ವೆಸ್ಟ್ ಇಂಡೀಸ್ ವಿರುದ್ಧದ ಗೆದ್ದರೂ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಆತಂಕ
India vs West Indies: ಇಂದೋರ್‌ನಲ್ಲಿ ಭಾನುವಾರ (ಅಕ್ಟೋಬರ್ 11) ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಐದು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದ ಮುನ್ನಡೆ ಸಾಧಿಸಿದೆ. ಈ ಕುರಿತು ಮಾತನಾಡಿನ ನಾಯಕ ಶ್ರೇಯಸ್ ಅಯ್ಯರ್ ಅವರು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಅವರು, ತಂಡದ ಗೆಲುವಿಗೆ ಬೌಲರ್‌ಗಳ ಶ್ರಮವನ್ನು ಶ್ಲಾಘಿಸಿದ್ದಾರೆ. ಇದೇ ವೇಳೆ ಸರಣಿಯ ಮುಂದಿನ ಪಂದ್ಯಗಳ ಬಗ್ಗೆ ಕೆಲವು ಪ್ರಮುಖ ಎಚ್ಚರಿಕೆ ಹಾಗೂ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ.

ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ಅಯ್ಯರ್ ಮೆಚ್ಚುಗೆ
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 223 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ಕೊನೆಯವರೆಗೂ ಹೋರಾಡಿದರು. ಆದರೂ ಭಾರತೀಯ ಬೌಲರ್‌ಗಳು ರನ್ ನಿಯಂತ್ರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಬೌಲರ್‌ಗಳ ಪ್ರದರ್ಶನದ ಬಗ್ಗೆ ಮಾತನಡಿದ ನಾಯಕ ಶ್ರೇಯಸ್ ಅಯ್ಯರ್, 'ನಮ್ಮ ಬೌಲರ್‌ಗಳು ತಾವು ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟವಾದ ಯೋಜನೆ ಮತ್ತು ಆತ್ಮವಿಶ್ವಾಸವನ್ನು ಹೊಂದಿದ್ದರು. ಇಲ್ಲಿನ ವಾತಾವರಣದಲ್ಲಿ ಚೆಂಡಿನ ಮೇಲಿನ ನಿಯಂತ್ರಣ ಸಾಧಿಸಲು ಹಾಗೂ ಯೋಜನೆಯಂತೆ ಬೌಲಿಂಗ್ ಮಾಡಲು ಅನುಕೂಲವಾಯಿತು,' ಎಂದು ಹೇಳಿದರು. ಅರ್ಷದೀಪ್ ಸಿಂಗ್ 3 ಮತ್ತು ನಮನ್ ಧೀರ್ 2 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್
ಭಾರತದ ಬ್ಯಾಟಿಂಗ್ ವೈಖರಿಯನ್ನು ಶ್ಲಾಘಿಸಿದ ಅವರು, 'ಇನಿಂಗ್ಸ್‌ನ ಆರಂಭ ಅತ್ಯಂತ ಅದ್ಭುತವಾಗಿತ್ತು. ಅಭಿಷೇಕ್ ಶರ್ಮಾ (30 ಎಸೆತಗಳಲ್ಲಿ 69 ರನ್) ಪವರ್‌ಪ್ಲೇನಲ್ಲಿ ಆಕ್ರಮಣಕಾರಿ ಆಟವನ್ನು ಆಡಿದರು. ಇಶಾನ್ ಕಿಶನ್ (18 ಎಸೆತಗಳಲ್ಲಿ 37 ರನ್) ಕೂಡ ಕಳೆದ ಕೆಲವು ತಿಂಗಳುಗಳಿಂದ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೊನೆಯಲ್ಲಿ ಪ್ರಿನ್ಸ್ ಯಾದವ್ ನೀಡಿದ ಕಿರು ಕೊಡುಗೆಯೂ ಸಹ ತಂಡಕ್ಕೆ ಅತ್ಯಂತ ಮೌಲ್ಯಯುತವಾಗಿತ್ತು,' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
'ಹೈ-ಸ್ಕೋರಿಂಗ್ ಮೈದಾನಗಳು ಹಾಗೂ ಜಾಗರೂಕತೆ ಅಗತ್ಯ'
ಗೆಲುವಿನ ನಂತರವೂ ಸರಣಿಯ ಮುಂದಿನ ಹಂತದ ಸವಾಲುಗಳನ್ನು ನೆನಪಿಸಿದ ಅಯ್ಯರ್, 'ವೆಸ್ಟ್ ಇಂಡೀಸ್ ತಂಡವನ್ನು ಎಂದಿಗೂ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅವರು ಯಾವುದೇ ಹಂತದಲ್ಲೂ ಪಂದ್ಯದ ಗತಿಯನ್ನು ಬದಲಾಯಿಸಬಲ್ಲರು. ಆದ್ದರಿಂದ ನಾವು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಬಾರದು,' ಎಂದು ಎಚ್ಚರಿಸಿದರು.
