WTC Final : ಇವರಿಬ್ಬರಲ್ಲಿ ಯಾರಿಗೆ ಅವಕಾಶ ನೀಡಬೇಕು ಎನ್ನೋದೆ ಈಗ ರೋಹಿತ್ ಶರ್ಮಾಗೆ ದೊಡ್ಡ ಚಿಂತೆ!
ಭಾರತ ಆಸ್ಟ್ರೇಲಿಯಾ ನಡುವಿನ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತ ತಂಡ ಈಗಾಗಲೇ ಮಹತ್ವದ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ನಡೆಸಿದ್ದು, ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಪಂದ್ಯಕ್ಕೆ ಮುನ್ನ ಒಂದು ದೊಡ್ಡ ಪ್ರಶ್ನೆ ಕಾಡುತ್ತಿದೆ.
ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಈಗ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್‌ಗೆ ತಲೆನೋವಾಗಿದೆ. ಆಡುವ 11ರ ಬಳಗದಲ್ಲಿ 10 ಆಟಗಾರರ ಬಗ್ಗೆ ಯಾವುದೇ ಗೊಂದಲ ಇಲ್ಲದಿದ್ದೂ ಒಂದು ಸ್ಥಾನಕ್ಕಾಗಿ ಇಬ್ಬರು ಆಟಗಾರರ ನಡುವೆ ಪೈಪೋಟಿ ನಡೆಯುತ್ತಿದೆ.

ಹೌದು, ಭಾರತ ತಂಡದ ಆಡುವ 11ರ ಬಳಗದಲ್ಲಿ ರವಿಚಂದ್ರನ್ ಅಶ್ವಿನ್ ಆಡಬೇಕಾ ಅಥವಾ ಉಮೇಶ್ ಯಾದವ್ ಆಡಬೇಕಾ ಎನ್ನು ಪ್ರಶ್ನೆ ಈಗ ನಾಯಕ ಮತ್ತು ಕೋಚ್‌ಗೆ ಕಾಡುತ್ತಿದೆ. ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಈ ಪಂದ್ಯ ನಡೆಯುತ್ತಿರುವುದರಿಂದ 4 ವೇಗಿಗಳೊಂದಿಗೆ ಆಡಬೇಕಾ ಅಥವಾ ಮೂವರು ವೇಗಿಗಳು ಇಬ್ಬರು ಸ್ಪಿನ್ನರ್ ಸಾಕಾ ಎನ್ನುವುದೇ ಈಗ ದೊಡ್ಡ ಪ್ರಶ್ನೆಯಾಗಿದೆ.
ನಿಗೂಢವಾಗಿರುವ ಓವಲ್ ಪಿಚ್
ಓವಲ್ ಪಿಚ್ ಹೇಗಿದೆ, ಹೇಗೆ ವರ್ತಿಸುತ್ತದೆ ಎನ್ನುವುದು ಸದ್ಯ ಇನ್ನೂ ನಿಗೂಢವಾಗಿದೆ. ಬೇಸಿಗೆ ಸಮಯ ಆಗಿರುವುದರಿಂದ ಪಿಚ್ ಸ್ವಲ್ಪ ಒಣಗಿರುತ್ತದೆ, ಆಟ ಮುಂದುವರೆದಂತೆ ಸ್ಪಿನ್‌ಗೆ ಸಹಕಾರ ನೀಡಬಹುದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದರು. ಆದರೂ, ಪಿಚ್ ಹೇಗಿದೆ ಎನ್ನುವುದು ಆಟದ ದಿನವೇ ತಿಳಿಯಲಿದೆ.

ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದಲ್ಲಿ ಆಟಗಾರರ ಆಯ್ಕೆ ಕಗ್ಗಂಟಾಗಿದೆ. ಬುಮ್ರಾ ಇದ್ದಿದ್ದರೆ ಭಾರತ ತಂಡಕ್ಕೆ ಯಾವುದೇ ತಲೆನೋವು ಇರುತ್ತಿರಲಿಲ್ಲ. ಆದರೆ, ಪ್ರಮುಖ ಆಟಗಾರರ ಗಾಯದ ಸಮಸ್ಯೆ ತಂಡವನ್ನು ಕಾಡುತ್ತಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಆಡುವುದು ಖಚಿತವಾಗಿದೆ. ನಂತರ ಪೂಜಾರ, ಕೊಹ್ಲಿ, ರಹಾನೆ, ಕೆ.ಎಸ್. ಭರತ್, ಜಡೇಜಾ, ಶಾರ್ದೂಲ್, ಸಿರಾಜ್, ಶಮಿ ಆಡಲಿದ್ದಾರೆ. ಇನ್ನೊಂದು ಸ್ಥಾನಕ್ಕೆ ಅಶ್ವಿನ್ ಮತ್ತು ಉಮೇಶ್ ಯಾದವ್ ನಡುವೆ ಪೈಪೋಟಿ ಶುರುವಾಗಿದೆ.
ಬ್ಯಾಟಿಂಗ್ ಅಭ್ಯಾಸ ಮಾಡಿದ ರವಿಚಂದ್ರನ್ ಅಶ್ವಿನ್
ಪಂದ್ಯಕ್ಕೆ ಮುನ್ನಾದಿನ ರವಿಚಂದ್ರನ್ ಅಶ್ವಿನ್ ಮತ್ತು ಉಮೇಶ್ ಯಾದವ್ ಇಬ್ಬರೂ ಅಭ್ಯಾಸದಲ್ಲಿ ಪಾಲ್ಗೊಂಡರು. ಅಶ್ವಿನ್ ಹೆಚ್ಚಿನ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡುವ ಮೂಲಕ ಗಮನ ಸೆಳೆದರು. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿ ಕೂಡ ಅವರು ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡರ್ ಸಾಮರ್ಥ್ಯ ಗಮನಿಸಿದರೆ ಅಶ್ವಿನ್ ಸ್ಥಾನ ಪಡೆಯಲಿದ್ದಾರೆ, ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ವೇಗಿಗಳಿಗೆ ಹೆಚ್ಚಿನ ನೆರವು ಸಿಗುವು ಅವಕಾಶ ಇದ್ದು, ಉಮೇಶ್ ಯಾದವ್ ಕೂಡ ಪೈಪೋಟಿ ನೀಡುತ್ತಿದ್ದಾರೆ.
ಭಾರತದ ಸಂಭಾವ್ಯ ಆಡುವ ಬಳಗ: ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆ ಎಸ್ ಭರತ್, ಶಾರ್ದೂಲ್ ಠಾಕೂರ್, ರವಿ ಅಶ್ವಿನ್ / ಉಮೇಶ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.












Click it and Unblock the Notifications