
FIFA U-17 Women's World Cup; ಭಾರತಕ್ಕೆ ಅಮೆರಿಕ ಎದುರಾಳಿ; ಇಲ್ಲಿದೆ ವೇಳಾಪಟ್ಟಿ
ಭುವನೇಶ್ವರ್, ಅ. 11: ಭಾರತೀಯ ಫುಟ್ಬಾಲ್ ಕ್ಷೇತ್ರದ ಮಹತ್ವದ ಒಂದು ಮೈಲಿಗಲ್ಲು ಆಗಲಿರುವ ಫೀಫಾ ಟೂರ್ನಿ ಇಂದು ಮಂಗಳವಾರ ಒಡಿಶಾ ರಾಜಧಾನಿಯಲ್ಲಿ ಚಾಲನೆಗೊಳ್ಳುತ್ತಿದೆ. 17 ವರ್ಷ ವಯೋಮಾನದೊಳಗಿನ ಮಹಿಳೆಯರ ಫೀಫಾ ವಿಶ್ವಕಪ್ ಟೂರ್ನಿ ಭಾರತದ ಇದೇ ಮೊದಲ ಬಾರಿಗೆ ನಡೆಯುತ್ತಿದೆ.
2017ರಲ್ಲಿ ಪುರುಷರ ಅಂಡರ್-17 ವಿಶ್ವಕಪ್ ಅನ್ನು ಭಾರತ ಆಯೋಜಿಸಿತ್ತು. ಐದು ವರ್ಷಗಳ ಬಳಿಕ ಅಂಡರ್-17 ಮಹಿಳೆಯರ ವರ್ಲ್ಡ್ ಕಪ್ ನಡೆಯುತ್ತಿದೆ. ಆತಿಥೇಯ ದೇಶವಾಗಿ ಭಾರತ ತಂಡ ಈ ಟೂರ್ನಿಯಲ್ಲಿ ಆಡುವ ಅಪೂರ್ವ ಅವಕಾಶ ಪಡೆದಿದೆ.
ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಹೇಳಲು ಸಜ್ಜಾದ ಲಿಯಾನಲ್ ಮೆಸ್ಸಿ: ಇದೇ ಕೊನೆ ಟೂರ್ನಿ?
ಇಂದು ಮಂಗಳವಾರ ಪಂದ್ಯಾವಳಿ ಆರಂಭವಾಗುತ್ತಿದೆ. ಭುವನೇಶ್ವರ್, ನವಿ ಮುಂಬೈ ಮತ್ತು ಗೋವಾ ನಗರಗಳಲ್ಲಿ ಪಂದ್ಯಗಳು ಜರುಗಲಿವೆ. ಮೊದಲ ಪಂದ್ಯ ಮೊರಾಕೋ ಮತ್ತು ಬ್ರೆಜಿಲ್ ಹಾಗೂ ಚಿಲಿ ಮತ್ತು ನ್ಯೂಜಿಲೆಂಡ್ ಮಧ್ಯೆ ಇದೆ. ಇಂದು ನಾಲ್ಕು ಪಂದ್ಯಗಳು ನಡೆಯುತ್ತಿವೆ. ಆತಿಥೇಯ ಭಾರತ ಮತ್ತು ಅಮೆರಿಕ ನಡುವಿನ ಪಂದ್ಯವೂ ಇಂದು ನಡೆಯುತ್ತದೆ.