ಮುಂದುವರಿದು ಮಾತನಾಡಿದ ಅವರು, 'ಸರಣಿ ನಡೆಯುತ್ತಿರುವ ಮೈದಾನಗಳು ಸಣ್ಣ ಬೌಂಡರಿಗಳನ್ನು ಹೊಂದಿದ್ದು, ಹೆಚ್ಚು ರನ್ ಹರಿಸುವ (ಹೈ-ಸ್ಕೋರಿಂಗ್) ಮೈದಾನಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಬೌಲರ್‌ಗಳಿಗೆ ಸವಾಲು ಹೆಚ್ಚಿರುತ್ತದೆ. ಆದರೆ, ನಾವು ನಮ್ಮ ಪ್ರಕ್ರಿಯೆ ಮತ್ತು ದಿನಚರಿಗೆ ಬದ್ಧವಾಗಿರುವುದು ಹಾಗೂ ಆಕ್ರಮಣಕಾರಿ ಮನೋಭಾವವನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ,' ಎಂದು ಹೇಳಿದರು.
ಭಾರತ ಬೌಲಿಂಗ್ ಬಗ್ಗೆ ವೆಸ್ಟ್ ಇಂಡೀಸ್ ನಾಯಕ ಮೆಚ್ಚುಗೆ
ಮತ್ತೊಂದೆಡೆ ಸೋಲಿನ ಕುರಿತು ಮಾತನಾಡಿದ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್, 'ನಾವು ಬೌಲಿಂಗ್‌ನಲ್ಲಿ ಇನ್ನು ಉತ್ತಮವಾಗಿ ಕಾರ್ಯನಿರ್ವಹಿಸಬೇಕಿತ್ತು. ಸಣ್ಣ ತಪ್ಪುಗಳು ಪಂದ್ಯದ ಫಲಿತಾಂಶವನ್ನು ಬದಲಾಯಿಸುತ್ತವೆ. ಆದರೆ, ಭಾರತೀಯ ಬೌಲರ್‌ಗಳು ಕೊನೆಯ ಹಂತದಲ್ಲಿ ಯಾರ್ಕರ್ ಎಸೆತಗಳನ್ನು ಅತ್ಯುತ್ತಮವಾಗಿ ಪ್ರಯೋಗಿಸಿ ನಮಗೆ ಪಾಠ ಕಲಿಸಿದರು,' ಎಂದು ಭಾರತೀಯ ಬೌಲಿಂಗ್ ಪಡೆಯನ್ನು ಶ್ಲಾಘಿಸಿದರು. ಒಟ್ಟಿನಲ್ಲಿ ಶ್ರೇಯಸ್ ಅಯ್ಯರ್ ಮುಂದಿನ ಪಂದ್ಯಗಳಿಗೆ ತಯಾರಿ ಹೇಗಿರಬೇಕೆಂದು ಎಚ್ಚರಿಕೆ ಸಂದೇಶ ನೀಡುವ ಮೂಲಕ ಗಮನ ಸೆಳೆದಿದ್ದಾರೆ.


Click it and Unblock the Notifications
