ಐಸಿಸಿ ವಿಶ್ವಕಪ್: ಭಾರತ ತಂಡದ ಮತ್ತೊಂದು ದಾಖಲೆ, ಅತಿಹೆಚ್ಚು ಬಾರಿ 400 ರನ್ ಗಳಿಸಿದ ತಂಡಗಳು ಯಾವುವು?
ಭಾರತ ಕ್ರಿಕೆಟ್ ತಂಡ ಇಂದು, ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ತಂಡದ ವಿರುದ್ಧ ಬರೋಬ್ಬರಿ 410 ರನ್ ಗಳಿಸಿದೆ. ಈ ಮೂಲಕ ಹೊಸ ಇತಿಹಾಸ ಬರೆದಿದೆ ಭಾರತ. ಅದ್ರಲ್ಲೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಅತಿಹೆಚ್ಚು ಬಾರಿ 400 ರನ್ ಗಳಿಸಿದ ತಂಡಗಳ ಪೈಕಿ ಭಾರತ ಈಗ ಎಷ್ಟನೇ ಸ್ಥಾನದಲ್ಲಿ ಇದೆ ಗೊತ್ತಾ? ಭಾರತ ಇದುವರೆಗೆ ಏಕದಿನ ಕ್ರಿಕೆಟ್‌ನಲ್ಲಿ ಎಷ್ಟು ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ?
ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್ ಅಖಾಡದಲ್ಲಿ 400 ರನ್ ಗಳಿಸುವುದು ಅಂದ್ರೆ ದೊಡ್ಡ ಸಾಧನೆ ಆಗಿತ್ತು. ಆದ್ರೆ ಯಾವಾಗ 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯ ಟೀಂ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ 400 ರನ್ ಗಡಿ ದಾಟಿತ್ತೋ, ಅಲ್ಲಿಂದಲೇ ಹೊಸ ಮನ್ವಂತರ ಆರಂಭವಾಗಿತ್ತು. ಆದರೆ ದುರಾದೃಷ್ಟ ಏನಂದರೆ ಆಸ್ಟ್ರೇಲಿಯಾ ತಂಡ ಈ ಸಾಧನೆ ಮಾಡಿದ ಕೇವಲ 3-4 ಗಂಟೆಯ ಒಳಗಾಗಿ ಆ ಪಟ್ಟವನ್ನು ಕಳೆದುಕೊಂಡಿತ್ತು. ಯಾಕಂದ್ರೆ ಅಂದು ಆಸ್ಟ್ರೇಲಿಯಾ ನೀಡಿದ್ದ 435 ಗುರಿಯನ್ನು ಬೆನ್ನುಹತ್ತಿದ್ದ ದ.ಆಫ್ರಿಕಾದ ಕ್ರಿಕೆಟ್ ಪಡೆ, 438 ರನ್ ಬಾರಿಸುವ ಮೂಲಕ ಮತ್ತೊಂದು ಇತಿಹಾಸ ಬರೆದಿತ್ತು. ಇಂದು ಭಾರತ ಕೂಡ ಇದೇ ರೀತಿ ಹೊಸ ದಾಖಲೆ ನಿರ್ಮಿಸಿದೆ.

