Chess Olympiad: ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನ ಗೆದ್ದ ಭಾರತದ ಪುರುಷ ಮತ್ತು ಮಹಿಳಾ ತಂಡ
ಭಾರತದ ಪುರುಷ ಮತ್ತು ಮಹಿಳಾ ಚೆಸ್ ತಂಡಗಳು 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿವೆ. ಎರಡೂ ತಂಡಗಳು ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿವೆ. ಪುರುಷರ ತಂಡ ಅಂತಿಮ ಸುತ್ತಿನಲ್ಲಿ ಸ್ಲೋವೇನಿಯಾ ವಿರುದ್ಧ ಸುಲಭ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿಯನ್ನು ಪಡೆದುಕೊಂಡರೆ, ಮಹಿಳಾ ತಂಡ ಅಜರ್ ಬೈಜಾನ್ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದುಕೊಂಡಿತು.
ಭಾರತದ ಗುಕೇಶ್ ನೇತೃತ್ವದ ಅರ್ಜುನ್ ಎರಿಗೈಸಿ, ಆರ್ ಪ್ರಗ್ನಾನಂದ, ವಿದಿತ್ ಗುಜರಾತಿ ಮತ್ತು ಹರಿಕೃಷ್ಣ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಕೌಶಲ್ಯವನ್ನು ಪ್ರದರ್ಶಿಸಿದರು. ಇದು ಭಾರತವನ್ನು ಐತಿಹಾಸಿಕ ಗೆಲುವಿನ ಉತ್ತುಂಗಕ್ಕೇರಿಸಿತು. ಚೆಸ್ ಒಲಿಂಪಿಯಾಡ್‌ನಲ್ಲಿ ಇದು ಭಾರತದ ಮೊದಲ ಚಿನ್ನದ ಪದಕವಾಗಿದೆ.

ಬಲಿಷ್ಠ ಸ್ಥಿತಿಯಲ್ಲಿದ್ದ ಮಹಿಳಾ ತಂಡವು ಅಜರ್‌ಬೈಜಾನ್ ವಿರುದ್ಧ 3.5-0.5 ಅಂತರದಲ್ಲಿ ಗೆಲುವು ಸಾಧಿಸಿತು. ಬಳಿಕ ಯುನೈಟೆಡ್ ಸ್ಟೇಟ್ಸ್ ವಿರುದ್ಧ 2-2 ಡ್ರಾಗೆ ಮಾಡಿಕೊಂಡು ಚಿನ್ನದ ಪದಕವನ್ನು ಖಚಿತಪಡಿಸಿಕೊಂಡಿತು. ಈ ಫಲಿತಾಂಶವು ಟೈ-ಬ್ರೇಕ್ ಅನ್ನು ತಡೆಯಿತು, ಭಾರತದ ಗೆಲುವನ್ನು ಖಾತ್ರಿಪಡಿಸಿತು. ಕಜಕಿಸ್ತಾನ್ ಯುಎಸ್ಎಯನ್ನು ಸೋಲಿಸಿದ್ದರೆ, ಟೈ ಬ್ರೇಕಿಂಗ್ ಪಂದ್ಯಗಳ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತಿತ್ತು.
ಚೆಸ್ ಒಲಿಂಪಿಯಾಡ್‌ನ ಒಂಬತ್ತನೇ ಸುತ್ತಿನಲ್ಲಿ ಭಾರತವು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಡ್ರಾ ಸಾಧಿಸುವಲ್ಲಿ ಅಂತರರಾಷ್ಟ್ರೀಯ ಮಾಸ್ಟರ್ ವಂತಿಕಾ ಅಗರವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಗ್ರ್ಯಾಂಡ್ ಮಾಸ್ಟರ್ ಐರಿನಾ ಕ್ರುಶ್ ವಿರುದ್ಧದ ಜಯವು ಭಾರತಕ್ಕೆ 2-2 ಫಲಿತಾಂಶವನ್ನು ಪಡೆಯಲು ಸಹಾಯ ಮಾಡಿತು.
ಪುರುಷರ ತಂಡದ ಮಿಂಚು
ಭಾರತದ ಪುರುಷರ ತಂಡವು ಅಂತಿಮ ಸುತ್ತಿನಲ್ಲಿ ಸ್ಲೊವೇನಿಯಾ ವಿರುದ್ಧ ಸುಲಭ ಜಯಗಳಿಸಿತು. ಒಲಿಂಪಿಯಾಡ್ ಸ್ಪರ್ಧೆಯುದ್ದಕ್ಕೂ ಭಾರತ ಪುರುಷರ ಚೆಸ್ ತಂಡ ಎಂಟು ಸತತ ಗೆಲುವುಗಳನ್ನು ಸಾಧಿಸಿದ್ದರೆ ಹಾಲಿ ಚಾಂಪಿಯನ್ ಉಜ್ಬೇಕಿಸ್ತಾನ್ ವಿರುದ್ಧ ಡ್ರಾ ಮಾಡಿಕೊಂಡಿತ್ತು.
ಯುಎಸ್‌ಎ ಮೇಲೆ ಗೆಲುವು
ಅಂತಿಮ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಯುಎಸ್ಎ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸುವ ಮೂಲಕ ಭಾರತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಎರಡನೇ ಸ್ಥಾನದಲ್ಲಿರುವ ಚೀನಾ, ಯು ಎಸ್ ಎ ವಿರುದ್ಧ ಅಂಕಗಳನ್ನು ಕೈಬಿಟ್ಟು ಭಾರತಕ್ಕೆ ಚಿನ್ನದ ಪದಕವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು. ಭಾರತದ ಚೆಸ್ ತಂಡಗಳ ಅಮೋಘ ಪ್ರದರ್ಶನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.












Click it and Unblock the Notifications