ಟೀಮ್ ಇಂಡಿಯಾದಲ್ಲಿ ಆರ್‌ಸಿಬಿಯ ಪಾಟಿದಾರ್ ಸ್ಥಾನ ಕಸಿದುಕೊಂಡ ಆ ಆಟಗಾರ ಯಾರು? ಹರ್ಭಜನ್ ಅಸಮಾಧಾನವೇಕೆ?
Team India T20: ಐಪಿಎಲ್ 2026 ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿಯಾಗಿ ಗೆಲುವು ಸಾಧಿಸಿ ಆರ್‌ಸಿಬಿ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೂ ನಾಯಕ ರಜತ್ ಪಾಟಿದಾರ್ ಅವರನ್ನು ಮುಂಬರುವ ಟಿ20 ಸರಣಿಗಳಿಂದ ಕೈಬಿಟ್ಟಿರುವುದು ಈಗ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಹಾಗೂ ಏಷ್ಯನ್ ಗೇಮ್ಸ್‌ಗಾಗಿ ಬಿಸಿಸಿಐ ಪ್ರಕಟಿಸಿರುವ ಭಾರತ ಟಿ20 ತಂಡದಲ್ಲಿ ಪಾಟಿದಾರ್ ಅವರ ಹೆಸರಿಲ್ಲದಿರುವುದು ಮಾಜಿ ಆಟಗಾರರು ಮತ್ತು ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಸಮಿತಿಯ ಈ ನಿರ್ಧಾರವನ್ನು ಹಿರಿಯ ಕ್ರಿಕೆಟಿಗರು ಬಹಿರಂಗವಾಗಿಯೇ ಪ್ರಶ್ನಿಸಿದ್ದಾರೆ.

ಅಸಮಾಧಾನ ಹೊರಹಾಕಿದ ಹರ್ಭಜನ್ ಸಿಂಗ್
ಭಾರತ ತಂಡದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್‌ನ ಬಿಸಿಸಿಐ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಟೀಮ್ ಇಂಡಿಯಾದಲ್ಲಿ ರಜತ್ ಪಾಟಿದಾರ್ ಅವರ ಹೆಸರಿಲ್ಲದಿರುವುದು ತುಂಬಾ ಬೇಸರ ತಂದಿದೆ. ಭಾರತ ತಂಡಕ್ಕೆ ಆಯ್ಕೆಯಾಗಲು ಅವರು ಇನ್ನೇನು ಮಾಡಬೇಕು? ಐಪಿಎಲ್‌ನಲ್ಲಿ ಬರೋಬ್ಬರಿ 501 ರನ್ ಗಳಿಸಿದ್ದಾರೆ ಮತ್ತು ಅವರ ಸ್ಟ್ರೈಕ್ ರೇಟ್ ಸುಮಾರು 200ರಷ್ಟಿದೆ. ಇದು ನಿಜಕ್ಕೂ ಅನ್ಯಾಯ. ಸದ್ಯದ ಪರಿಸ್ಥಿತಿಯಲ್ಲಿ ಅವರು ಭಾರತದ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ. ಉತ್ತಮ ತಂತ್ರಗಾರಿಕೆ ಹೊಂದಿರುವ ಅವರನ್ನು ಕೈಬಿಟ್ಟಿರುವುದು ಸರಿಯಲ್ಲ,' ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದೆಡೆ ಮಾಜಿ ಮುಖ್ಯ ಆಯ್ಕೆಗಾರ ಕೆ.ಶ್ರೀಕಾಂತ್ ಕೂಡ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರಗಳನ್ನು ಕಟುವಾಗಿ ಟೀಕಿಸಿದ್ದಾರೆ. ತಂಡದಲ್ಲಿ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಆಯ್ಕೆಯನ್ನು ಪ್ರಶ್ನಿಸಿರುವ ಅವರು, 'ಪಾಟಿದಾರ್ ಅವರಂತಹ ಪ್ರದರ್ಶನ ನೀಡಿದ ಆಟಗಾರನಿಗೆ ಮೊದಲ ಆದ್ಯತೆ ನೀಡಬೇಕಿತ್ತು,' ಎಂದು ಹೇಳಿದ್ದಾರೆ.
ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ಪಾಟಿದಾರ್
ರಜತ್ ಪಾಟಿದಾರ್ ಅವರ ಬ್ಯಾಟಿಂಗ್ ನೋಡಿದರೆ, ಪವರ್‌ಪ್ಲೇ ನಂತರ ಅವರು ಎಷ್ಟು ಅಪಾಯಕಾರಿಯಾಗಿದ್ದರು ಎಂಬುದು ತಿಳಿಯುತ್ತದೆ. 7 ರಿಂದ 11 ಓವರ್‌ಗಳ ನಡುವೆ 190ರ ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಗಳಿಸಿದ್ದ ಅವರು 12 ರಿಂದ 16 ಓವರ್‌ಗಳ ನಡುವಿನ ಮಧ್ಯಮ ಓವರ್‌ಗಳಲ್ಲಿ ಬೌಲರ್‌ಗಳ ಮೇಲೆ ಸವಾರಿ ಮಾಡಿದ್ದಾರೆ. ಈ ಅವಧಿಯಲ್ಲಿ ಅವರು 108 ಎಸೆತಗಳಲ್ಲಿ 216.67ರ ಸ್ಟ್ರೈಕ್ ರೇಟ್‌ನಲ್ಲಿ 234 ರನ್ ಚಚ್ಚಿದ್ದಾರೆ. ಇನ್ನು ಡೆತ್ ಓವರ್‌ಗಳಲ್ಲಿ ಅವರ ಸ್ಟ್ರೈಕ್ ರೇಟ್ 278.57ಕ್ಕೆ ಏರಿಕೆ ಕಂಡಿತ್ತು. ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಅವರಿಗಿಂತಲೂ ಪಾಟಿದಾರ್ ಅವರ ಸ್ಟ್ರೈಕ್ ರೇಟ್ ಉತ್ತಮವಾಗಿದೆ.
ಅಜಿತ್ ಅಗರ್ಕರ್ ನೀಡಿದ ಸಮರ್ಥನೆ ಏನು?
ಪಾಟಿದಾರ್ ಅವರನ್ನು ತಂಡದಿಂದ ಹೊರಗಿಟ್ಟಿರುವ ಕುರಿತು ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. 'ನಾವು ಆಯ್ಕೆ ಪ್ರಕ್ರಿಯೆಯಲ್ಲಿ ಸಾಕಷ್ಟು ಆಟಗಾರರ ಬಗ್ಗೆ ಸುದೀರ್ಘವಾಗಿ ಚರ್ಚಿಸುತ್ತೇವೆ. ಕೇವಲ ಕುಳಿತು 15 ಹೆಸರುಗಳನ್ನು ಬರೆಯುವುದು ಸುಲಭವಲ್ಲ. ಭಾರತದಲ್ಲಿ ಸದ್ಯ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ಪ್ರತಿ ಸರಣಿಗೂ ಕೆಲವೊಂದು ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ,' ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, 'ಅಂತಿಮವಾಗಿ ನಾವು ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ. ಕೆಲವು ಉತ್ತಮ ಆಟಗಾರರು ತಂಡದಿಂದ ಹೊರಗುಳಿಯುವುದು ಸಹಜ. ಆದರೆ ಪ್ರಸ್ತುತ ಆಯ್ಕೆ ಆಗಿರುವ ತಂಡದ ಬಗ್ಗೆ ನಮಗೆ ತೃಪ್ತಿಯಿದೆ,' ಎಂದು ಅಗರ್ಕರ್ ಹೇಳಿದ್ದಾರೆ. ಆದರೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದು, ಮಿಡ್ಲ್ ಓವರ್‌ಗಳಲ್ಲಿ ರನ್ ಮಳೆ ಹರಿಸಿದ ನಾಯಕನಿಗೆ ಅಂತಾರಾಷ್ಟ್ರೀಯ ಅನುಭವದ ನೆಪ ಒಡ್ಡಿ ಶ್ರೇಯಸ್ ಅಯ್ಯರ್ ಅವರಿಗೆ ಮಣೆ ಹಾಕಿರುವುದು ಕ್ರಿಕೆಟ್ ವಲಯದಲ್ಲಿ ತಾರತಮ್ಯದ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications