ಸಂಕಷ್ಟದಲ್ಲಿ ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ ಇಂಗ್ಲೆಂಡ್; ಸೂಪರ್ 8 ಹಂತಕ್ಕೆ ಪ್ರವೇಶಿಸುವುದು ಕೂಡ ಡೌಟ್!
ಟಿ20 ವಿಶ್ವಕಪ್ 2024ರ ಪಂದ್ಯಾವಳಿ ಪಂದ್ಯದಿಂದ ಪಂದ್ಯಕ್ಕೆ ರೋಚಕವಾಗುತ್ತಿದೆ. ಐಪಿಎಲ್‌ನಲ್ಲಿ ರನ್ ಹೊಳೆಯನ್ನು ನೋಡಿದ್ದ ಕ್ರಿಕೆಟ್ ಅಭಿಮಾನಿಗಳು ಈಗ ವಿಶ್ವಕಪ್‌ನಲ್ಲಿ ಬೌಲರ್ ಗಳ ಮ್ಯಾಜಿಕ್ ನೋಡುತ್ತಿದ್ದಾರೆ.
ಕಡಿಮೆ ಸ್ಕೋರ್ ಪಂದ್ಯಗಳನ್ನು ರೋಚಕವಾಗಿ ಗೆಲ್ಲುವ ಮೂಲಕ, ಬ್ಯಾಟರ್ ಗಳಿಗೆ ಈ ವಿಶ್ವಕಪ್ ನಿಜವಾದ ಸವಾಲಾಗಿದೆ. ಸದ್ಯದ ಅಂಕಪಟ್ಟಿ ಪ್ರಕಾರ ಮೂರು ಪ್ರಮುಖ ತಂಡಗಳ ಸೂಪರ್ 8 ಸ್ಥಾನ ಅಪಾಯದಲ್ಲಿದೆ.

ಒಂದು ಗ್ರೂಪ್‌ನಲ್ಲಿ 5 ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ಒಟ್ಟು 20 ತಂಡಗಳು ಈ ಬಾರಿ ಪ್ರತಿಷ್ಠಿತ ಕಪ್‌ಗಾಗಿ ಸ್ಪರ್ಧೆ ಮಾಡುತ್ತಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಬಿ ಗುಂಪಿನಲ್ಲಿ ಆಡುತ್ತಿದ್ದು, ಇಂಗ್ಲೆಂಡ್ ಸದ್ಯ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಗ್ರೂಪ್ ಹಂತದಲ್ಲೇ ಹೊರಬೀಳುವ ಅಪಾಯದಲ್ಲಿದೆ.
ಸ್ಕಾಟ್ಲೆಂಡ್ ಕೈಯಲ್ಲಿದೆ ಇಂಗ್ಲೆಂಡ್ ಭವಿಷ್ಯ
3 ಪಂದ್ಯಗಳಲ್ಲಿ ಎರಡು ಪಂದ್ಯ ಗೆದ್ದು, ಒಂದು ಪಂದ್ಯ ಮಳೆಯಿಂದ ರದ್ದಾದ ಕಾರಣ ಸ್ಕಾಟ್ಲೆಂಡ್ 5 ಅಂಕಗಳೊಂದಿದೆ ಬಿ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಆಡಿರುವ 2 ಪಂದ್ಯಗಳನ್ನು ಗೆದ್ದಿದ್ದು 4 ಅಂಕಗಳನ್ನು ಪಡೆದು 2ನೇ ಸ್ಥಾನದಲ್ಲಿದೆ. ನಮೀಬಿಯಾ 2 ಪಂದ್ಯಗಳಲ್ಲಿ ಒಂದು ಸೋಲು ಒಂದು ಗೆಲುವಿನೊಂದಿಗೆ 2 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.
ಅಂಕಪಟ್ಟಿಯಲ್ಲಿರುವ ಸ್ಕಾಟ್ಲೆಂಡ್ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದ್ದು, ಕಡಿಮೆ ರನ್ ಅಂತರದಿಂದ ಸೋತರೆ ಎರಡನೇ ಸ್ಥಾನಕ್ಕೆ ಬರಲಿದೆ. ಇಂಗ್ಲೆಂಡ್ ಇನ್ನು ಎರಡು ಪಂದ್ಯಗಳನ್ನು ಆಡಲಿದ್ದು, ಒಮನ್ ಮತ್ತು ನಮೀಬಿಯಾ ತಂಡವನ್ನು ಎದುರಿಸಲಿದೆ.
ಎರಡೂ ಪಂದ್ಯಗಳಲ್ಲಿ ಭಾರಿ ರನ್ ಅಂತರದಿಂದ ಗೆದ್ದರೆ ಇಂಗ್ಲೆಂಡ್ ರನ್ ರೇಟ್ ಸ್ಕಾಟ್ಲೆಂಡ್‌ಗಿಂತ ಉತ್ತಮವಾದರೆ, ಎರಡನೇ ಸ್ಥಾನಕ್ಕೇರಿ ಸೂಪರ್ 8 ಹಂತಕ್ಕೆ ಪ್ರವೇಶಿಸಲಿದೆ. ಒಂದು ವೇಳೆ ಏನಾದರೂ ಮಳೆಯಿಂದ ಇಂಗ್ಲೆಂಡ್‌ನ ಒಂದು ಪಂದ್ಯ ರದ್ದಾದರೂ ವಿಶ್ವಕಪ್‌ನಿಂದ ಹೊರಬೀಳಲಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡಕ್ಕೆ ಇದು ದೊಡ್ಡ ಆಘಾತವಾಗಲಿದೆ. ಎರಡೂ ಪಂದ್ಯಗಳಿಗೆ ಮಳೆ ಅಡ್ಡಿಯಾಗದೆ, ಇಂಗ್ಲೆಂಡ್ ದೊಡ್ಡ ಅಂತರದಲ್ಲಿ ಗೆಲ್ಲಲಿ ಎಂದು ಇಂಗ್ಲೆಂಡ್ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.












Click it and Unblock the Notifications