Ind vs SL: ಅಬ್ಬರಿಸಿದ ಸೂರ್ಯಕುಮಾರ್ ಯಾದವ್! ಸರಣಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಭರ್ಜರಿ ಗೆಲುವು
ನಾಯಕನಾಗಿ ಸೂರ್ಯಕುಮಾರ್ ಯಾದವ್ ಮತ್ತು ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಜೋಡಿಗೆ ಮೊದಲ ಪಂದ್ಯದಲ್ಲೇ ಗೆಲುವಿನ ಸಿಹಿ ಸಿಕ್ಕಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ 43 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಲ್ಲೆಕೆಲೆಯಲ್ಲಿ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿತು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆದರೂ ಬಳಿಕ ಭಾರತದ ಬೌಲಿಂಗ್ ದಾಳಿಗೆ ಸಿಲುಕಿ 19.2 ಓವರ್ ಗಳಲ್ಲಿ 170 ರನ್ ಗಳಿಸುವುಷ್ಟರಲ್ಲಿ ಆಲೌಟ್ ಆಯಿತು.
ಭಾರತದ ಸ್ಫೋಟಕ ಬ್ಯಾಟಿಂಗ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಯಶಸ್ವಿ ಜೈಸ್ವಾಲ್ 21 ಎಸೆತಗಳಲ್ಲಿ 40 ರನ್ ಗಳಿಸಿದರೆ, ಶುಭಮನ್ ಗಿಲ್ 16 ಎಸೆತಗಳಲ್ಲಿ 34 ರನ್ ಗಳಿಸಿದರು. ಬಳಿಕ ಬಂದ ನಾಯಕ ಸೂರ್ಯಕುಮಾರ್ ಯಾದವ್ 26 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 58 ರನ್ ಸಿಡಿಸಿದರು. ರಿಷಬ್ ಪಂತ್ 33 ಎಸೆತಗಳಲ್ಲಿ 49 ರನ್ ಗಳಿಸಿದರು. ಶ್ರೀಲಂಕಾ ವೇಗಿ ಮತೀಶ ಪತಿರಾನ 4 ಓವರ್ ಗಳಲ್ಲಿ 40 ರನ್ ನೀಡಿ 4 ವಿಕೆಟ್ ಪಡೆದರು.
ಭಾರತದ ಬಿಗಿ ಬೌಲಿಂಗ್
214 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕರಾದ ಪಾತುಮ್ ನಿಸಂಕ 48 ಎಸೆತಗಳಲ್ಲಿ 79 ರನ್ ಗಳಿಸಿದರೆ, ಕುಸಾಲ್ ಮೆಂಡಿಸ್ 27 ಎಸೆತಗಳಲ್ಲಿ 45 ರನ್ ಗಳಿಸಿದರು. 8.4 ಓವರ್ ಗಳಲ್ಲಿ ಈ ಜೋಡಿ 84 ರನ್ ಗಳಿಸಿ ಉತ್ತಮ ಆರಂಭ ಒದಗಿಸಿತು ಆದರೆ ಬಳಿಕ ಬಂದ ಬ್ಯಾಟರ್ ಗಳು ಬ್ಯಾಟಿಂಗ್‌ನಲ್ಲಿ ವಿಫಲವಾದರು. ಸತತವಾಗಿ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಸೋಲೊಪ್ಪಿಕೊಂಡಿತು.
ರಿಯಾನ್ ಪರಾಗ್ 1.2 ಓವರ್ ಗಳಲ್ಲಿ 5 ರನ್ ನೀಡಿ 3 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು. ಸಿರಾಜ್ ಮತ್ತು ರವಿ ಬಿಷ್ಣೋಯ್ ಒಂದು ವಿಕೆಟ್ ಪಡೆದರು.
ಭರ್ಜರಿ ಗೆಲುವಿನ ಮೂಲಕ ಭಾರತ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಪಂದ್ಯ ನಾಳೆ (ಭಾನುವಾರ) ಇದೇ ಮೈದಾನದಲ್ಲಿ ನಡೆಯಲಿದೆ.












Click it and Unblock the Notifications