ಅತಿಹೆಚ್ಚು ಬಾರಿ 400 ರನ್ ದಾಖಲೆ
ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್ ಗಳಿಸುವುದು ಸುಲಭ, ಯಾಕಂದ್ರೆ ಟೆಸ್ಟ್‌ನಲ್ಲಿ ಓವರ್ ಲೆಕ್ಕಕ್ಕೆ ಇರಲ್ಲ. ಓವರ್ ಲೆಕ್ಕಕ್ಕೆ ಇದ್ದರೂ, 5 ದಿನ ಕಾಲಾವಕಾಶ ಇರುತ್ತೆ. ಆದರೆ ಏಕದಿನ ಕ್ರಿಕೆಟ್ ಈ ರೀತಿ ಇರುವುದಿಲ್ಲ, 50 ಓವರ್‌ಗಳ ನಿಗದಿತ ಸಮಯದಲ್ಲೇ ಒಂದು ತಂಡ ಇನ್ನಿಂಗ್ಸ್‌ನ ಮುಗಿಸಬೇಕು. ಹೀಗಿದ್ದಾಗ 300 ಬಾಲ್‌ನಲ್ಲಿ 400 ಬಾರಿಸುವುದು ಕಷ್ಟದ ವಿಚಾರ. ಆದರೆ ಹೀಗೆ 400 ಬಾರಿಸುವುದರಲ್ಲಿ ಭಾರತದ ಆಟಗಾರರು ಕಳೆದ 15 ವರ್ಷಗಳಿಂದ ಪಳಗಿದ್ದಾರೆ. ಹಾಗಾದರೆ ಭಾರತ ತಂಡ ಇಂದು ಕೂಡ ಸೇರಿದಂತೆ ಒಟ್ಟು ಎಷ್ಟುಬಾರಿ 400 ರನ್ ಗಳಿಸಿ, ದಾಖಲೆ ಬರೆದಿದೆ ಗೊತ್ತಾ?
7 ಬಾರಿ 400 ರನ್ ಗಳಿಸಿದೆ ಭಾರತ
ಭಾರತ ಕ್ರಿಕೆಟ್ ತಂಡ ಈವರೆಗೂ ಒಟ್ಟಾರೆ 7 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ. ಹೀಗೆ ಭಾರತವೇ 400 ರನ್ ಗಳಿಸುವುದರಲ್ಲಿ ನಂ. 1 ಸ್ಥಾನ ಪಡೆದಿದೆಯಾ? ಇಲ್ಲ ಇಲ್ಲ ಭಾರತ ತಂಡಕ್ಕಿಂತಲೂ ದಕ್ಷಿಣ ಆಫ್ರಿಕಾ ತಂಡ ಈ ವಿಚಾರದಲ್ಲಿ ಮುಂದೆ ಇದೆ. ಹೌದು ಭಾರತದ ಆಟಗಾರರು ಈವರೆಗೂ ಒಟ್ಟು 7 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದ್ದರೆ ದಕ್ಷಿಣ ಆಫ್ರಿಕಾ ತಂಡ 8 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ. ಇವರಿಬ್ಬರನ್ನು ಬಿಟ್ಟರೆ ಇಂಗ್ಲೆಂಡ್ ತಂಡ 5 ಬಾರಿ 400ಕ್ಕೂ ಹೆಚ್ಚು ರನ್ ಗಳಿಸಿದೆ, ಹಾಗೆ ಶ್ರೀಲಂಕಾ ತಂಡ 2 ಬಾರಿ, ಆಸ್ಟ್ರೇಲಿಯಾ ತಂಡ 2 ಬಾರಿ, ನ್ಯೂಜಿಲೆಂಡ್ ತಂಡ 2 ಬಾರಿ ಮತ್ತು ಜಿಂಬಾಬ್ವೆ ತಂಡ 1 ಬಾರಿ 400ಕ್ಕು ಹೆಚ್ಚು ರನ್ ಗಳಿಸಿದೆ.

ಪಾಕಿಸ್ತಾನ ಎಂದಿಗೂ ಮುಟ್ಟಿಲ್ಲ 400 ರನ್!
ಹೀಗೆ ಹಲವು ದೇಶಗಳು 400 ರನ್ ಬಾರಿಸಿ ಸಾಧನೆ ಮಾಡಿದ್ರೆ, ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಮಾತ್ರ ಈವರೆಗೂ ಒಂದೇ ಒಂದು ಬಾರಿ ಕೂಡ 400 ರನ್‌ನ ಗುರಿ ತಲುಪಿಲ್ಲ. ಜೊತೆಗೆ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಿರುವ ಹಲವಾರು ತಂಡಗಳು ಕೂಡ ಇನ್ನೂ 400ರ ಗುರಿ ತಲುಪಲು ಆಗಿಲ್ಲ. ಆದ್ರೆ ಭಾರತ ತಂಡಕ್ಕೆ ಮಾತ್ರ, ಈ ರೀತಿ 400 ರನ್ ಗಳಿಸುವುದು ನೀರು ಕುಡಿದಷ್ಟೇ ಸುಲಭವಾಗಿದೆ. ಅದರಲ್ಲೂ, 2023ರ ಐಸಿಸಿ ವಿಶ್ವಕಪ್ ಅಖಾಡದಲ್ಲಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ಭಾರತ ಬೆಂಗಳೂರು ಗ್ರೌಂಡ್‌ನಲ್ಲಿ ಹೊಸ ಇತಿಹಾಸವನ್ನ ಸೃಷ್ಟಿಸಿದೆ. ಅದು ದೀಪಾವಳಿ ಹಬ್ಬದ ದಿನ ಎಂಬುದೆ ಮತ್ತೊಂದು ವಿಶೇಷ.












Click it and Unblock the Notifications