ಭಾರತದ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ 10 ವರ್ಷದ ಸಂಭ್ರಮ, ಫೈನಲ್ ಪಂದ್ಯದ ರೋಚಕತೆ ಹೇಗಿತ್ತು?
ಭಾರತದ ಪ್ರತಿಷ್ಠಿತ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಈಗ 10 ವರ್ಷದ ಸಂಭ್ರಮ, 2013ರ ಈ ದಿನ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಇತಿಹಾಸ ಸೃಷ್ಟಿಸಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 5 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಜೂನ್ 23, 2013ರಂದು ನಡೆದ ರೋಚಕ ಫೈನಲ್ ಪಂದ್ಯ ಇಂದಿಗೂ ಸ್ಮರಣೀಯ, ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ 129 ರನ್ ಗಳಿಸಿದ್ದ ಭಾರತ ಸುಲಭವಾಗಿ ಸೋಲುತ್ತದೆ ಎಂದೇ ಭಾವಿಸಲಾಗಿತ್ತು, ಆದರೆ ಭಾರತ ತಂಡ ಅಂದು ಮ್ಯಾಜಿಕ್ ಮಾಡಿತ್ತು, ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು 124 ರನ್‌ಗಳಿಗೆ ಕಟ್ಟಿ ಹಾಕಿ ರೋಚಕ ಗೆಲುವು ಸಾಧಿಸಿತ್ತು.

ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅಂದಿನ ಪಂದ್ಯದಲ್ಲಿ ಭಾರತದ ಗೆಲುವಿಗೆ ಪ್ರಮುಖ ಕಾರಣವಾಗಿದ್ದರು. ಮಳೆಯ ಕಾರಣದಿಂದಾಗಿ ಪಂದ್ಯವನ್ನು 20 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಭಾರತಕ್ಕೆ ಆಸರೆಯಾದ ಕೊಹ್ಲಿ, ಧವನ್, ಜಡೇಜಾ
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಶರ್ಮಾ 14 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಔಟಾದರು. ಶಿಖರ್ ಧವನ್ 24 ಎಸೆತಗಳಲ್ಲಿ 31 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 34 ಎಸೆತಗಳಲ್ಲಿ 44 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ನಂತರ ಬಂದ ದಿನೇಶ್ ಕಾರ್ತಿಕ್ 6 ರನ್ ಗಳಿಸಿದರೆ, ಸುರೇಶ್ ರೈನಾ ಕೇವಲ 1 ರನ್ ಗಳಿಸಿದರು, ನಾಯಕ ಧೋನಿ ಶೂನ್ಯಕ್ಕೆ ಔಟಾದರು.
ರವೀಂದ್ರ ಜಡೇಜಾ 25 ಎಸೆತಗಳಲ್ಲಿ 33 ರನ್ ಗಳಿಸುವ ಮೂಲಕ ಭಾರತ 129 ರನ್ ಗಳಿಸಲು ಸಹಾಯ ಮಾಡಿದರು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿತು. ರವಿ ಬೋಪಾರ 3 ವಿಕೆಟ್ ಪಡೆದು ಭಾರತವನ್ನು ಕಟ್ಟಿಹಾಕಿದ್ದರು.
ಅಶ್ವಿನ್, ಜಡೇಜಾ ಮ್ಯಾಜಿಕ್
ಈ ಸುಲಭ ಸವಾಲನ್ನು ಬೆನ್ನತ್ತಿದ ಇಂಗ್ಲೆಂಡ್‌ಗೆ ಭಾರತದ ಬೌಲಿಂಗ್ ಪಡೆ ಆಘಾತ ನೀಡಿತು. ನಾಯಕ ಅಲಸ್ಟೈರ್ ಕುಕ್ 2 ರನ್ ಗಳಿಸಿ ಔಟಾದರು, ಇಯಾನ್ ಬೆಲ್ 13 ರನ್ ಗಳಿಸಿದರು, ಜೋನಾಥನ್ ಟ್ರಾಟ್ 20 ರನ್ ಗಳಿಸಿದರು. ಜೋ ರೂಟ್ 7 ರನ್ ಗಳಿಸಿ ಔಟಾದರು. 8.4ಓವರ್ ಗಳಲ್ಲಿ 46 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ನಂತರ ಬಂದ ಇಯಾನ್ ಮಾರ್ಗನ್ 33 ಮತ್ತು ರವಿ ಬೊಪಾರ 30 ರನ್ ಗಳಿಸುವ ಮೂಲಕ ಬಹುತೇಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. 17.2 ಓವರ್ ಗಳಲ್ಲಿ 4 ವಿಕೆಟ್‌ಗೆ 110 ರನ್ ಗಳಿಸಿದ್ದ ಇಂಗ್ಲೆಂಡ್ 18.4 ಓವರ್ ಗಳಲ್ಲಿ 113 ರನ್ ಗಳಾಗುಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಬೇಕಿತ್ತು, ಅನುಭವಿ ಬೌಲರ್ ರವಿಚಂದ್ರನ್ ಅಶ್ವಿನ್ ಕೊನೆಯ ಓವರ್ ನಲ್ಲಿ ಮೋಡಿ ಮಾಡಿದರು. ಕೇವಲ 9 ರನ್ ನೀಡುವ ಮೂಲಕ ಭಾರತಕ್ಕೆ 5 ರನ್‌ಗಳ ರೋಚಕ ಜಯ ತಂದುಕೊಟ್ಟರು. ಜಡೇಜಾ, ಅಶ್ವಿನ್, ಇಶಾಂತ್ ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು.
ಆಲ್‌ರೌಂಡರ್ ಪ್ರದರ್ಶನಕ್ಕಾಗಿ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದು ಸಂಭ್ರಮಿಸಿತು. ಅದಾದ ನಂತರ ಭಾರತ 10 ವರ್ಷಗಳಲ್ಲಿ ಮತ್ತೆ ಐಸಿಸಿ ಕಪ್ ಗೆಲ್ಲಲು ವಿಫಲವಾಗಿದೆ.












Click it and Unblock the Notifications