Ind vs SA: ಯುವರಾಜ್ ಸಿಂಗ್, ರಾಹುಲ್ ಅಬ್ಬರ; ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು
ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್ 2025 ಪಂದ್ಯದಲ್ಲಿ ಭಾರತ ಮಾರ್ಸರ್ಸ್ ತಂಡವು ದಕ್ಷಿಣ ಆಫ್ರಿಕಾ ಮಾಸ್ಟರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಯುವರಾಜ್ ಸಿಂಗ್, ರಾಹುಲ್ ಶರ್ಮಾ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕಾ ಸುಲಭವಾಗಿ ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದ ಇಂಡಿಯಾ ಮಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮಾಸ್ಟರ್ಸ್ 13.5 ಓವರ್ ಗಳಲ್ಲಿ 85 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಹೆನ್ರಿ ಡೇವಿಡ್ಸ್ 28 ಎಸೆತಗಳಲ್ಲಿ 38 ರನ್ ಮತ್ತು ಡೇನ್ ವಿಲಾಸ್ 21 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ ಕೂಡ ಎರಡಂಕಿ ಸ್ಕೋರ್ ದಾಟಲಿಲ್ಲ.

ರಾಹುಲ್ ಶರ್ಮಾ 4 ಓವರ್ ಗಳಲ್ಲಿ 18 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರೆ, ಯುವರಾಜ್ ಸಿಂಗ್ 2 ಓವರ್ ಗಳಲ್ಲಿ 12 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದುಕೊಂಡರು. ಪವನ್ ನೇಗಿ ಮತ್ತು ಸ್ಟುವರ್ಟ್ ಬಿನ್ನಿ ತಲಾ ಎರಡು ವಿಕೆಟ್ ಪಡೆದರು.
ರಾಯುಡು, ನೇಗಿ ಭರ್ಜರಿ ಬ್ಯಾಟಿಂಗ್
86 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಇಂಡಿಯಾ ಮಾಸ್ಟರ್ಸ್ 11 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 89 ರನ್ ಗಳಿಸುವ ಮೂಲಕ ಸುಲಭ ಗೆಲುವು ಸಾಧಿಸಿತು. ಅಂಬಾಟಿ ರಾಯುಡು 34 ಎಸೆತಗಳಲ್ಲಿ 7 ಬೌಂಡರಿ ಸಹಿತ 41 ರನ್ ಗಳಿಸಿದರು. ಸಚಿನ್ ತೆಂಡೂಲ್ಕರ್ 6 ರನ್ ಗಳಿಸಿದರು. ಇರ್ಫಾನ್ ಪಠಾನ್ 13 ರನ್ ಗಳಿಸಿದರೆ, ಪವನ್ ನೇಗಿ 12 ಎಸೆತಗಳಲ್ಲಿ 2 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 21 ರನ್ ಗಳಿಸುವ ಮೂಲಕ ಮಿಂಚಿದರು.
ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಇಂಡಿಯಾ ಮಾಸ್ಟರ್ಸ್ ಈವರೆಗೂ ಸೋಲನ್ನೇ ಕಂಡಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈಗಾಗಲೇ ಶ್ರೀಲಂಕಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಮಾರ್ಚ್ 5ರಂದು ಬುಧವಾರ ನಡೆಯಲಿರುವ ಪಂದ್ಯದಲ್ಲಿ ಇಂಡಿಯಾ ಮಾಸ್ಟರ್ಸ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸಚಿನ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್, ವಿನಯ್ ಕುಮಾರ್ ಅವರಂತಹ ದಿಗ್ಗಜ ಆಟಗಾರರು ಆಡುತ್ತಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.












Click it and Unblock the Notifications