ಹಾರ್ದಿಕ್ + ಇಶಾನ್= 50+50: ಭಾರತದ ಸಂಕಷ್ಟದಲ್ಲಿ ಜೊತೆಯಾದ ಗೆಳೆಯರು!
ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯದಲ್ಲಿ, ಟೀಂ ಇಂಡಿಯಾ ಇನ್ನೇನು ದೊಡ್ಡ ಆಘಾತ ಎದುರಿಸುವಾಗ ಭಾರತೀಯರಿಗೆ ಸಿಹಿಸುದ್ದಿ ಸಿಕ್ಕಿದೆ. ಒಂದೇ ಸಮನೆ ವಿಕೆಟ್ ಬಿದ್ದು, ಟೀಂ ಇಂಡಿಯಾ ಇನ್ನೇನು ಆಲೌಟ್ ಆಗಲಿದೆ ಅನ್ನೋ ಸಮಯಕ್ಕೆ ಭಾರತ ತಂಡ ಮೈಕೊಡವಿ ನಿಂತಿದೆ. ಭಾರತದ ದಾಂಡಿಗರು ಪಾಕಿಸ್ತಾನಿ ಬೌಲರ್ಸ್‌ಗೆ ತಿರುಗೇಟು ನೀಡಲು, ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಜೋಡಿ ಸಾಥ್ ನೀಡಿದೆ.
ಹೌದು, ಪಾಕಿಸ್ತಾನ ವಿರುದ್ಧ ಪಂದ್ಯದ ಆರಂಭದಲ್ಲೇ ಭಾರತಕ್ಕೆ ಸಿಹಿಸುದ್ದಿ ಸಿಕ್ಕಿತ್ತು. ಮಳೆ ಭೀತಿ ನಡುವೆ ಟಾಸ್ ಗೆದ್ದು ಬೀಗಿತ್ತು ಭಾರತ. ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕರಾಗಿ ಶುಭ್‌ಮನ್ ಗಿಲ್ & ರೋಹಿತ್ ಶರ್ಮಾ ಅಖಾಡಕ್ಕೆ ಪ್ರವೇಶ ಮಾಡಿದ್ದರು. ಆದ್ರೆ ಆರಂಭದಲ್ಲಿ ಚೆನ್ನಾಗಿ ಆಡಿದ್ದ ರೋಹಿತ್ ಶರ್ಮಾ ಔಟ್ ಆಗಿ ಪೆವಿಲಿಯನ್ ಸೇರಿದರು, ಇದಾದ ನಂತರ ವಿರಾಟ್ ಕೊಹ್ಲಿ & ಶ್ರೇಯಸ್ ಐಯ್ಯರ್ ಕೂಡ ಔಟ್ ಆದರು. ಅಷ್ಟರಲ್ಲಿ ಮಳೆ ಬಂದು ಆಟಕ್ಕೆ ಅಡ್ಡಿಯಾಗಿತ್ತು. ಆದರೆ ಮತ್ತೆ ಮ್ಯಾಚ್ ಶುರುವಾದ ನಂತರ ಭಾರತಕ್ಕೆ ಇನ್ನೊಂದು ಶಾಕ್ ಸಿಕ್ಕಿತ್ತು.

4ನೇ ವಿಕೆಟ್ ಕಳೆದುಕೊಂಡ ಭಾರತ
ಇನ್ನು ಮಳೆ ಕಾಟ ನಿಂತ ನಂತರ ಭಾರತ ಮೈಕೊಡವಿ ನಿಲ್ಲುವ ಸೂಚನೆ ನೀಡಿತ್ತು. ಈ ಸಂದರ್ಭದಲ್ಲೇ ಮತ್ತೊಂದು ವಿಕೆಟ್ ಬಿದ್ದಿತ್ತು. ಭಾರತ ತಂಡದ ಮೊತ್ತ 66 ರನ್ ಆಗಿದ್ದ ಸಂದರ್ಭದಲ್ಲೇ ಶುಭ್‌ಮನ್ ಗಿಲ್ ವಿಕೆಟ್ ಒಪ್ಪಿಸಿದರು. ಈ ಮೂಲಕ ಭಾರತ ಒಟ್ಟಾರೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗಲೇ ನೋಡಿ ಅಖಾಡಕ್ಕೆ ಎಂಟ್ರಿಯಾದ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಜೊತೆ ಸೇರಿ ಈ ಪಂದ್ಯದ ಗತಿಯನ್ನೇ ಬದಲಿಸಿದರು. ಹಾಗಾದ್ರೆ ಈಗ ಎಷ್ಟಾಗಿದೆ ಭಾರತದ ಸ್ಕೋರ್? ಪಾಕಿಸ್ತಾನ ವಿರುದ್ಧ ಮ್ಯಾಚ್ ಏನಾಗುತ್ತೆ? ಬನ್ನಿ ತಿಳಿಯೋಣ.
ಇಬ್ಬರದ್ದು ಅರ್ಧ ಶತಕದ ಕೊಡುಗೆ!
ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ತಲಾ ಅರ್ಧ ಶತಕದ ಗುರಿ ತಲುಪುವ ಮೂಲಕ ಭಾರತಕ್ಕೆ ನೆರವಾಗಿದ್ದಾರೆ. ಪಾಕಿಸ್ತಾನಿ ಬೌಲರ್‌ಗಳನ್ನು ಶಾಂತವಾಗಿ ಎದುರಿಸಿದ ಭಾರತದ ಈ ಇಬ್ಬರು ಬ್ಯಾಟ್ಸ್‌ಮನ್‌ಗಳು, ನಿಧಾನವಾಗಿ ರನ್ ಕದ್ದರು. ಹಾಗೇ ಸಮಯ ಸಿಕ್ಕಾಗೆಲ್ಲಾ ಬೌಂಡರಿ ಹೊಡೆದು ಉತ್ತಮವಾಗಿ ಆಡವಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್ ಜೋಡಿ ಭಾರತ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಬೆನ್ನೆಲೆಬಾಗಿ ನಿಂತರು.

