Team India: 92 ವರ್ಷಗಳಲ್ಲಿ ಮೊದಲ ಬಾರಿಗೆ ಹೊಸ ದಾಖಲೆ ಬರೆದ ಭಾರತ; WTC ಅಂಕಪಟ್ಟಿ ಹೇಗಿದೆ ನೋಡಿ
ಚೆನ್ನೈನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 280 ರನ್‌ಗಳ ಬೃಹತ್ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯ ಗೆಲ್ಲುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದೆ. ಮೊದಲ ಬಾರಿಗೆ ಭಾರತ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಸೋಲಿಗಿಂತ ಹೆಚ್ಚು ಗೆಲುವುಗಳನ್ನು ಹೊಂದಿದೆ. ಗೆಲುವಿನ ಸರಾಸರಿ ಇದೀಗ ಸೋಲಿನ ಸರಾಸರಿಗಿಂತ ಹೆಚ್ಚಾಗಿದ್ದು, 92 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ಸೋಲಿಗಿಂತ ಹೆಚ್ಚಿನ ಪಂದ್ಯಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.
ಭಾರತ ತಂಡ ಈವರೆಗೂ ಒಟ್ಟು 580 ಟೆಸ್ಟ್ ಪಂದ್ಯಗಳನ್ನು ಆಡಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿನ ಬಳಿಕ ಭಾರತ ಒಟ್ಟು 179 ಪಂದ್ಯಗಳನ್ನು ಗೆದ್ದಿದೆ, 178 ಪಂದ್ಯಗಳನ್ನು ಸೋತಿದೆ. 222 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿದೆ. ಭಾರತ ಸೋಲಿಗಿಂತ ಗೆಲುವಿನ ಅನುಪಾತವನ್ನು ಹೆಚ್ಚಾಗಿ ಹೊಂದಿದೆ.

1932ರಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಆಡಿದೆ. ಸೋಲಿಗಿಂತ ಹೆಚ್ಚು ಗೆಲುವಿನ ಪ್ರಮಾಣವನ್ನು ಹೊಂದಲು 92 ವರ್ಷಗಳನ್ನು ತೆಗೆದುಕೊಂಡಿದೆ. ಭಾರತವನ್ನು ಹೊರತುಪಡಿಸಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಸೋಲಿಗಿಂತ ಹೆಚ್ಚು ಗೆಲುವಿನ ಸರಾಸರಿಯನ್ನು ಹೊಂದಿವೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ರವಿಚಂದ್ರನ್ ಅಶ್ವಿನ್‌ರ ಅದ್ಭುತ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಭಾರತ ದೊಡ್ಡ ಗೆಲುವು ಸಾಧಿಸಿತು. ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದರೆ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಪಡೆದರು. ಎರಡನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27ರಂದು ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ ರೋಹಿತ್ ಶರ್ಮಾ ಪಡೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ
ಈ ಗೆಲುವಿನ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಈ ಮೊದಲು ಕೂಡ ಭಾರತ ಮೊದಲ ಸ್ಥಾನದಲ್ಲೇ ಇದ್ದರೂ, ಇದೀಗ ಎರಡನೇ ಸ್ಥಾನದಲ್ಲಿರುವ ತಂಡದ ನಡುವಿನ ಅಂತರವನ್ನು ಹೆಚ್ಚಿಸಿಕೊಂಡಿದೆ. ಭಾರತ ಟೆಸ್ಟ್ ಪಂದ್ಯಗಳಲ್ಲಿ 7 ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳನ್ನು ಸೋತಿದ್ದು, 71. 67 ಪಿಸಿಟಿಯೊಂದಿಗೆ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದು 62.5 ಪಿಸಿಟಿಯೊಂದಿಗೆ ಎರಡನೇ ಸ್ಥಾನದಲ್ಲಿದೆ.












Click it and Unblock the Notifications