Ind vs NZ: ಭಾರತದ ದಿಟ್ಟ ಹೋರಾಟ; ಚಿನ್ನಸ್ವಾಮಿ ಅಂಗಳದಲ್ಲಿ ಕೊಹ್ಲಿ-ಸರ್ಫರಾಜ್ ಮಿಂಚು
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 46 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಕೊಡುವ ಮುನ್ಸೂಚನೆ ಕೊಟ್ಟಿದೆ. ಭಾರತ 46 ರನ್‌ಗಳಿಗೆ ಆಲೌಟ್ ಆದ ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 402 ರನ್‌ಗಳಿಗೆ ಆಲೌಟ್ ಆಗುವ ಮೂಲಕ 356 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು.
ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 231 ರನ್ ಗಳಿಸಿದ್ದು ಹೋರಾಟ ಕೊಡುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ ಬ್ಯಾಟಿಂಗ್ ಮಾಡಿತು.

ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 72 ರನ್ ಕಲೆಹಾಕಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ವಿರಾಟ್ ಕೊಹ್ಲಿ ಆರಂಭದಲ್ಲಿ ಎಚ್ಚರಿಕೆಯಿಂದ ಆಡಿದರೂ ಬಳಿಕ ರನ್ ಗಳಿಸಲು ಆರಂಭಿಸಿದರು. ರೋಹಿತ್ ಶರ್ಮಾ 63 ಎಸೆತಗಳಲ್ಲಿ 52 ರನ್ ಗಳಿಸಿ ಔಟಾದರು. ಈ ಹಂತದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಸರ್ಫರಾಜ್ ಖಾನ್ ಇಡೀ ದಿನ ನ್ಯೂಜಿಲೆಂಡ್ ಬೌಲರ್ ಗಳನ್ನು ಕಾಡಿದರು.
ಮೂರನೇ ವಿಕೆಟ್‌ಗೆ ಈ ಜೋಡಿ 136 ರನ್‌ಗಳನ್ನು ಕಲೆ ಹಾಕಿತು. ದುರಾದೃಷ್ಟವಶಾತ್ ವಿರಾಟ್ ಕೊಹ್ಲಿ ದಿನದ ಕೊನೆಯ ಬಾಲ್‌ನಲ್ಲಿ ಔಟಾದರು. 102 ಎಸೆತಗಳಲ್ಲಿ 8 ಬೌಂಡರಿ 2 ಸಿಕ್ಸರ್ ಸಹಿತ 70 ರನ್ ಗಳಿಸಿದ್ದ ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್‌ಗಳನ್ನು ಕೂಡ ಪೂರೈಸಿದರು.
ಸರ್ಫರಾಜ್ ಖಾನ್ ಅಮೋಘ ಆಟ
ಶುಭಮನ್ ಗಿಲ್ ಬದಲಾಗಿ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದ ಸರ್ಫರಾಜ್ ಖಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದ ಅವರು, ತಮ್ಮ 4ನೇ ಅಂತಾರಾಟ್ಟ್ರೀಯ ಟೆಸ್ಟ್ ಅರ್ಧಶತಕ ಪೂರೈಸಿದರು. 78 ಎಸೆತಗಳಲ್ಲಿ 7 ಬೌಂಡರಿ 3 ಭರ್ಜರಿ ಸಿಕ್ಸರ್ ಸಹಿತ ಅಜೇಯ 70 ರನ್ ಗಳಿಸಿರುವ ಅವರು, ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ನಾಲ್ಕನೇ ದಿನ ಭಾರತ ದೊಡ್ಡ ಮೊತ್ತ ಕಲೆ ಹಾಕಿದರೆ ಮಾತ್ರ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಅಥವಾ ಗೆಲ್ಲುವ ಅವಕಾಶ ಸಿಗಲಿದೆ. ಭಾರತ ಇನ್ನೂ 125 ರನ್‌ಗಳ ಹಿನ್ನಡೆಯಲ್ಲಿದ್ದು, ಈ ಪಂದ್ಯವನ್ನು ಗೆಲ್ಲಲು ಕನಿಷ್ಠ 250 ರನ್‌ಗಳ ಮುನ್ನಡೆ ಪಡೆದುಕೊಳ್ಳಬೇಕು ಈ ಲೆಕ್ಕಾಚಾರದಲ್ಲಿ ಭಾರತ ಇನ್ನೂ ಕನಿಷ್ಠ 375 ರನ್ ಕಲೆಹಾಕಬೇಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ಉಳಿದ 8 ಟೆಸ್ಟ್‌ಗಳಲ್ಲಿ ಕನಿಷ್ಠ 4 ಪಂದ್ಯಗಳಲ್ಲಿ ಗೆದ್ದು ಒಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಿದೆ. ಈ ಪಂದ್ಯವನ್ನು ಕೂಡ ಭಾರತ ಗೆಲುವಿನ ಲೆಕ್ಕಚಾರಾದಲ್ಲಿ ಆಡುತ್ತಿದ್ದು, ಇನ್ನೆರಡು ದಿನ ರೋಚಕ ಹಣಾಹಣಿಯನ್ನು ನಿರೀಕ್ಷೆ ಮಾಡಬಹುದಾಗಿದೆ.












Click it and Unblock the Notifications