Ind vs SL: ಹೀರೋ ಆದ ಕನ್ನಡಿಗ ಅಭಿಮನ್ಯು; ಸಚಿನ್ ನಾಯಕತ್ವದ ಭಾರತ ಮಾಸ್ಟರ್ಸ್ ತಂಡಕ್ಕೆ ರೋಚಕ ಜಯ
ನವಿ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಮಾಸ್ಟರ್ಸ್ ಲೀಗ್ ಟಿ20 (IML T20) 2025ರ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತ ಮಾಸ್ಟರ್ಸ್ ತಂಡವು ಶ್ರೀಲಂಕಾ ಮಾಸ್ಟರ್ಸ್ ತಂಡದ ವಿರುದ್ಧ ನಾಲ್ಕು ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಭಾರತ ತಂಡಕ್ಕಾಗಿ ಆಡಿ ನಿವೃತ್ತಿ ಪಡೆದಿರುವ ಹಿರಿಯ ಆಟಗಾರರು ಮತ್ತೆ ಕಣಕ್ಕಿಳಿದಿದ್ದು, ಅಭಿಮಾನಿಗಳನ್ನು ರಂಜಿಸಿದರು.
ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್ ತಂಡದಲ್ಲಿ ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಸ್ಟುವರ್ಟ್ ಬಿನ್ನಿ, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಅಂಬಾಟಿ ರಾಯುಡು, ಧವಳ್ ಕುಲಕರ್ಣಿ, ನದೀಮ್, ಗುರುಕೀರತ್ ಸಿಂಗ್ ಶ್ರೀಲಂಕಾ ಮಾಸ್ಟರ್ಸ್ ವಿರುದ್ಧದ ತಂಡದಲ್ಲಿ ಕಣಕ್ಕಿಳಿದಿದ್ದರು.

ಟಾಸ್ ಗೆದ್ದ ಶ್ರೀಲಂಕಾ ಮಾಸ್ಟರ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ ಇಂಡಿಯಾ ಮಾಸ್ಟರ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಅಂಬಾಟಿ ರಾಯುಡು 5 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ 10 ರನ್ ಗಳಿಸಿ ಔಟಾದರು.
ಸ್ಟುವರ್ಟ್ ಬಿನ್ನಿ 31 ಎಸೆತಗಳಲ್ಲಿ 3 ಬೌಂಡರಿ 7 ಭರ್ಜರಿ ಸಿಕ್ಸರ್ ಸಹಿತ 68 ರನ್ ಗಳಿಸಿ ಮಿಂಚಿದರು. ಯುವರಾಜ್ ಸಿಂಗ್ ಕೂಡ 22 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 31 ರನ್ ಗಳಿಸಿದರೆ, ಯೂಸುಫ್ ಪಠಾಣ್ 22 ಎಸೆತಗಳಲ್ಲಿ 3 ಬೌಂಡರಿ 6 ಸಿಕ್ಸರ್ ಸಹಿತ ಅಜೇಯ 56 ರನ್ ಗಳಿಸಿದರು. ಗುರುಕೀರತ್ ಸಿಂಗ್ 32 ಎಸೆತಗಳಲ್ಲಿ 44 ರನ್ ಗಳಿಸಿದರು.
ಕೊನೆ ಓವರ್ ನಲ್ಲಿ ಹೀರೋ ಆದ ಅಭಿಮನ್ಯು
ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ಭಾರತಕ್ಕೆ ಕೊನೆಯವರೆಗೂ ಹೋರಾಟ ಕೊಟ್ಟಿತು. ಗೆಲ್ಲುವ ಹಂತ ತಲುಪಿದ್ದ ಶ್ರೀಲಂಕಾ ಕೊನೆ ಓವರ್ ನಲ್ಲಿ ಎಡವಿತು. ನಾಯಕ ಕುಮಾರ್ ಸಂಗಾಕ್ಕರ 30 ಎಸೆತಗಳಲ್ಲಿ 51 ರನ್ ಗಳಿಸಿದರೆ, ಜೀವನ್ ಮೆಂಡಿಸ್ 17 ಎಸೆತಗಳಲ್ಲಿ 42 ರನ್ ಗಳಿಸಿದರು. ಇಸುರು ಉಡಾನ 7 ಎಸೆತಗಳಲ್ಲಿ 23 ರನ್ ಗಳಿಸುವ ಮೂಲಕ ಶ್ರೀಲಂಕಾಗೆ ಗೆಲುವಿನ ಆಸೆ ಮೂಡಿಸಿದ್ದರೂ ವಿನಯ್ ಕುಮಾರ್ ಬೌಲಿಂಗ್‌ನಲ್ಲಿ ಔಟಾದರು.
ಕೊನೆಯ ಓವರ್ ನಲ್ಲಿ ಶ್ರೀಲಂಕಾ ಗೆಲುವಿಗೆ ಕೇವಲ 9 ರನ್ ಬೇಕಿತ್ತು. ಕೊನೆಯ ಓವರ್ ಬೌಲಿಂಗ್ ಮಾಡಿದ ಕರ್ನಾಟಕದ ಅಭಿಮನ್ಯು ಮಿಥುನ್ ಕೇವಲ 4 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು. ಸ್ಟುವರ್ಟ್ ಬಿನ್ನಿ, ಅಭಿಮನ್ಯು ಮತ್ತು ವಿನಯ್ ಕುಮಾರ್ ಒಟ್ಟು ಮೂವರು ಕರ್ನಾಟಕದ ಆಟಗಾರರು ಆಡುತ್ತಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.












Click it and Unblock the Notifications