India vs Pakistan: ವಿರಾಟ್ ಕೊಹ್ಲಿ ಶತಕ ತಪ್ಪಿಸಲು ಪಾಕ್ ಬೌಲರ್ ಕಳ್ಳಾಟ! ಮೈದಾನದಲ್ಲಿ ಅಭಿಮಾನಿಗಳ ಆಕ್ರೋಶ
ದುಬೈನಲ್ಲಿ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವಿನ ಮೂಲಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಹಾಲಿ ಚಾಂಪಿಯನ್ ಪಾಕಿಸ್ತಾನವನ್ನು ಪಂದ್ಯಾವಳಿಯಿಂದಲೇ ಹೊರಹಾಕಿದೆ. ಭಾರತದ ಗೆಲುವು ಖಚಿತವಾಗಿದ್ದರೂ, ವಿರಾಟ್ ಕೊಹ್ಲಿ ಶತಕ ಬಾರಿಸುತ್ತಾರಾ ಇಲ್ಲವಾ ಎಂದು ಅಭಿಮಾನಿಗಳು ಕ್ಷಣ ಕಾಲ ಆತಂಕಗೊಂಡಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 241 ರನ್ ಗಳಿಗೆ ಆಲೌಟ್ ಆಗಿತ್ತು. ಭಾರತ ಈ ಗುರಿಯನ್ನು ಬೆನ್ನಟ್ಟುವ ಮೂಲಕ ಸುಲಭವಾಗಿ ಗೆಲುವು ಸಾಧಿಸಿತು. ಭಾರತದ ಗೆಲುವಿಗೆ 2 ರನ್ ಬೇಕಿದ್ದಾಗ ಖುಶ್ದಿಲ್ ಶಾ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ವಿರಾಟ್ ಕೊಹ್ಲಿ 51ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸುವುದರ ಜೊತೆ ಭಾರತಕ್ಕೆ ಗೆಲುವು ತಂದುಕೊಟ್ಟರು. ಇದು ವಿರಾಟ್ ಕೊಹ್ಲಿ ಅವರ ಒಟ್ಟಾರೆ 82ನೇ ಅಂತಾರಾಷ್ಟ್ರೀಯ ಶತಕವಾಗಿದೆ. ಪಾಕಿಸ್ತಾನದ ವಿರುದ್ಧ ಇದು ನಾಲ್ಕನೇ ಶತಕವಾಗಿದೆ.

ಕೊಹ್ಲಿ ಶತಕ ತಪ್ಪಿಸಲು ಅಫ್ರಿದಿ ಪ್ರಯತ್ನ!
ಒಂದು ಹಂತದಲ್ಲಿ ಅಭಿಮಾನಿಗಳು ಕೊಹ್ಲಿ ಶತಕ ತಪ್ಪಿಸಿಕೊಳ್ಳುತ್ತಾರೆ ಎಂದು ಆತಂಕಗೊಂಡಿದ್ದರು. 41ನೇ ಓವರ್ ಅಂತ್ಯದ ವೇಳೆಗೆ ವಿರಾಟ್ ಕೊಹ್ಲಿ 87 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದರು, ಭಾರತದ ಗೆಲುವಿಗೆ 17 ರನ್ ಬೇಕಾಗಿತ್ತು, ಆದರೆ ಶಾಹಿನ್ ಅಫ್ರಿದಿ ಮೂರು ವೈಡ್ ಬಾಲ್ ಎಸೆಯುವ ಮೂಲಕ ಅಧಿಕ ರನ್‌ಗಳನ್ನು ಬಿಟ್ಟುಕೊಟ್ಟು ಕೊಹ್ಲಿ ಶತಕವನ್ನು ತಪ್ಪಿಸಲು ಪ್ರಯತ್ನಿಸಿದರು. ನಾಲ್ಕು ಎಸೆತಗಳಲ್ಲೇ ಅವರು ಮೂರು ವೈಡ್ ಎಸೆದಿದ್ದು ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳ ಸಿಟ್ಟಿಗೆ ಕಾರಣವಾಯಿತು.
