Ind vs Eng: ಸರಣಿ ಕ್ಲೀನ್ ಸ್ವೀಪ್; ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾದ ಭಾರತ
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 142 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಭಾರತ ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಿರುವ ಸಂದೇಶ ರವಾನಿಸಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 356 ರನ್ ಗಳಿಸಿ ಆಲೌಟ್ ಆಯಿತು. ಈ ಸವಾಲಿನ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ 34.2 ಓವರ್ ಗಳಲ್ಲಿ 214 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು.

ಫಾರ್ಮ್‌ಗೆ ಮರಳಿದ ಕೊಹ್ಲಿ, ರಾಹುಲ್
ಮೊದಲ ಎರಡು ಪಂದ್ಯದಲ್ಲಿ ರನ್ ಗಳಿಸಲು ವಿಫಲವಾಗಿದ್ದ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕೊನೆಯ ಪಂದ್ಯದಲ್ಲಿ ಫಾರ್ಮ್‌ಗೆ ಮರಳುವ ಮೂಲಕ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದರು. ಶುಭಮನ್ ಗಿಲ್ 112 ರನ್ ಗಳಿಸುವ ಮೂಲಕ ಅಹಮದಾಬಾದ್‌ನಲ್ಲಿ ತಮ್ಮ ಉತ್ತಮ ದಾಖಲೆಯನ್ನು ಮುಂದುವರೆಸಿದರು.
ವಿರಾಟ್ ಕೊಹ್ಲಿ 55 ಎಸೆತಗಳಲ್ಲಿ 52 ರನ್ ಗಳಿಸಿದ್ದು ಭಾರತ ತಂಡದ ದೊಡ್ಡ ಆತಂಕವನ್ನು ದೂರ ಮಾಡಿದೆ. ಶ್ರೇಯಸ್ ಅಯ್ಯರ್ 64 ಎಸೆತಗಳಲ್ಲಿ 78 ರನ್ ಗಳಿಸಿ ಉತ್ತಮ ಫಾರ್ಮ್ ಮುಂದುವರೆಸಿದರು. 5ನೇ ಕ್ರಮಾಂಕದಲ್ಲಿ ಮತ್ತೆ ವಾಪಸ್ ಬಂದ ಕೆಎಲ್ ರಾಹುಲ್ 29 ಎಸೆತಗಳಲ್ಲಿ 40 ರನ್ ಗಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
ಕಳೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿದ್ದರು. ಭಾರತದ ಅಗ್ರ ಕ್ರಮಾಂಕದ ಆಟಗಾರರು ಫಾರ್ಮ್‌ಗೆ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಚಾಂಪಿಯನ್ಸ್ ಟ್ರೋಫಿ ಆರಂಭವಾಗಲು ಇನ್ನು ಒಂದು ವಾರ ಬಾಕಿ ಇದ್ದು ಭಾರತ ಇದೀಗ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಬೌಲಿಂಗ್‌ನಲ್ಲೂ ಭಾರತ ಮಿಂಚು
ಏಕದಿನ ಸರಣಿಯಲ್ಲೂ ಭಾರತದ ಬೌಲಿಂಗ್ ಉತ್ತಮವಾಗಿದ್ದು ಬುಮ್ರಾ ಅನುಪಸ್ಥಿತಿ ನಡುವೆಯೂ ಉತ್ತಮ ಪ್ರದರ್ಶನ ನೀಡುತ್ತಿದೆ. ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಕಡಿವಾಣ ಹಾಕಿದರು.
ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಭಾರತ ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಆಟಗಾರರು ವಿಶ್ವಾಸದಿಂದಲೇ ದುಬೈಗೆ ಪ್ರಯಾಣಿಸಲಿದ್ದಾರೆ.












Click it and Unblock the Notifications