Ind vs Eng: ಇನ್ನೂ ಎರಡು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಅಲಭ್ಯ! ಗುರುವಾರ ಭಾರತ ತಂಡ ಪ್ರಕಟ ಸಾಧ್ಯತೆ
ಇತ್ತೀಚಿನ ವರದಿಯ ಪ್ರಕಾರ, ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ನಾಲ್ಕನೇ ಟೆಸ್ಟ್ ಪಂದ್ಯಗಳನ್ನು ಸಹ ಕಳೆದುಕೊಳ್ಳಲಿದ್ದಾರೆ. "ವೈಯಕ್ತಿಕ ಕಾರಣಗಳಿಂದ" ಅವರು ಮೊದಲ ಎರಡು ಪಂದ್ಯಗಳಲ್ಲಿ ಆಯ್ಕೆಗೆ ಅಲಭ್ಯರಾಗಿದ್ದರು ಮೂರನೇ ಟೆಸ್ಟ್‌ಗೆ ತಂಡಕ್ಕೆ ಮತ್ತೆ ಸೇರಿಕೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ವರದಿಯ ಪ್ರಕಾರ ಕೊಹ್ಲಿ ಟೆಸ್ಟ್ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುವುದಿಲ್ಲ ಎಂದು ವರದಿಗಳು ಹೇಳುತ್ತವೆ. ಬುಮ್ರಾ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿಶ್ರಾಂತಿ ಪಡೆಯುತ್ತಾರೆ ಎನ್ನಲಾಗಿತ್ತು, ಆದರೆ ಅವರು ರಾಜ್‌ಕೋಟ್ ಟೆಸ್ಟ್‌ನಲ್ಲಿ ಆಡುವ ಸಾಧ್ಯತೆ ಇದೆ.

ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ವರದಿಯ ಪ್ರಕಾರ, 3ನೇ ಮತ್ತು 4ನೇ ಟೆಸ್ಟ್ ಮಾತ್ರವಲ್ಲದೆ ವಿರಾಟ್ ಕೊಹ್ಲಿ ಅವರು ಧರ್ಮಶಾಲಾ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದಾಗ್ಯೂ, ಮಾರ್ಚ್ 6 ರಂದು ಪಂದ್ಯ ಪ್ರಾರಂಭವಾಗುವುದರಿಂದ, ಆಯ್ಕೆದಾರರು ನಂತರ ಹೆಚ್ಚಿನ ಸ್ಪಷ್ಟತೆಯನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.
ಕೊಹ್ಲಿ ವಾಪಸ್ ಯಾವಾಗ?
ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಪತ್ನಿ ಅನುಷ್ಕಾ ಶರ್ಮಾ ಜೊತೆ ಕೊಹ್ಲಿ ಸಮಯ ಕಳೆಯುತ್ತಿದ್ದಾರೆ. ಮತ್ತು ವಿರಾಟ್ ಕೊಹ್ಲಿ ಕುಟುಂಬದ ಜೊತೆ ಇರಲು ಆದ್ಯತೆ ನೀಡಿರುವುದರಿಂದ ಕನಿಷ್ಠ ಮುಂದಿನ ಎರಡು ಟೆಸ್ಟ್‌ಗಳನ್ನು ಕಳೆದುಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮರಳುವ ಬಗ್ಗೆ ಅಧಿಕೃತ ದೃಢೀಕರಣವನ್ನು ನಿರೀಕ್ಷಿಸಲಾಗಿದ್ದರೂ, ಅವರು ಪ್ರಸ್ತುತ ವಿದೇಶದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತವೆ.
ಶುಕ್ರವಾರ ತಂಡ ಪ್ರಕಟ
ಸರಣಿಯ ಉಳಿದ ಮೂರು ಟೆಸ್ಟ್‌ಗಳಿಗೆ ಬಿಸಿಸಿಐ ಇನ್ನೂ ತಂಡವನ್ನು ಪ್ರಕಟಿಸಬೇಕಿದೆ. ಮೊದಲ ಟೆಸ್ಟ್ ಬಳಿಕ ಗಾಯದ ಕಾರಣ ಹೊರಗುಳಿದಿದ್ದ ಕೆಎಲ್ ರಾಹುಲ್ ಫಿಟ್ ಆಗಿದ್ದು ರಾಜ್‌ಕೋಟ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ಆಡಲಿದ್ದಾರೆ ಎನ್ನಲಾಗಿದೆ. ಜಡೇಜಾ ಇನ್ನೂ ಫಿಟ್ ಆಗದ ಕಾರಣ ಅವರ ಅನುಪಸ್ಥಿತಿ ಮುಂದುವರೆಯಲಿದೆ.
ಎರಡನೇ ಟೆಸ್ಟ್‌ನಲ್ಲಿ ವೇಗಿ ಮೊಹಮ್ಮದ್ ಸಿರಾಜ್‌ಗೆ ವಿಶ್ರಾಂತಿ ನೀಡಲಾಗಿತ್ತು. ಅವರು ಕೂಡ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೆಎಲ್ ರಾಹುಲ್ ಮರಳಿದರೆ ಶ್ರೇಯಸ್ ಅಯ್ಯರ್ ತಂಡದಿಂದ ಹೊರಗುಳಿಯುವ ಸಾಧ್ಯತೆ ಇದೆ.
ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15ರಿಂದ ಆರಂಭವಾಗಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ಮತ್ತು ಭಾರತ ತಲಾ ಒಂದು ಪಂದ್ಯಗಳಲ್ಲಿ ಗೆದ್ದಿದ್ದು ಸರಣಿ 1-1 ರಲ್ಲಿ ಸಮಬಲಗೊಂಡಿದೆ.












Click it and Unblock the Notifications