ಇದು ಆಡಳಿತವಲ್ಲ, ಸಾರ್ವಜನಿಕರ ಶೋಷಣೆ: ಇಂಧನ ದರ ಏರಿಕೆಗೆ ಮೋದಿ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ₹3 ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಖಂಡಿಸಿದ್ದಾರೆ. "ಮೋದಿ ಸರ್ಕಾರವು ತನ್ನದೇ ಆಡಳಿತಾತ್ಮಕ ವೈಫಲ್ಯಗಳಿಗೆ ದೇಶದ ಜನರನ್ನು ಮತ್ತೊಮ್ಮೆ ಶಿಕ್ಷಿಸಿದೆ" ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಜನರ ಮೇಲೆ ಬಲವಂತ ಹೇರಿಕೆ
"ಇದು ಕೇವಲ ತೈಲ ಬೆಲೆ ಏರಿಕೆಯಲ್ಲ, ಬದಲಿಗೆ ಸಾಮಾನ್ಯ ಭಾರತೀಯರ ದೈನಂದಿನ ಜೀವನದ ಮೇಲಿನ ನೇರ ದಾಳಿಯಾಗಿದೆ. ಕೇಂದ್ರ ಸರ್ಕಾರದ ವಿಫಲ ವಿದೇಶಾಂಗ ನೀತಿ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಹಣದುಬ್ಬರವನ್ನು ಅತ್ಯಂತ ಬೇಜವಾಬ್ದಾರಿಯಿಂದ ನಿಭಾಯಿಸಿದ ಪರಿಣಾಮದ ವೆಚ್ಚವನ್ನು ಈಗ ಜನರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ನಾಗರಿಕರನ್ನು ರಕ್ಷಿಸುವ ಬದಲು, ಮೋದಿ ಸರ್ಕಾರವು ಸಾರ್ವಜನಿಕರನ್ನು ಕೇವಲ ಆದಾಯದ ಮೂಲವನ್ನಾಗಿ ಬಳಸಿಕೊಳ್ಳುತ್ತಿದೆ" ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹106 ದಾಟಿದ್ದು, ಡೀಸೆಲ್ ದರ ₹94ರ ಆಸುಪಾಸಿನಲ್ಲಿದೆ ಎಂದು ಉಲ್ಲೇಖಿಸಿರುವ ಅವರು, ಈ ಏರಿಕೆಯು ಕೇವಲ ಇಂಧನ ಪಂಪ್‌ಗಳಿಗೆ ಮಾತ್ರ ಸೀಮಿತವಾಗುವುದಿಲ್ಲ ಎಂದಿದ್ದಾರೆ. ಇದು ಸಾರಿಗೆ ವೆಚ್ಚ, ತರಕಾರಿ ಬೆಲೆ, ದಿನಸಿ ಬಿಲ್, ಹಾಲಿನ ದರ ಮತ್ತು ಮನೆ ನಿರ್ಮಾಣ ವೆಚ್ಚವನ್ನು ಹೆಚ್ಚಿಸಲಿದೆ. ಶಾಲಾ ವ್ಯಾನ್ ಶುಲ್ಕ, ಟ್ಯಾಕ್ಸಿ-ಆಟೋ ದರಗಳು ಹಾಗೂ ಕೃಷಿ ವೆಚ್ಚಗಳು ಗಗನಕ್ಕೇರಲಿವೆ. ಇದರಿಂದಾಗಿ ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಗೃಹ ಬಜೆಟ್ ನಿರ್ವಹಿಸುವ ಮಹಿಳೆಯರು ತೀವ್ರವಾಗಿ ತತ್ತರಿಸಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದ ದಿನಗಳನ್ನು ನೆನಪಿಸಿದ ಮುಖ್ಯಮಂತ್ರಿಗಳು, "ಕಚ್ಚಾ ತೈಲ ದರ ಇಳಿಕೆಯಾಗಿದ್ದಾಗ ಮೋದಿ ಸರ್ಕಾರ ಜನರಿಗೆ ಎಂದಿಗೂ ಅದರ ಪೂರ್ಣ ಲಾಭವನ್ನು ನೀಡಲಿಲ್ಲ. ಭಾರಿ ತೆರಿಗೆ ವಸೂಲಿ ಮಾಡಿ ತನ್ನ ಖಜಾನೆಯನ್ನು ತುಂಬಿಸಿಕೊಂಡಿತು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರಿಕೆಯಾದಾಗ ತಕ್ಷಣವೇ ಆ ಹೊರೆಯನ್ನು ನಾಗರಿಕರ ಹೆಗಲಿಗೆ ವರ್ಗಾಯಿಸುತ್ತದೆ. ಇದು ಆಡಳಿತವಲ್ಲ, ಇದು ಶೋಷಣೆ" ಎಂದು ಆರೋಪಿಸಿದ್ದಾರೆ.
ಪ್ರಧಾನಿ ರಾಜೀನಾಮೆಗೆ ಆಗ್ರಹ
ಹಣದುಬ್ಬರ ನಿಯಂತ್ರಣ, ರೂಪಾಯಿ ಮೌಲ್ಯದ ರಕ್ಷಣೆ ಮತ್ತು ಆರ್ಥಿಕ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಂಡವಾಳಶಾಹಿ ಸ್ನೇಹಿತರನ್ನು ರಕ್ಷಿಸಲು ತೋರುವ ತುರ್ತು ಮತ್ತು ಬದ್ಧತೆಯನ್ನು ಸಾಮಾನ್ಯ ಜನರನ್ನು ರಕ್ಷಿಸಲು ತೋರಿಸುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ಜನವಿರೋಧಿ ನಿರ್ಧಾರವನ್ನು ತಕ್ಷಣವೇ ಹಿಂಪಡೆದು, ಹೆಚ್ಚಿಸಲಾದ ₹3 ದರವನ್ನು ಕಡಿತಗೊಳಿಸಬೇಕು ಎಂದು ಒತ್ತಾಯಿಸಿರುವ ಸಿಎಂ, ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಜವಾಬ್ದಾರಿ ಹೊತ್ತು ತಕ್ಷಣವೇ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ನೇರ ದಾಳಿಯಾಗಿದೆ.
— Siddaramaiah (@siddaramaiah) May 15, 2026
ನಾವು ಅಂದುಕೊಂಡಂತೆ ಕೇಂದ್ರ ಸರ್ಕಾರವು ತನ್ನ… pic.twitter.com/psV8cQdaVl













Click it and Unblock the Notifications