Ind vs Aus: ಭಾರತಕ್ಕೆ ಮತ್ತೊಂದು ಆಘಾತ; ಮತ್ತೊಬ್ಬ ಆಟಗಾರನಿಗೆ ಗಾಯ
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಗೆಲ್ಲಲು ಭಾರತ ಮತ್ತು ಆಸ್ಟ್ರೇಲಿಯಾ ರಣತಂತ್ರ ಮಾಡುತ್ತಿವೆ. ಈಗಾಗಲೇ ಮೂರು ಪಂದ್ಯಗಳು ನಡೆದಿದ್ದು ಎರಡೂ ತಂಡಗಳು ಒಂದೊಂದು ಪಂದ್ಯ ಗೆದ್ದಿದ್ದು ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಿದೆ. 1-1 ರಲ್ಲಿ ಸರಣಿ ಸಮಬಲಗೊಂಡಿದ್ದು ಡಿಸೆಂಬರ್ 26 ರಿಂದ ಮೆಲ್ಬೋರ್ನ್‌ನಲ್ಲಿ ನಾಲ್ಕನೇ ಟೆಸ್ಟ್ ಆರಂಭವಾಗಲಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತಕ್ಕೆ ಬ್ಯಾಟಿಂಗ್ ದೊಡ್ಡ ಸಮಸ್ಯೆಯಾಗಿದೆ. ಕೆಎಲ್ ರಾಹುಲ್ ಹೊರತುಪಡಿಸಿ ಉಳಿದ ಆಟಗಾರರು ಪದೇ ಪದೇ ವಿಫಲವಾಗುತ್ತಿರುವುದು ಭಾರತಕ್ಕೆ ಹಿನ್ನಡೆಯಾಗಲು ಕಾರಣವಾಗಿದೆ. ಇದಕ್ಕಾಗಿಯೇ ನಾಲ್ಕನೇ ಟೆಸ್ಟ್‌ಗೆ ಮುನ್ನ ಭಾರತದ ಬ್ಯಾಟರ್ ಗಳು ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ನಾಲ್ಕನೇ ಟೆಸ್ಟ್‌ಗೆ ಮುನ್ನ ಭಾರತಕ್ಕೆ ಆಟಗಾರರ ಗಾಯದ ಸಮಸ್ಯೆ ಶುರುವಾಗಿದೆ.

ಶನಿವಾರ ಅಭ್ಯಾಸ ಮಾಡುವ ವೇಳೆ ಕೆಎಲ್ ರಾಹುಲ್ ಗಾಯಗೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು, ಈ ಬೆನ್ನಲ್ಲೇ ನಾಯಕ ರೋಹಿತ್ ಶರ್ಮಾ ಕೂಡ ಅಭ್ಯಾಸ ಮಾಡುವ ವೇಳೆ ಗಾಯಗೊಂಡಿದ್ದು ಭಾರತದ ಚಿಂತೆ ಹೆಚ್ಚಿಸಿದೆ. ಎಂಸಿಜಿ ಯಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಎಡ ಮೊಣಕಾಲಿಗೆ ಪೆಟ್ಟು ತಿಂದಿದ್ದಾರೆ.
ಅಭ್ಯಾಸ ನಿಲ್ಲಿಸಿ ವಿಶ್ರಾಂತಿ ಪಡೆದ ರೋಹಿತ್
ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರು ಚೆಂಡು ಎಸೆಯುವ ಸಂದರ್ಭದಲ್ಲಿ ರೋಹಿತ್ ಎಡಗಾಲಿಗೆ ಚೆಂಡು ತಾಗಿತು. ತಕ್ಷಣವೇ ರೋಹಿತ್ ಶರ್ಮಾ ತುಂಬಾ ನೋವಿನಿಂದ ಬಳಲಿದರು. ಸ್ವಲ್ಪ ಸಮಯ ಬ್ಯಾಟಿಂಗ್ ಮಾಡಲು ಪ್ರಯತ್ನಿಸಿದರೂ ಕೊನೆಗೆ ನೋವು ಹೆಚ್ಚಾಗಿದ್ದರಿಂದ ಅಭ್ಯಾಸ ನಿಲ್ಲಿಸಿ ಮೈದಾನದಿಂದ ಹೊರನಡೆದರು.
ನಾಲ್ಕನೇ ಟೆಸ್ಟ್ ಆರಂಭವಾಗಲು ಇನ್ನೂ ನಾಲ್ಕು ದಿನಗಳಿದ್ದು ರೋಹಿತ್ ಶರ್ಮಾ ಗಾಯದ ಗಂಭೀರವಾಗಿ ಚಿಂತಿಸುವ ಅಗತ್ಯವಿಲ್ಲ ಎಂದು ವರದಿಯಾಗಿದೆ. ಅವರು ಫಿಟ್ ಆಗಲಿದ್ದು ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಆಟಗಾರರು ಅಭ್ಯಾಸದ ವೇಳೆ ಗಾಯಗೊಳ್ಳುತ್ತಿರುವುದು ಫಿಟ್‌ನೆಸ್ ಮೇಲೆ ಪರಿಣಾಮ ಬೀರಲಿದೆ.
ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ಬ್ಯಾಟರ್ ಗಳು ಗಾಯಗೊಳ್ಳುವುದು ಹೊಸದೇನಲ್ಲ. ಕೆಎಲ್ ರಾಹುಲ್, ಸರ್ಫರಾಜ್ ಖಾನ್ ಮತ್ತು ವಿರಾಟ್ ಕೊಹ್ಲಿಯಂತಹ ಎಲ್ಲರಿಗೂ ಹೊಡೆತ ಬಿದ್ದಿದೆ. ಶುಭಮನ್ ಗಿಲ್ ಬೆರಳಿನ ಗಾಯದಿಂದ ಮೊದಲ ಟೆಸ್ಟ್ ಆಡದೇ ಬೆಂಚ್ ಕಾಯಬೇಕಾಯಿತು.
ಎರಡೂ ತಂಡಗಳಿಗೆ ಮೆಲ್ಬೋರ್ನ್ ಟೆಸ್ಟ್ ಅತ್ಯಂತ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಎರಡೂ ತಂಡಗಳು ಮುಂದಿನ ಎರಡೂ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಭಾರತಕ್ಕೆ ಮುಂದಿನ ಎರಡೂ ಪಂದ್ಯ ಮಾಡು ಇಲ್ಲವೇ ಮಡಿ ಎನ್ನುವಂತವಾಗಿದೆ. ಎರಡೂ ಟೆಸ್ಟ್ ಗೆದ್ದರೆ ಮಾತ್ರ ಭಾರತಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಲು ಅವಕಾಶವಿದ್ದು, ಮುಂದಿನ ಟೆಸ್ಟ್ ಗೆಲ್ಲಲು ರೋಹಿತ್ ಶರ್ಮಾ ಪಡೆ ಏನೆಲ್ಲಾ ಶ್ರಮ ಹಾಕಲಿದೆ ನೋಡಬೇಕಿದೆ.
ವಿರಾಟ್ ಕೊಹ್ಲಿ, ಶುಭಮನ್ ಗಿಲ್, ರೋಹಿತ್ ಶರ್ಮಾ, ಜೈಸ್ವಾಲ್, ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡರೆ ಭಾರತಕ್ಕೆ ಗೆಲುವು ಸುಲಭವಾಗಲಿದೆ.












Click it and Unblock the Notifications