Gautam Gambhir: ಮತ್ತೆ ಕೆಕೆಆರ್ ತಂಡಕ್ಕೆ ಗಂಭೀರ್ ವಾಪಸ್?
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಅವಧಿಯಲ್ಲಿ ತಂಡವು ಚಾಂಪಿಯನ್ ಆಗಿದೆ. ಐಪಿಎಲ್ ಯಶಸ್ಸಿನ ಬೆನ್ನಲ್ಲೇ ಗಂಭೀರ್ ಅವರನ್ನು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಆಯ್ಕೆ ಮಾಡಲಾಯಿತು. ಗಂಭೀರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಭಾರತ ತಂಡವು ಯಶಸ್ಸಿನ ಮತ್ತೊಂದು ಹಂತಕ್ಕೆ ಹೋಗುತ್ತದೆ ಎಂದೇ ನಿರೀಕ್ಷೆ ಮಾಡಲಾಗಿತ್ತು.
ಆದರೆ, ಗಂಭೀರ್ ಕೋಚ್ ಆದ ಕೆಲವು ತಿಂಗಳಲ್ಲೇ ಭಾರತಕ್ಕೆ ಸಾಲು ಸಾಲು ಅವಮಾನಕರ ಸೋಲುಗಳು ಎದುರಾಗಿದೆ. ಗಂಭೀರ್ ಕೋಚ್ ಆದ ಬಳಿಕ ಭಾರತ 28 ವರ್ಷಗಳ ಬಳಿಕ ಶ್ರೀಲಂಕಾ ಎದುರು ಏಕದಿನ ಸರಣಿಯಲ್ಲಿ ಸೋಲನುಭವಿಸಿತು. 36 ವರ್ಷಗಳ ಬಳಿಕ ನ್ಯೂಜಿಲೆಂಟ್ ವಿರುದ್ಧ ಟೆಸ್ಟ್ ಪಂದ್ಯವನ್ನು ಸೋತು ಕೆಟ್ಟ ದಾಖಲೆ ಮಾಡಿತು. 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿಯನ್ನು ಕಳೆದುಕೊಂಡರೆ, 92 ವರ್ಷಗಳ ಭಾರತ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿಗೆ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್‌ವಾಶ್ ಆಗಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸೋಲು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಮಾಡಿದ ಎಡವಟ್ಟುಗಳೇ ಭಾರತದ ಸೋಲಿಗೆ ಕಾರಣ ಎಂದು ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿದೆ. ಬಿಸಿಸಿಐ ಕೂಡ ಈ ಸೋಲನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳುವ ಸೂಚನೆ ಕೊಟ್ಟಿದೆ.
ಇದೇ ಕೊನೆಯ ಅವಕಾಶ
ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲಿನ ಬಳಿಕ ಭಾರತ ಆಸ್ಟ್ರೇಲಿಯಾಗೆ ಪ್ರಯಾಣ ಮಾಡಲಿದೆ. ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಇದು ಗಂಭೀರ್ ಗೆ ಕೊನೆಯ ಅವಕಾಶ ಎನ್ನಲಾಗಿದೆ. ಭಾರತ ಏನಾದರೂ ಸರಣಿಯಲ್ಲಿ ಸೋತರೆ ಗೌತಮ್ ಗಂಭೀರ್ ಮುಖ್ಯ ಕೋಚ್ ಸ್ಥಾನವನ್ನು ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಗಳಿದೆ ಎಂದು ವರದಿಯಾಗಿದೆ.
ಒಂದು ವೇಳೆ ಗಂಭೀರ್ ರನ್ನು ಉಳಿಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದರೂ, ಟೆಸ್ಟ್ ತಂಡಕ್ಕೆ ಕೋಚ್ ಆಗಿ ಮತ್ತೊಬ್ಬರನ್ನು ನೇಮಕ ಮಾಡುವ ಸಾಧ್ಯತೆ ಇದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಇರುವ ಕಾರಣ, ಬಿಸಿಸಿಐ ಎಲ್ಲವನ್ನೂ ಎಚ್ಚರಿಕೆಯಿಂದ ಗಮನಿಸುತ್ತಿದೆ.
ಕೆಲವು ವರದಿಗಳ ಪ್ರಕಾರ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋಲನುಭವಿಸಿದರೆ, ಟೆಸ್ಟ್ ಮಾದರಿಯಲ್ಲಿ ಕೋಚ್ ಆಗಲು ವಿವಿಎಸ್ ಲಕ್ಷ್ಮಣ್ ಅವರಂತಹ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ಗಂಭೀರ್ ಇಂತಹ ಬದಲಾವಣೆಗೆ ಒಪ್ಪಿಕೊಳ್ಳದೇ ಇದ್ದರೆ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದಲೇ ತೆಗೆಯುವ ಬಗ್ಗೆ ಬಿಸಿಸಿಐ ಚಿಂತಿಸಬಹುದು. ಶುಕ್ರವಾರ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಭಾರತದ ಏಕದಿನ ಮತ್ತು ಟೆಸ್ಟ್ ನಾಯಕ ರೋಹಿತ್ ಶರ್ಮಾ ಜೊತೆ ಗೌತಮ್ ಗಂಭೀರ್ 6 ಗಂಟೆಗಳ ಕಾಲ ಸುದಿರ್ಘ ಚರ್ಚೆ ನಡೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೋಲಿಗೆ ಕಾರಣಗಳು, ಆಸ್ಟ್ರೇಲಿಯಾ ವಿರುದ್ದದ ಸರಣಿಗೆ ತಯಾರಿ ಬಗ್ಗೆ ಚರ್ಚೆ ನಡೆದಿದೆ.
ಒಂದು ವೇಳೆ ಗೌತಮ್ ಗಂಭೀರ್ ರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಲು ಬಿಸಿಸಿಐ ಮುಂದಾದರೆ ಅವರು ಮತ್ತೆ ಕೆಕೆಆರ್ ತಂಡಕ್ಕೆ ವಾಪಸಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.












Click it and Unblock the Notifications