ಕೊರಿಯನ್ನರು ಮೂರು ಬಾರಿ ಚಾಂಪಿಯನ್ಸ್
ಈಗ ನಡೆಯುತ್ತಿರುವ ಅಂಡರ್-17 ಮಹಿಳೆಯರ ಫೀಫಾ ವಿಶ್ವಕಪ್ ಏಳನೇ ಪಂದ್ಯಾವಳಿಯಾಗಿದೆ. 2008ರಲ್ಲಿ ಶುರುವಾದ ಈ ಟೂರ್ನಿಯಲ್ಲಿ ಉತ್ತರ ಕೊರಿಯಾ ಬಾಲಕಿಯರು ಎರಡು ಬಾರಿ ಚಾಂಪಿಯನ್ಸ್ ಎನಿಸಿದ್ದಾರೆ. ದಕ್ಷಿಣ ಕೊರಿಯಾ, ಫ್ರಾನ್ಸ್, ಜಪಾನ್ ಮತ್ತು ಸ್ಪೇನ್ ದೇಶದ ಹುಡುಗಿಯರು ಒಂದೊಂದು ಬಾರಿ ಗೆದ್ದಿದ್ದಾರೆ. ಈವರೆಗೆ ಆರು ಬಾರಿ ಚಾಂಪಿಯನ್ ಆಗಿರುವವರಲ್ಲಿ ನಾಲ್ಕು ತಂಡಗಳು ಏಷ್ಯಾದವೇ ಆಗಿರುವುದು ವಿಶೇಷ.
ಕಳೆದ ಬಾರಿ ಉರುಗ್ವೆಯಲ್ಲಿ ನಡೆದ ಬಾಲಕಿಯರ ಅಂಡರ್-17 ವರ್ಲ್ಡ್ ಕಪ್ ಅನ್ನು ಸ್ಪೇನ್ ಗೆದ್ದುಕೊಂಡಿತು.
ಈ ಬಾರಿಯ ವಿಶ್ವಕಪ್
2020ರಲ್ಲೇ ಭಾರತದಲ್ಲಿ ಈ ಟೂರ್ನಿ ನಡೆಯಬೇಕಿತ್ತು. ಕೋವಿಡ್ ಕಾರಣದಿಂದ ಮುಂದೂಡಲಾಗಿ ಈಗ ನಡೆಯುತ್ತಿದೆ. ಭಾರತ ಈ ಟೂರ್ನಿಯಲ್ಲಿ ಆಡುತ್ತಿರುವುದು ಇದೇ ಮೊದಲು. ಆತಿಥೇಯ ದೇಶವಾದ ಕಾರಣಕ್ಕೆ ಈ ಅವಕಾಶ ಸಿಕ್ಕಿದೆ. ಭಾರತದಂತೆ ತಾಂಜಾನಿಯಾ ಮತ್ತು ಮೊರಾಕೋ ತಂಡಗಳೂ ಕೂಡ ಇದೇ ಮೊದಲ ಬಾರಿಗೆ ಈ ಟೂರ್ನಿ ಆಡುತ್ತಿವೆ.
ಒಂದೆಡೆ ಆರ್ಭಟಿಸಿದ ಕಿರಿಯರು, ಇನ್ನೊಂದೆಡೆ ಸೋತುಸುಣ್ಣವಾದ ಹಿರಿಯರು
2022ರ ಫೀಫಾ ಮಹಿಳೆಯರ ಅಂಡರ್-17 ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳಿವೆ. ತಲಾ ನಾಲ್ಕು ತಂಡಗಳಂತೆ ನಾಲ್ಕು ಗುಂಪುಗಳನ್ನು ಮಾಡಲಾಗಿದೆ. ಪ್ರತೀ ಗುಂಪಿನಿಂದ ಎರಡೆರಡು ತಂಡಗಳು ಕ್ವಾರ್ಟರ್‌ಫೈನಲ್ ಪ್ರವೇಶ ಮಾಡುತ್ತವೆ.

