ಮಹಿಳಾ ಟಿ20 ವಿಶ್ವಕಪ್ 2026: ಪಾಕಿಸ್ತಾನದ ವಿರುದ್ಧ ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೇಗಿರಲಿದೆ?
Women's T20 World Cup 2026: ಈಗಾಗಲೇ ಜೂನ್ 12ರಿಂದ ಮಹಿಳಾ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಿದೆ. ಟೀಮ್ ಇಂಡಿಯಾ ಭಾನುವಾರ (ಜೂನ್ 14) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಲಿದೆ. ಹಾಗಾದ್ರೆ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ವರ್ಷ 2025ರಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿದ್ದ ಭಾರತದ ಮಹಿಳಾ ಕ್ರಿಕೆಟ್ ತಂಡ ಈಗ ಮತ್ತೊಂದು ಐತಿಹಾಸಿಕ ಸಾಧನೆಗೆ ಸಜ್ಜಾಗಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಭಾನುವಾರ (ಜೂನ್ 14) ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ತನ್ನ ಮಹಿಳಾ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸುತ್ತಿದೆ. ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಗುರಿ ಹೊಂದಿರುವ ಭಾರತಕ್ಕೆ ಈ ಆರಂಭಿಕ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಮಹಿಳಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ. ಈ ತಂಡಗಳು ಒಟ್ಟು 16 ಬಾರಿ ಮುಖಾಮುಖಿಯಾಗಿದ್ದು, ಭಾರತ 13 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ್ದರೆ, ಪಾಕಿಸ್ತಾನ ಕೇವಲ 3 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಆದರೂ ಭಾರತ ತಂಡವು ಎದುರಾಳಿಯನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ.
ಭಾರತದ ಬ್ಯಾಟಿಂಗ್ ವಿಭಾಗದ ವಿವರ
ಭಾರತ ತಂಡಕ್ಕೆ ಸ್ಮೃತಿ ಮಂಧಾನ ಮತ್ತು ಶೆಫಾಲಿ ವರ್ಮಾ ಅವರ ಸ್ಫೋಟಕ ಆರಂಭಿಕ ಜೋಡಿಯೇ ಪ್ರಮುಖ ಶಕ್ತಿಯಾಗಿದೆ. ಪವರ್‌ಪ್ಲೇ ಅವಧಿಯಲ್ಲಿಯೇ ಎದುರಾಳಿ ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸುವ ಸಾಮರ್ಥ್ಯ ಇವರಿಗಿದೆ. ಇತ್ತೀಚಿನ ದಿನಗಳಲ್ಲಿ ಇವರ ಸ್ಥಿರತೆ ಸ್ವಲ್ಪ ಮಟ್ಟಿಗೆ ಏರುಪೇರಾಗಿದ್ದರೂ, ಪಾಕಿಸ್ತಾನದ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸಲು ಈ ಜೋಡಿ ಉತ್ತಮ ಪ್ಲಾನ್ ಮಾಡಿಕೊಂಡಿದೆ.
ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಇತ್ತೀಚೆಗೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸರಣಿಗಳಲ್ಲಿ ಉತ್ತಮ ಆಟದ ಮೂಲಕ ಫಾರ್ಮ್‌ಗೆ ಮರಳಿರುವುದು ತಂಡಕ್ಕೆ ಆನೆಬಲ ತಂದಿದೆ. ಇವರಿಗೆ ಜೆಮಿಮಾ ರೋಡ್ರಿಗಸ್, ವಿಕೆಟ್ ಕೀಪರ್ ರಿಚಾ ಘೋಷ್, ಯಸ್ತಿಕಾ ಭಾಟಿಯಾ ಮತ್ತು ಭಾರತಿ ಫುಲ್ಮಾಲಿ ಸಾಥ್ ನೀಡಲಿದ್ದಾರೆ. ಆಲ್‌ರೌಂಡರ್ ದೀಪ್ತಿ ಶರ್ಮಾ ಅವರ ಉಪಸ್ಥಿತಿ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಪಾಕಿಸ್ತಾನಕ್ಕೆ ಫಾತಿಮಾ ಸನಾ ಆಸರೆ
ಮತ್ತೊಂದೆಡೆ ಪಾಕಿಸ್ತಾನ ತಂಡವನ್ನು ಯುವ ಆಲ್‌ರೌಂಡರ್ ಫಾತಿಮಾ ಸನಾ ಮುನ್ನಡೆಸುತ್ತಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆ ವಿರುದ್ಧ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಫಾತಿಮಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪಾಕಿಸ್ತಾನದ ಪ್ರಮುಖ ಅಸ್ತ್ರವಾಗಿದ್ದಾರೆ. ಬೌಲಿಂಗ್‌ನಲ್ಲಿ ಆರಂಭಿಕ ವಿಕೆಟ್ ಪಡೆಯುವ ಹಾಗೂ ಬ್ಯಾಟಿಂಗ್‌ನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡುವ ಜವಾಬ್ದಾರಿ ಇವರ ಮೇಲಿದೆ. ಇನ್ನೂ ಅನುಭವಿ ಸ್ಪಿನ್ನರ್ ನಶ್ರಾ ಸಂಧು ಮಧ್ಯಮ ಓವರ್‌ಗಳಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಲು ಸಜ್ಜಾಗಿದ್ದಾರೆ.
