Sanju Samson: ಉಪ್ಪಾಳದಲ್ಲಿ ಸಂಜು ಸ್ಯಾಮ್ಸನ್ ಅಬ್ಬರ; ಟೀಕೆಗಳಿಗೆ ಶತಕದ ಮೂಲಕ ಉತ್ತರ
ಸಂಜು ಸ್ಯಾಮ್ಸನ್ ಕೊನೆಗೂ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ. ಹೈದರಾಬಾದ್‌ನ ಉಪ್ಪಾಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಬ್ಬರಕ್ಕೆ ಹಲವು ದಾಖಲೆಗಳು ನಿರ್ಮಾಣವಾಗಿವೆ. ಅವಕಾಶ ಸಿಕ್ಕಾಗ ಸಂಜು ಸ್ಯಾಮ್ಸನ್ ಬಳಸಿಕೊಳ್ಳುತ್ತಿಲ್ಲ ಎನ್ನುವ ಆರೋಪಗಳಿಗೆ ಇಂದು ಉತ್ತರ ಕೊಟ್ಟಿದ್ದಾರೆ.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ಆರಂಭದಲ್ಲೇ ಅಭಿಷೇಕ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಬಳಿಕ ಜೊತೆಯಾದ ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್, ಬಾಂಗ್ಲಾದೇಶ ಬೌಲರ್ ಗಳ ಬೆವರಿಳಿಸಿದರು.

ಅದರಲ್ಲೂ ಸಂಜು ಸ್ಯಾಮ್ಸನ್ ಉಪ್ಪಾಳದಲ್ಲಿ ರೌದ್ರಾವತಾರ ತಾಳಿದ್ದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅವಕಾಶಗಳು ಸಿಕ್ಕಾಗ ವಿಫಲವಾಗಿ ನಿರಾಸೆ ಅನುಭವಿಸುತ್ತಿದ್ದ ಅವರ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿತ್ತು, ಇಂದು ಅವರು ಆಡಿದ ಇನ್ನಿಂಗ್ಸ್ ಎಲ್ಲಾ ಟೀಕೆಗಳಿಗೆ ಉತ್ತರ ಎನ್ನುವಂತಿತ್ತು.
47 ಎಸೆತಗಳಲ್ಲಿ 11 ಬೌಂಡರಿ 8 ಭರ್ಜರಿ ಸಿಕ್ಸರ್ ಸಹಿತ 111 ರನ್ ಗಳಿಸುವ ಮೂಲಕ ಮಿಂಚಿದರು. ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಗಳಿಸಿದ ಮೊದಲ ಶತಕ ಇದಾಗಿದೆ. ಅದರಲ್ಲೂ ರಿಶಾದ್ ಹೊಸೈನ್ ಅವರ ಬೌಲಿಂಗ್‌ನಲ್ಲಿ ಸತತವಾಗಿ ಐದು ಸಿಕ್ಸರ್ ಬಾರಿಸಿ ಗಮನ ಸೆಳೆದರು. 29 ಎಸೆತಗಳಲ್ಲಿ 62 ರನ್ ಗಳಿಸಿದ್ದ ಅವರು, 35 ಎಸೆತಗಳಲ್ಲಿ 92 ರನ್ ಗಳಿಸಿ ಶತಕದ ಸನಿಹ ಬಂದರು. 40 ಎಸೆತಗಳಲ್ಲಿ ತಮ್ಮ ಚೊಚ್ಚಲ ಶತಕವನ್ನು ಗಳಿಸಿದೆ.
ಸ್ಥಾನ ಭದ್ರಪಡಿಸಿಕೊಂಡ ಸಂಜು ಸ್ಯಾಮ್ಸನ್
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದರು. ಸರಣಿಯ ಮೊದಲ ಟಿ20 ಪಂದ್ಯದಲ್ಲಿ 19 ಎಸೆತಗಳಲ್ಲಿ 29 ರನ್ ಗಳಿಸಿದ್ದ ಅವರು, ಎರಡನೇ ಪಂದ್ಯದಲ್ಲಿ 7 ಎಸೆತಗಳಲ್ಲಿ 10 ರನ್ ಗಳಿಸಿದ್ದರು. ಇದೇ ಅವರಿಗೆ ಕೊನೆಯ ಅವಕಾಶ ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಕೋಚ್ ಗೌತಮ್ ಗಂಭೀರ್, ಸ್ಯಾಮ್ಸನ್ ಮೇಲೆ ಭರವಸೆ ಇಟ್ಟು ಇಂದಿನ ಪಂದ್ಯದಲ್ಲಿ ಮತ್ತೊಂದು ಅವಕಾಶ ಕೊಟ್ಟಿದ್ದರು, ಸ್ಯಾಮ್ಸನ್ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ಈ ಶತಕದ ಬಳಿಕ ಸಂಜು ಸ್ಯಾಮ್ಸನ್ ಇನ್ನೂ ಹಲವು ಪಂದ್ಯಗಳಲ್ಲಿ ಭಾರತ ತಂಡದಲ್ಲಿ ಅವಕಾಶ ಪಡೆದುಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿರುವ ಅವರಿಗೆ ಈ ಶತಕ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.












Click it and Unblock the Notifications