ಗ್ರೂಪ್ ಎ: ಭಾರತ, ಅಮೆರಿಕ, ಬ್ರೆಜಿಲ್ ಮತ್ತು ಮೊರಾಕೋ
ಗ್ರೂಪ್ ಬಿ: ಜರ್ಮನಿ, ನೈಜೀರಿಯಾ, ಚಿಲಿ ಮತ್ತು ನ್ಯೂಜಿಲೆಂಡ್
ಗ್ರೂಪ್ ಸಿ: ಸ್ಪೇನ್, ಕೊಲಂಬಿಯಾ, ಮೆಕ್ಸಿಕೋ ಮತ್ತು ಚೀನಾ
ಗ್ರೂಪ್ ಡಿ: ಜಪಾನ್, ಕೆನಡಾ, ತಾಂಜಾನಿಯಾ ಮತ್ತು ಫ್ರಾನ್ಸ್
ಎರಡು ಬಾರಿ ಚಾಂಪಿಯನ್ ಉತ್ತರ ಕೊರಿಯಾ ಮತ್ತು ಒಂದು ಬಾರಿ ಚಾಂಪಿಯನ್ ದಕ್ಷಿಣ ಕೊರಿಯಾ ಈ ಟೂರ್ನಿಯಲ್ಲಿ ಆಡುತ್ತಿಲ್ಲದಿರುವುದು ಬಿಟ್ಟರೆ ರೋಚಕ ಹಣಾಹಣಿಯನ್ನು ನಿರೀಕ್ಷಿಸಬಹುದು.
ವೇಳಾಪಟ್ಟಿ:
ಅಕ್ಟೋಬರ್ 11ರಂದು ಆರಂಭವಾಗುವ ಈ ಟೂರ್ನಿ ಅಕ್ಟೋಬರ್ 30ಕ್ಕೆ ಮುಗಿಯುತ್ತದೆ. ಅಕ್ಟೋಬರ್ 11, 12, 14, 15, 17, 18ರಂದು ಗ್ರೂಪ್ ಹಂತದ ಪಂದ್ಯಗಳು ನಡೆಯುತ್ತವೆ. ಒಂದು ದಿನದಲ್ಲಿ 4 ಪಂದ್ಯಗಳು ನಡೆಯುತ್ತವೆ. ಸಂಜೆ 4:30ಕ್ಕೆ ಎರಡು ಪಂದ್ಯಗಳು ಹಾಗೂ ರಾತ್ರಿ 8ಕ್ಕೆ ಎರಡು ಪಂದ್ಯಗಳು ನಡೆಯಲಿವೆ.
ಅಕ್ಟೋಬರ್ 21 ಮತ್ತು 22ರಂದು ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆಯುತ್ತವೆ.
ಅಕ್ಟೋಬರ್ 26ರಂದು ಸೆಮಿಫೈನಲ್, ಹಾಗು ಅಕ್ಟೋಬರ್ 30ರಂದು ಫೈನಲ್ ಹಾಗೂ ಮೂರನೇ ಸ್ಥಾನಕ್ಕೆ ಪಂದ್ಯಗಳು ನಡೆಯುತ್ತವೆ.
ಭಾರತದ ಪಂದ್ಯಗಳು:
ಅ. 11: ಭಾರತ ವರ್ಸಸ್ ಅಮೆರಿಕ
ಅ. 14: ಭಾರತ ವರ್ಸಸ್ ಮೊರಾಕೋ
ಅ. 17: ಭಾರತ ವರ್ಸಸ್ ಬ್ರೆಜಿಲ್
ಈ ಎಲ್ಲಾ ಪಂದ್ಯಗಳೂ ಒಡಿಶಾ ಜಿಲ್ಲೆ ಭುವನೇಶ್ವರ್‌ನ ಕಳಿಂಗ ಸ್ಟೇಡಿಯಂನಲ್ಲೇ ನಡೆಯುತ್ತವೆ.
ಪ್ರಸಾರ
ಫೀಫಾ ಅಂಡರ್-17 ಮಹಿಳೆಯರ ವಿಶ್ವಕಪ್ ಅನ್ನು ಸ್ಪೋರ್ಟ್ಸ್18 ವಾಹಿನಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಜಿಯೋ ಟಿವಿ ಮತ್ತು ವೂಟ್ ಸೆಲೆಕ್ಟ್ ಆ್ಯಪ್‌ಗಳಲ್ಲೂ ಲೈವ್ ಸ್ಟ್ರೀಮಿಂಗ್ ನೋಡಬಹುದು.
(ಒನ್ಇಂಡಿಯಾ ಸುದ್ದಿ)