Ashes 2023: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಜಯ: ಸರಣಿ ಜೀವಂತ
ಆಶಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ತಿರುಗಿಬಿದ್ದ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಸರಣಿಯನ್ನು ಇನ್ನೂ ಜೀವಂತವಾಗಿರಿಸಿದೆ. ಲೀಡ್ಸ್‌ನ ಹೆಡಿಂಗ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ರೋಚಕ ಗೆಲುವು ಸಾಧಿಸಿ ಬೀಗಿತು.
ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಇಂಗ್ಲೆಂಡ್ ಭಾರಿ ಟೀಕೆಗೆ ಗುರಿಯಾಗಿತ್ತು. ಮೂರನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇಂಗ್ಲೆಂಡ್ ಆಡುವ ಬಳಗದಲ್ಲಿ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 263 ರನ್‌ಗಳಿಗೆ ಆಲೌಟ್ ಆಗಿತ್ತು. ಮಿಚೆಲ್ ಮಾರ್ಷ್ 118 ಎಸೆತಗಳಲ್ಲಿ 118 ರನ್ ಗಳಿಸುವ ಮೂಲಕ ಮಿಂಚಿದ್ದರು. ಉಳಿದ ಬ್ಯಾಟರ್ ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದ ಕಾರಣ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತ ಕಲೆಹಾಕಿತ್ತು. ಇಂಗ್ಲೆಂಡ್ ಪರವಾಗಿ ಮಾರ್ಕ್ ವುಡ್ 5 ವಿಕೆಟ್ ಪಡೆದು ಮಿಂಚಿದ್ದರೆ, ಕ್ರಿಸ್ ವೋಕ್ಸ್ 3 ಮತ್ತು ಸ್ಟುವರ್ಟ್ ಬ್ರಾಡ್ 2 ವಿಕೆಟ್ ಪಡೆದು ಮಿಂಚಿದ್ದರು.
ಕುಸಿದ ಇಂಗ್ಲೆಂಡ್‌ಗೆ ನಾಯಕನ ಆಸರೆ
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. 131 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ನಾಯಕ ಬೆನ್ ಸ್ಟೋಕ್ಸ್ 80 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 237 ರನ್‌ಗಳಿಗೆ ಆಲೌಟ್ ಆಗುವ ಮೂಲಕ 26 ರನ್‌ಗಳ ಹಿನ್ನಡೆ ಅನುಭವಿಸಿತು. ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ 6 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದು ಮಿಂಚಿದರು.
26 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 224 ರನ್‌ಗಳಿಗೆ ಆಲೌಟ್ ಆಯಿತು. ಖವಾಜಾ 43, ಲ್ಯಾಬುಸ್ಚಾಗ್ನೆ 33, ಟ್ರಾವಿಸ್ ಹೆಡ್ 77, ಮಿಚೆಲ್ ಮಾರ್ಷ್ 28 ರನ್ ಗಳಿಸಿ ಆಸರೆಯಾದರು. ಸ್ಟುವರ್ಟ್ ಬ್ರಾಡ್ ಮತ್ತು ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಪಡೆದರು. ಮಾರ್ಕ್ ವುಡ್ ಮತ್ತು ಮೊಯೀನ್ ಅಲಿ ತಲಾ ಎರಡು ವಿಕೆಟ್ ಪಡೆದರು.
ರೋಚಕ ಗೆಲುವು ಸಾಧಿಸಿದ ಇಂಗ್ಲೆಂಡ್
ಗೆಲುವಿಗೆ 251 ರನ್‌ಗಳ ಗುರಿಯನ್ನು ಬೆನ್ನತ್ತಿದೆ ಒಂದು ಹಂತದಲ್ಲಿ ಸೋಲುವ ಭೀತಿಯಲ್ಲಿತ್ತು. ಆದರೆ ಹ್ಯಾರಿ ಬ್ರೂಕ್ 75 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಜ್ಯಾಕ್ ಕ್ರಾಲಿ 44, ಕ್ರಿಸ್ ವೋಕ್ಸ್ 32 ಉತ್ತಮ ಬ್ಯಾಟಿಂಗ್ ಮಾಡಿದರು. ಮಿಚೆಲ್ ಸ್ಟಾರ್ಕ್ 5 ವಿಕೆಟ್ ಪಡೆದರು. ಅತ್ಯುತ್ತಮ ಆಲ್‌ರೌಂಡ್ ಪ್ರದರ್ಶನ ನೀಡಿದ ಮಾರ್ಕ್ ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಹ್ಯಾರಿ ಬ್ರೂಕ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಕಡಿಮೆ ಎಸೆತದಲ್ಲಿ ಸಾವಿರ ರನ್ ಪೂರೈಸಿದ ಬ್ಯಾಟರ್ ಎನ್ನುವ ದಾಖಲೆ ಬರೆದರು. 1058 ಎಸೆತಗಳಲ್ಲಿ ಹ್ಯಾರಿ ಬ್ರೂಕ್ 1000 ರನ್ ಗಳಿಸಿದರು.












Click it and Unblock the Notifications