೇ ಭರವಸೆ ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲು ಸಜ್ಜಾಗಿದ್ದಾರೆ. ಸ್ಫೋಟಕ ಆರಂಭಿಕನಾಗಿರುವ ಜೈಸ್ವಾಲ್, ಇಶಾನ್ ಕಿಶನ್ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.
ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್ ಮತ್ತು ಯುಜುವೇಂದ್ರ ಚಹಾಲ್ ಅವರಿಗೂ ಈ ಸರಣಿ ಮಹತ್ವದ್ದಾಗಿದೆ. ಈ ತಿಂಗಳ ಅಂತ್ಯದಲ್ಲಿ ಶುರುವಾಗಲಿರುವ ಏಷ್ಯಾಕಪ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಲು ಇವರು ಉತ್ತಮ ಪ್ರದರ್ಶನ ನೀಡಬೇಕಿದೆ. ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿರುವ ಸಂಜು ಸ್ಯಾಮ್ಸನ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ಭಾರತ ತಂಡದ ಸಂಭಾವ್ಯ ಆಡುವ ಬಳಗ
ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ / ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್ / ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ರವಿ ಬಿಷ್ಣೋಯ್.
ಗುರುವಾರ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಜಿಯೋ ಸಿನಿಮಾ, ಡಿಡಿ ಸ್ಪೋರ್ಟ್ಸ್ ಮತ್ತು ಫ್ಯಾನ್‌ಕೋಡ್ ಆಪ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.












Click it and Unblock the Notifications