Ind vs Eng: ರೋಹಿತ್ ಅಬ್ಬರ; ಭಾರತಕ್ಕೆ ಭರ್ಜರಿ ಗೆಲುವು
ಕಟಕ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕೂಡ ಭಾರತ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕದ ನೆರವಿನಿಂದ ಭಾರತ 305 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಬಳಿಕ ಅದನ್ನು ಮುಂದುವರೆಸುವಲ್ಲಿ ವಿಫಲವಾಯಿತು. ಬೆನ್ ಡಕೆಟ್ 56 ಎಸೆತಗಳಲ್ಲಿ 65 ರನ್ ಗಳಿಸಿದರೆ, ಫಿಲ್ ಸಾಲ್ಟ್ 29 ಎಸೆತಗಳಲ್ಲಿ 26 ರನ್ ಗಳಿಸಿದರು. ಜೋ ರೂಟ್ 72 ಎಸೆತಗಳಲ್ಲಿ 69 ರನ್ ಗಳಿಸಿದರು. ಹ್ಯಾರಿ ಬ್ರೂಕ್ 32 ರನ್, ಜೋಸ್ ಬಟ್ಲರ್ 34 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 41 ರನ್ ಗಳಿಸಿದರು. 49.5 ಓವರ್ ಗಳಲ್ಲಿ ಇಂಗ್ಲೆಂಡ್ 304 ರನ್ ಗಳಿಸಿ ಆಲೌಟ್ ಆಯಿತು.

ರೋಹಿತ್ ಶರ್ಮಾ ಭರ್ಜರಿ ಶತಕ
ಈ ಸವಾಲಿನ ಮೊತ್ತವನ್ನು ಬೆನ್ನಟಿದ್ದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸಿದೆ. ಅಂತಿಮವಾಗಿ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾದ ರೋಹಿತ್ ಶರ್ಮಾ ಇಂಗ್ಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 90 ಎಸೆತಗಳಲ್ಲಿ 12 ಬೌಂಡರಿ 7 ಭರ್ಜರಿ ಸಿಕ್ಸರ್ ನೆರವಿನಿಂದ 119 ರನ್ ಗಳಿಸಿದರು. ಅಮೋಘ ಶತಕ ಸಿಡಿಸುವ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭಾರತ ತಂಡದ ದೊಡ್ಡ ಚಿಂತೆಯೊಂದನ್ನು ನಿವಾರಿಸಿದರು.
ಶುಭಮನ್ ಗಿಲ್ ಕೂಡ 52 ಎಸೆತಗಳಲ್ಲಿ 60 ರನ್ ಸಿಡಿಸುವ ಮೂಲಕ ಭರವಸೆ ಮೂಡಿಸಿದರು. ಆದರೆ ಬಳಿಕ ಬಂದ ವಿರಾಟ್ ಕೊಹ್ಲಿ 5 ರನ್ ಗಳಿಸುವಷ್ಟರಲ್ಲಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಶ್ರೇಯಸ್ ಅಯ್ಯರ್ 44 ರನ್ ಗಳಿಸಿದರೆ, ಅಕ್ಷರ್ ಪಟೇಲ್ ಅಜೇಯ 41 ರನ್ ಗಳಿಸುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.
ಕೆಎಲ್ ರಾಹುಲ್ 10 ರನ್ ಗಳಿಸಿ ಔಟಾಗುವ ಮೂಲಕ ಮತ್ತೊಮ್ಮೆ ದೊಡ್ಡ ರನ್ ಗಳಿಸುವಲ್ಲಿ ವಿಫಲವಾದರು. ಹಾರ್ದಿಕ್ ಪಾಂಡ್ಯ ಕೂಡ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ ಅಜೇಯ 11 ರನ್ ಗಳಿಸಿದರು.












Click it and Unblock the Notifications