ಕೂಡಲೇ ಮೈದಾನದಲ್ಲಿ ಪ್ರೇಕ್ಷಕರು ಜೋರಾಗಿ ಕೂಗಿದರು. ಶಾಹಿನ್ ಅಫ್ರಿದಿಗೆ ಲೂಸರ್, ಲೂಸರ್ ಎಂದು ಘೋಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಶಾಹಿನ್ ಅಫ್ರಿದಿ ಓವರ್ ಮುಗಿದಾಗ ಭಾರತಕ್ಕೆ 11 ರನ್ ಬೇಕಿತ್ತು ಮತ್ತು ಕೊಹ್ಲಿ ಶತಕ ಪೂರೈಸಲು 10 ರನ್‌ಗಳ ಅಗತ್ಯವಿತ್ತು.
ಪಂದ್ಯವನ್ನು ಸೋಲುವುದು ಖಚಿತವಾಗುತ್ತಿದ್ದಂತೆ ಪಾಕಿಸ್ತಾನ ಆಟಗಾರರು ನಿರ್ಲಕ್ಷ್ಯದಿಂದ ಆಟವನ್ನು ಮುಂದುವರೆಸಿದರು ಎನ್ನುವುದು ಅವರ ವರ್ತನೆಯಿಂದಲೇ ಗೊತ್ತಾಗುತ್ತಿತ್ತು. ವಿರಾಟ್ ಕೊಹ್ಲಿ ಪಾಕಿಗಳನ್ನು ಇನ್ನಿಲ್ಲದಂತೆ ಕಾಡಿದರು. ಶಾಹಿನ್ ಅಫ್ರಿದಿ ಸುಮ್ಮ ಸುಮ್ಮನೆ ತಮ್ಮ ಕೈಗಳಿಂದ ಬೇಲ್ಸ್ ಎಗರಿಸಿ ತಮ್ಮ ಹತಾಶೆ ತೋರಿಸಿದರು.
ಫಾರ್ಮ್ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ವಿರಾಟ್ ಕೊಹ್ಲಿ ಮಹತ್ವದ ಪಂದ್ಯದಲ್ಲೇ ಶತಕ ಗಳಿಸುವ ಮೂಲಕ ಉತ್ತರ ಕೊಟ್ಟಿದ್ದಾರೆ. ನನ್ನ ಆಟ ಇನ್ನೂ ಮುಗಿದಿಲ್ಲ ಎಂದು ಬ್ಯಾಟ್ ಮೂಲಕವೇ ಸಂದೇಶ ರವಾನಿಸಿದ್ದಾರೆ.
ಟೆನ್ಷನ್ ಹೆಚ್ಚಿಸಿದ್ದ ಪಾಂಡ್ಯ
ಅದಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಔಟಾದ ಬಳಿಕ ಬ್ಯಾಟಿಂಗ್ ಬಂದ ಹಾರ್ದಿಕ್ ಪಾಂಡ್ಯ ಬೌಂಡರಿ ಬಾರಿಸುವ ಮೂಲಕ ಪಂದ್ಯವನ್ನು ಬೇಗನೆ ಮುಗಿಸಲು ಉತ್ಸಾಹ ತೋರಿದರು. ಆಗಲೂ ಅಭಿಮಾನಿಗಳು ಪಾಂಡ್ಯ ಎಲ್ಲಿ ರನ್ ಬಾರಿಸಿ ಕೊಹ್ಲಿ ಶತಕ ತಪ್ಪಿಸುತ್ತಾರೋ ಎಂದು ಆತಂಕಗೊಂಡಿದ್ದರು. ಆದರೆ ಪಾಂಡ್ಯ ಔಟಾದ ಬಳಿಕ ಬಂದ ಅಕ್ಷರ್ ಪಟೇಲ್, ಒಂದೊಂದು ರನ್ ಓಡುವ ಮೂಲಕ ಕೊಹ್ಲಿಗೆ ಶತಕ ಪೂರೈಸಲು ಅವಕಾಶ ಮಾಡಿಕೊಟ್ಟರು.












Click it and Unblock the Notifications