Year Ender: ದಶಕದ ಐಸಿಸಿ ಟ್ರೋಫಿ ಬರ ಅಂತ್ಯ; ಹೇಗಿತ್ತು ರೋಚಕ ಫೈನಲ್ ಪಂದ್ಯ
2024 ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಟ್ಟ ವರ್ಷ. ಮುಖ್ಯವಾಗಿ ಐಸಿಸಿ ಟ್ರೋಫಿ ವಿಚಾರದಲ್ಲಿ ದಶಕದ ಬರ ಕೊನೆಯಾದ ವರ್ಷವಾಗಿದ್ದರಿಂದ ಅಭಿಮಾನಿಗಳಿಗೆ ಸಂತಸ ತಂದಿದೆ. ಕಳೆದ ವರ್ಷ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು ಬಂದಿದ್ದ ಭಾರತ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಈ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಬಹುವಾಗಿ ಕಾಡಿತ್ತು.
2024ರ ಜೂನ್ ತಿಂಗಳಿನಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಗೆಲ್ಲಲೇಬೇಕೆಂದು ಬಿಸಿಸಿಐ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿತ್ತು. ಯುವ ಮತ್ತು ಅನುಭವಿ ಆಟಗಾರರು ತಂಡದಲ್ಲಿದ್ದರು. ಅಪಾರ ನಿರೀಕ್ಷೆಯೊಂದಿಗೆ ಅಮೆರಿಕ ನೆಲಕ್ಕೆ ಕಾಲಿಟ್ಟ ಭಾರತ ಟೂರ್ನಿಯನ್ನು ಗೆಲುವಿನಿಂದಲೇ ಆರಂಭಿಸಿತು.

ಐರ್ಲೆಂಡ್ ವಿರುದ್ಧ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿ 2024ರ ಟಿ20 ವಿಶ್ವಕಪ್‌ನ ಅಭಿಯಾನವನ್ನು ಆರಂಭಿಸಿತು. ಜೂನ್ 9ರಂದು ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್ ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 20 ಓವರ್ ಗಳಲ್ಲಿ 113 ರನ್ ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು. ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಜಡೇಜಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಪಾಕ್ ವಿರುದ್ಧದ ಗೆಲುವಿನ ಬಳಿಕ ಯುಎಸ್‌ಎ ವಿರುದ್ಧ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ನಂತರ ಕೆನಡಾ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯ ಮಳೆಯಿಂದ ರದ್ದಾಯಿತು. ಸೂಪರ್ 8 ಹಂತದ ಪಂದ್ಯಗಳು ವೆಸ್ಟ್ ಇಂಡೀಸ್‌ನಲ್ಲಿ ಆಯೋಜನೆ ಮಾಡಿದ್ದರಿಂದ ಭಾರತ ಯುಎಸ್‌ಎಯಿಂದ ವೆಸ್ಟ್ ಇಂಡೀಸ್‌ಗೆ ಹಾರಿತು.
ಸೂಪರ್ 8 ಹಂತದ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 47 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಬಳಿಕ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ 24 ರನ್‌ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು. ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ 41 ಎಸೆತಗಳಲ್ಲಿ 92 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿಯಾಗಿತ್ತು, 2022ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದ್ದ ಭಾರತ ಇಂಗ್ಲೆಂಡ್ ವಿರುದ್ದ ಸೋತು ನಿರಾಸೆ ಅನುಭವಿಸಿತ್ತು. ಆದರೆ ಈ ಬಾರಿ ವಿಶ್ವಕಪ್‌ನಲ್ಲಿ ಸೋಲಿನ ಲೆಕ್ಕಾ ಚುಕ್ತಾ ಮಾಡಿ ಫೈನಲ್‌ಗೆ ಲಗ್ಗೆಯಿಟ್ಟಿತು. ಮೊದಲು ಬ್ಯಾಟಿಂಗ್ ಮಾಡಿ 171 ರನ್ ಕಲೆಹಾಕಿದ ಭಾರತ ಇಂಗ್ಲೆಂಡ್ ತಂಡವನ್ನು 103 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 68 ರನ್‌ಗಳ ಗೆಲುವು ಸಾಧಿಸಿತು.
ರೋಚಕ ಫೈನಲ್ ಪಂದ್ಯ
ಬಾರ್ಬಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ - ಭಾರತ ಮುಖಾಮುಖಿಯಾದವು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 176 ರನ್ ಕಲೆಹಾಕಿತು. ವಿರಾಟ್ ಕೊಹ್ಲಿ 76 ರನ್ ಗಳಿಸಿದರೆ, ಅಕ್ಷರ್ ಪಟೇಲ್ 47 ರನ್ ಗಳಿಸಿದರು.
177 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿತ್ತು. ಈ ಬಾರಿಯೂ ನಾವು ಪ್ರಶಸ್ತಿ ಗೆಲ್ಲಲ್ಲ ಎಂದು ಅಭಿಮಾನಿಗಳು ಬೇಸರದಲ್ಲಿದಾಗಲೇ ಭಾರತದ ಬೌಲರ್ ಗಳು ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್ ವಿಕೆಟ್ ಪಡೆದ ಪಾಂಡ್ಯ ಪಂದ್ಯದ ತಿರುವು ಬದಲಿಸಿದರು. ಸೂರ್ಯಕುಮಾರ್ ಯಾದವ್ ಬೌಂಡರಿ ಗೆರೆ ಬಳಿ ಹಿಡಿದ ಕ್ಯಾಚ್ ಅಭಿಮಾನಿಗಳ ಮನಸ್ಸಿನಲ್ಲಿ ಎಂದಿಗೂ ಸ್ಮರಣೀಯವಾಗಿರುತ್ತದೆ. ಅಂತಿಮವಾಗಿ 6 ರನ್‌ಗಳ ರೋಚಕ ಗೆಲುವು ಸಾಧಿಸಿದ ಭಾರತ ಟಿ20 ವಿಶ್ವಕಪ್ ಎತ್ತಿಹಿಡಿಯಿತು.
ಕೋಚ್ ಆಗಿ ರಾಹುಲ್ ದ್ರಾವಿಡ್ ಕೊನೆಗೂ ಐಸಿಸಿ ಪ್ರಶಸ್ತಿ ಗೆದ್ದರು. ನಾಯಕನಾಗಿ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದರು. ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಹೇಳಿದ್ದು ಅಭಿಮಾನಿಗಳಿಗೆ ಬೇಸರ ಮೂಡಿಸಿದರೂ, ಯುವ ಆಟಗಾರರಿಗೆ ಜಾಗ ಮಾಡಿಕೊಟ್ಟು ಮಾದರಿಯಾದರು.












Click it and Unblock the Notifications