ಎಲ್ಲವೂ ಚೆನ್ನಾಗಿಯೇ ಇತ್ತು, ಭಾರತ ನಿಧಾನವಾಗಿ ದೊಡ್ಡ ಮೊತ್ತ ಗಳಿಸುವತ್ತ ಮುಂದೆ ನುಗ್ಗಿತ್ತು. ಇನ್ನೇನು ಪಾಕಿಸ್ತಾನಕ್ಕೆ ಭಾರತದಿಂದ ಸವಾಲಿನ ಮೊತ್ತ ಪಕ್ಕಾ ಎನ್ನಲಾಗಿತ್ತು. ಆದರೆ 82 ರನ್ ಗಳಿಸಿದ್ದ ಇಶಾನ್ ಕಿಶನ್ ಔಟ್ ಆಗಿದ್ದು, ಇತ್ತೀಚಿನ ಮಾಹಿತಿಯ ಪ್ರಕಾರ ಭಾರತ ತಂಡದ ಮೊತ್ತ 217 ರನ್ ಆಗಿದ್ದು, 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಹಾಗೇ 40 ಓವರ್ ಮುಕ್ತಾಯವಾಗಿದ್ದು, ರವೀಂದ್ರ ಜಡೇಜಾ ಅಖಾಡ ಪ್ರವೇಶ ಮಾಡಿದ್ದಾರೆ. ಈ ಮೂಲಕ ಭಾರತ ಪಾಕಿಸ್ತಾನಿ ಬೌಲರ್‌ಗಳ ಬೆವರು ಇಳಿಸಲು ಸಜ್ಜಾಗಿದೆ.
ಶ್ರೀಲಂಕಾದ ಕ್ಯಾಂಡಿಯಲ್ಲಿನ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುತ್ತಿದೆ. 2023ರ ಏಷ್ಯಾ ಕಪ್ ಸರಣಿಯಲ್ಲೇ ಈ ಮ್ಯಾಚ್ ಹೈವೋಲ್ಟೇಜ್ ಆಗಿದ್ದರೂ, ಮಳೆ ಕಾಟಕ್ಕೆ ಫ್ಯಾನ್ಸ್ ಬೇಸರಗೊಂಡು ಕೂತಿದ್ದರು. ಆದರೆ ಹೇಗೋ ಪಂದ್ಯ ನಡೆಯುತ್ತಿದೆ. ಭಾರತ ತಂಡ ಆರಂಭದಲ್ಲಿ ಆಘಾತ ಎದುರಿಸಿದ್ದು ಇದೀಗ ಮತ್ತೆ ಕಂಬ್ಯಾಕ್ ಮಾಡಿದೆ. ಈ ಮೂಲಕ ಪಾಕಿಸ್ತಾನ ತಂಡಕ್ಕೆ ಟೀಂ ಇಂಡಿಯಾ ಆಟಗಾರರು ಶಾಕ್ ಕೊಟ್ಟಿದ್ದಾರೆ. ಇನ್ನೇನು 10 ಓವರ್ ಬಾಕಿ ಇದ್ದು, ಇಲ್ಲೇ ಮ್ಯಾಚ್ ಭಾಗಶಃ ನಿರ್ಧಾರವಾಗಲಿದೆ.












Click it and Unblock the Notifications