ಬೌಲಿಂಗ್ ವಿಭಾಗದ ಸವಾಲು
ಭಾರತದ ಬೌಲಿಂಗ್ ವಿಭಾಗವನ್ನು ರೇಣುಕಾ ಸಿಂಗ್, ಅರುಂಧತಿ ರೆಡ್ಡಿ ಮತ್ತು ಶ್ರೇಯಾಂಕಾ ಪಾಟೀಲ್ ಮುನ್ನಡೆಸಲಿದ್ದಾರೆ. ಆದರೆ ಆಲ್‌ರೌಂಡರ್‌ಗಳಾದ ಅಮನ್‌ಜೋತ್ ಕೌರ್ ಮತ್ತು ಕಾಶ್ವಿ ಗೌತಮ್ ಅವರು ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಇದರಿಂದ ಭಾರತಕ್ಕೆ ತುಸು ಹಿನ್ನಡೆಯಾದಂತಾಗಿದೆ. ಮತ್ತೊಂದೆಡೆ ಪಾಕಿಸ್ತಾನ ತಂಡವು ಡಯಾನಾ ಬೇಗ್, ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ಅವರನ್ನೊಳಗೊಂಡ ಉತ್ತಮ ಬೌಲಿಂಗ್ ಲೈನ್‌ಅಪ್ ಅನ್ನು ಹೊಂದಿದೆ.
ಪಂದ್ಯದ ಸಮಯ, ನೇರಪ್ರಸಾರದ ವಿವರ
* ಸಮಯ: ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30ಕ್ಕೆ ನಡೆಯಲಿದೆ.
* ನೇರ ಪ್ರಸಾರ: ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಲಭ್ಯವಿದ್ದರೆ, ಜಿಯೋಹಾಟ್‌ಸ್ಟಾರ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.
ಭಾರತ, ಪಾಕಿಸ್ತಾನ ತಂಡಗಳು
ಭಾರತ ಮಹಿಳಾ ಟಿ20 ವಿಶ್ವಕಪ್ 2026 ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೀ ಚರಣಿ, ಯಸ್ತಿಕಾ ಭಾಟಿಯಾ, ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್.
ಪಾಕಿಸ್ತಾನ ಮಹಿಳಾ ಟಿ20 ವಿಶ್ವಕಪ್ 2026 ತಂಡ: ಫಾತಿಮಾ ಸನಾ (ನಾಯಕಿ), ಗುಲ್ ಫಿರೋಜಾ, ಆಯಿಷಾ ಜಾಫರ್, ಇರಾಮ್ ಜಾವೇದ್, ಐಮನ್ ಫಾತಿಮಾ, ಆಲಿಯಾ ರಿಯಾಜ್, ನಟಾಲಿಯಾ ಪರ್ವೈಜ್, ಸಾಯಿರಾ ಜಬೀನ್, ಮುನೀಬಾ ಅಲಿ (ವಿಕೆಟ್ ಕೀಪರ್), ತೂಬಾ ಹಸನ್, ರಮೀನ್ ಶಮೀಮ್, ಸಾದಿಯಾ ಇಕ್ಬಾಲ್, ನಶ್ರಾ ಸಂಧು, ಡಯಾನಾ ಬೇಗ್, ತಸ್ಮಿಯಾ ರುಬಾಬ್.












Click it and Unblock the Notifications