RCB: SRH ವಿರುದ್ಧ ಸೋತರೂ ಆರ್‌ಸಿಬಿಗೆ ಇದೆ ಅಗ್ರ ಸ್ಥಾನ ಪಡೆಯುವ ಅವಕಾಶ!
ಶುಕ್ರವಾರ ಲಕ್ನೋದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 42 ರನ್‌ಗಳಿಂದ ಸೋತಿರುವ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಐಪಿಎಲ್ 2025ರ ಅಂಕ ಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯುವ ಅವಕಾಶಕ್ಕೆ ಹೊಡೆತ ಬಿದ್ದಿದೆ. ಒಂದು ವೇಳೆ ಆರ್ ಸಿಬಿ ಎಸ್‌ಆರ್ ಎಚ್ ವಿರುದ್ಧ ಗೆದ್ದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುತ್ತಿದ್ದರು, ಈಗ ಎರಡನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆರ್ ಸಿಬಿಗೆ ಇದೀಗ ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ಸದ್ಯ ಮೂರನೇ ಸ್ಥಾನದಲ್ಲಿದ್ದರೂ ಅಗ್ರ-2 ಸ್ಥಾನ ಪಡೆಯುವ ಅವಕಾಶ ಉಳಿದುಕೊಂಡಿದೆ. ಆದರೆ ಈಗ ಉಳಿದ ತಂಡಗಳ ಸೋಲು ಗೆಲುವು ಮುಖ್ಯವಾಗುತ್ತದೆ. ಸಿಎಸ್‌ಕೆ, ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ತಂಡಗಳು ಮುಂದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಆರ್ ಸಿಬಿ ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವ ಸಾಧ್ಯತೆ ಇದೆ.

ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ, 18 ಅಂಕಗಳೊಂದಿಗೆ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ ಮತ್ತು ಆರ್ ಸಿಬಿ 17 ಅಂಕಗಳನ್ನು ಹೊಂದಿದ್ದರೂ ಪಂಜಾಬ್ ರನ್‌ರೇಟ್ ಉತ್ತಮವಾಗಿರುವ ಕಾರಣ ಎರಡನೇ ಸ್ತಾನದಲ್ಲಿದ್ದು, ಆರ್ ಸಿಬಿ ಮೂರನೇ ಸ್ಥಾನಕ್ಕೆ ಕುಸಿದಿದೆ. 16 ಅಂಕಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ನಾಲ್ಕನೇ ಸ್ಥಾನದಲ್ಲಿದೆ.
ಪ್ಲೇಆಫ್ ಲೆಕ್ಕಾಚಾರವೇನು?
ಶನಿವಾರ ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದರೆ, ಅವರು 17 ಅಂಕಗಳಲ್ಲೇ ಉಳಿಯುತ್ತಾರೆ. ಆದರೂ ಪಂಜಾಬ್ ಕಿಂಗ್ಸ್‌ಗೆ 19 ಅಂಕ ಪಡೆಯಲು ಅವಕಾಶ ಇರುತ್ತದೆ. ಆದರೆ ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಬೇಕಿದ್ದು ಈ ಪಂದ್ಯ ಅವರ ಅಗ್ರ 2 ಸ್ಥಾನವನ್ನು ನಿರ್ಧರಿಸುತ್ತದೆ.
ಭಾನುವಾರ ನಡೆಯುವ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಸಿಎಸ್‌ಕೆ ವಿರುದ್ಧ ಸೋತರೆ ಅವರು 18 ಅಂಕಗಳಲ್ಲೇ ಉಳಿಯುತ್ತಾರೆ. ಆಗ ಪಂಜಾಬ್ ಮತ್ತು ಆರ್ ಸಿಬಿಗೆ ಮಾತ್ರ 19 ಅಂಕ ಪಡೆಯುವ ಅವಕಾಶ ಇರುತ್ತದೆ. ಮಂಗಳವಾರ ನಡೆಯುವ ಪಂದ್ಯದಲ್ಲಿ ಆರ್ ಸಿಬಿ ಎಲ್‌ಎಸ್‌ಜಿ ವಿರುದ್ಧ ಗೆದ್ದರೆ ಮೊದಲ ಎರಡು ಸ್ಥಾನಗಳಲ್ಲಿ ಒಂದು ಸ್ಥಾನ ಖಚಿತವಾಗುತ್ತದೆ.
ಏನೇ ಆದರೂ ಆರ್ ಸಿಬಿ ಸದ್ಯ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೃಹತ್ ಗೆಲುವು ಸಾಧಿಸುವತ್ತ ಗಮನ ಹರಿಸಬೇಕಿದೆ. ಟಿಮ್ ಡೇವಿಡ್ ಗಾಯಗೊಂಡಿರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಅವರು ಎಲ್‌ಎಸ್‌ಜಿ ವಿರುದ್ಧದ ಪಂದ್ಯದ ವೇಳೆಗೆ ಫಿಟ್ ಆಗಬೇಕಿದೆ.












Click it and Unblock the Notifications