Ind vs Aus: ಗಾಯಗೊಂಡ ಟೀಂ ಇಂಡಿಯಾ ವೇಗಿ; ಸಿಡ್ನಿ ಟೆಸ್ಟ್‌ನಲ್ಲಿ ಕನ್ನಡಿಗನಿಗೆ ಅವಕಾಶ?
ಶುಕ್ರವಾರದಿಂದ ಸಿಡ್ನಿಯಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್‌ಗೆ ಮುನ್ನ ಭಾರತದ ವೇಗದ ಬೌಲರ್ ಆಕಾಶ್ ದೀಪ್ ಗಾಯಗೊಂಡಿದ್ದಾರೆ. ಬ್ರಿಸ್ಬೇನ್ ಮತ್ತು ಮೆಲ್ಬೋರ್ನ್ ಟೆಸ್ಟ್ ನಲ್ಲಿ ಐದು ವಿಕೆಟ್ ಪಡೆದಿದ್ದ ಆಕಾಶ್ ದೀಪ್ ಬುಮ್ರಾಗೆ ನೆರವಾಗಿದ್ದರು ಇದೀಗ ಅವರು ಗಾಯಗೊಂಡಿರುವುದು ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ.
ಉತ್ತಮವಾಗಿ ಬೌಲಿಂಗ್ ಮಾಡಿದ್ದರೂ ಕೆಟ್ಟ ಫೀಲ್ಡಿಂಗ್ ಕಾರಣದಿಂದ ಹೆಚ್ಚಿನ ವಿಕೆಟ್ ಪಡೆಯುವಲ್ಲಿ ವಿಫಲವಾಗಿದ್ದರು. ಪಂದ್ಯಕ್ಕೆ ಮುನ್ನಾದಿನ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೋಚ್ ಗೌತಮ್ ಗಂಭೀರ್ ಆಕಾಶ್ ದೀಪ್ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಖಚಿತಪಡಿಸಿದರು.

ಪಿಚ್ ನೋಡಿದ ಬಳಿಕವೇ ಪ್ಲೇಯಿಂಗ್ ಇಲೆವೆನ್ ನಿರ್ಧರಿಸಲಾಗುವುದು ಎಂದು ಕೋಚ್ ಗಂಭೀರ್ ಹೇಳಿದ್ದಾರೆ. ನಾಯಕ ರೋಹಿತ್ ಶರ್ಮಾ ಬದಲಾಗಿ ಕೋಚ್ ಗಂಭೀರ್ ಮಾಧ್ಯಮ ಗೋಷ್ಠಿಗೆ ಹಾಜರಾಗಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತು. ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಆಡುತ್ತಾರಾ ಇಲ್ಲವಾ ಎನ್ನುವ ಬಗ್ಗೆ ಗೊಂದಲವಿದ್ದು ಬಹುತೇಕ ಅವರನ್ನು ಹೊರಗಿಡುವ ಸಾಧ್ಯತೆ ಇದೆ.
ಆಕಾಶ್ ದೀಪ್ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಟ್ಟಾರೆ 87.5 ಓವರ್ ಬೌಲಿಂಗ್ ಮಾಡಿದ್ದು ನಿಗದಿಗಿಂತ ಹೆಚ್ಚಿನ ಒತ್ತಡ ಬಿದ್ದಿದ್ದು ಬೆನ್ನು ನೋವಿಗೆ ಕಾರಣವಾಗಿದೆ. ಆಸ್ಟ್ರೇಲಿಯಾ ಮೈದಾನಗಳು ಯಾವಾಗಲೂ ವೇಗಿಗಳಿಗೆ ಸವಾಲಾಗಿದ್ದು, ಮೊಣಕಾಲು, ಪಾದ ಮತ್ತು ಬೆನ್ನು ನೋವಿನ ಸಮಸ್ಯೆ ಉಂಟುಮಾಡಬಹುದು.
ಆಕಾಶ್ ದೀಪ್ ಬದಲಾಗಿ ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆಯಬಹುದು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಗೆ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪ್ರಸಿದ್ಧ್ ಕೃಷ್ಣ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಗೆಲ್ಲಲೇಬೇಕಾದ ಒತ್ತಡದಲ್ಲಿ ಭಾರತ
ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-2 ಹಿನ್ನಡೆಯಲ್ಲಿದ್ದು, ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಳ್ಳಲು ಐದನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಸಿಡ್ನಿ ಟೆಸ್ಟ್ ಗೆದ್ದರೆ ಮಾತ್ರ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅವಕಾಶ ಜೀವಂತವಾಗಿರಲಿದೆ.
ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ
ಶುಕ್ರವಾರ ನಡೆಯಲಿರುವ ಟೆಸ್ಟ್ ಪಂದ್ಯಕ್ಕಾಗಿ ಈಗಾಗಲೇ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್‌ರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಡಲಾಗಿದ್ದು, ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದರ್ಪಾಣೆ ಮಾಡಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ದೃಢಪಡಿಸಿದ್ದಾರೆ.
2014/15ರ ನಂತರ ಬಳಿಕ ಬಾರಿಗೆ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ನಿರೀಕ್ಷೆಯಲ್ಲಿ ಆಸ್ಟ್ರೇಲಿಯಾ ಇದ್ದು, ಸಿಡ್ನಿ ಟೆಸ್ಟ್ ಗೆಲ್ಲುವ ವಿಶ್ವಾಸದಲ್ಲಿದೆ.
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್
ಸ್ಯಾಮ್ ಕೋನ್‌ಸ್ಟಾಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶಾನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಬ್ಯೂ ವೆಬ್‌ಸ್ಟರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.












Click it and Unblock the Notifications