Devdutt Padikkal: ಶತಕದ ಸಾಧನೆ ಹಿಂದಿನ ರಹಸ್ಯ ಬಿಚ್ಚಿಟ್ಟ ದೇವದತ್ ಪಡಿಕ್ಕಲ್
Devdutt Padikkal: ಗಾಲೆಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿ ಮಿಂಚಿದರು. ಈ ಕುರಿತು ಮಾತನಾಡಿದ ಪಡಿಕ್ಕಲ್ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಕ್ಕೆ ಟೀಮ್ ಇಂಡಿಯಾ 9 ವಿಕೆಟ್ ನಷ್ಟಕ್ಕೆ 460 ರನ್ ಕಲೆಹಾಕಿ ಮೇಲುಗೈ ಸಾಧಿಸಿದೆ. ಇದರಲ್ಲಿ ಕನ್ನಡಿಗ ಪಡಿಕ್ಕಲ್ ಸಿಡಿಸಿದ 167 ರನ್‌ಗಳು ಸೇರಿವೆ. ಈ ಅಮೋಘ ಬ್ಯಾಟಿಂಗ್ ಪ್ರದರ್ಶನದ ನಂತರ ಮಾತನಾಡಿದ ಪಡಿಕ್ಕಲ್, ತಮ್ಮ ಈ ಸಾಧನೆಯ ಹಿಂದಿನ ಮನಸ್ಥಿತಿ ಮತ್ತು ನಿರಂತರ ರನ್‌ಗಳ ಹಸಿವಿನ ಕುರಿತು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

'ಕಳೆದ ಎರಡು ವರ್ಷಗಳಿಂದ ಕಠಿಣ ಅಭ್ಯಾಸ'
ಭಾರತ ಟೆಸ್ಟ್ ತಂಡದಲ್ಲಿ ಪುನಃ ಅವಕಾಶ ಪಡೆಯಲು ದೇವದತ್ ಪಡಿಕ್ಕಲ್ ಎರಡು ವರ್ಷಗಳಿಗೂ ಹೆಚ್ಚು ಕಾಲ ಕಾಯಬೇಕಾಯಿತು. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡರು. 'ಕಳೆದ ಎರಡು ವರ್ಷಗಳಿಂದ ನಾನು ಕಠಿಣ ಅಭ್ಯಾಸ ನಡೆಸುತ್ತಿದ್ದೆ. ಅವಕಾಶ ಸಿಕ್ಕಾಗ ತಂಡಕ್ಕಾಗಿ ವಿಶೇಷವಾದದ್ದನ್ನು ಸಾಧಿಸಬೇಕು ಎಂಬುದು ನನ್ನ ಕನಸಾಗಿತ್ತು, ಅದನ್ನು ನೆರವೇರಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ,' ಎಂದು ಹೇಳಿದರು.
ದೇವದತ್ ಪಡಿಕ್ಕಲ್ ಹೇಳಿದ್ದೇನು?
ಶತಕ ಬಾರಿಸಿದ ತಕ್ಷಣ ಆಟಗಾರರು ನಿರಾಳರಾಗಿ ವಿಕೆಟ್ ಒಪ್ಪಿಸುವ ಸಾಧ್ಯತೆ ಹೆಚ್ಚು. ಆದರೆ ಪಡಿಕ್ಕಲ್ ಶತಕದ ನಂತರವೂ 67 ರನ್‌ಗಳನ್ನು ಸೇರಿಸಿದರು. ಈ ಕುರಿತು ಮಾತನಾಡಿದ ಅವರು, 'ಶತಕ ಪೂರೈಸಿದ ನಂತರದ 20 ರಿಂದ 30 ಎಸೆತಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಆ ಸಮಯದಲ್ಲಿ ಸಂಪೂರ್ಣ ಗಮನಹರಿಸಿ ಕ್ರೀಸ್‌ನಲ್ಲಿ ನಿಲ್ಲುವುದು ಮುಖ್ಯವಾಗಿಗುತ್ತದೆ. ಶತಕದ ನಂತರದ ಮೊದಲ 10-15 ಎಸೆತಗಳನ್ನು ದಾಟಿದರೆ, ಮುಂದೆ ದೊಡ್ಡ ಇನಿಂಗ್ಸ್ ಕಟ್ಟುವುದು ಸುಲಭವಾಗುತ್ತದೆ,' ಎಂದು ತಮ್ಮ ತಂತ್ರವನ್ನು ಬಿಚ್ಚಿಟ್ಟಿದ್ದಾರೆ.
ಕರ್ನಾಟಕದ ಹಿರಿಯ ಆಟಗಾರರ ಪ್ರೇರಣೆ
'ತಮ್ಮ ಬ್ಯಾಟಿಂಗ್ ಶೈಲಿ ಹಾಗೂ ದೀರ್ಘ ಇನಿಂಗ್ಸ್ ಕಟ್ಟುವ ಕಲಿಕೆಗೆ ಕರ್ನಾಟಕದ ದೇಶೀಯ ಕ್ರಿಕೆಟ್ ನೆರವಾಗಿದೆ. ರಾಜ್ಯ ತಂಡದಲ್ಲಿ ಹಿರಿಯ ಆಟಗಾರರು ಬೃಹತ್ ಶತಕಗಳನ್ನು ಬಾರಿಸುವುದನ್ನು ನೋಡಿ ಬೆಳೆದ ತಮಗೂ ಅದೇ ರೀತಿ ದೊಡ್ಡ ಮೊತ್ತ ಕಲೆಹಾಕುವ ಆಸೆ ಮತ್ತು ಪ್ರೇರಣೆ ಸಿಕ್ಕಿತು,' ಎಂದು ಅವರು ಹೇಳಿದರು.
ದೇವದತ್ ಪಡಿಕ್ಕಲ್ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 167 ರನ್ ಗಳಿಸಿ ಪ್ರಭಾತ್ ಜಯಸೂರ್ಯ ಬೌಲಿಂಗ್‌ನಲ್ಲಿ ಸ್ಟಂಪ್ ಔಟ್ ಆದರು. ಮಳೆಯಿಂದಾಗಿ ಎರಡನೇ ದಿನದ ಆಟಕ್ಕೆ ಅಡಚಣೆ ಉಂಟಾಗಿದ್ದರೂ, ಪಡಿಕ್ಕಲ್ ಅವರ ಈ ಪ್ರದರ್ಶನದಿಂದಾಗಿ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 460 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಟೀಮ್ ಇಂಡಿಯಾ 3ನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಮಾಡಿಕೊಳ್ಳಲು ಯತ್ನಿಸುತ್ತಿರುವ 26 ವರ್ಷದ ಪಡಿಕ್ಕಲ್ ಅವರಿಗೆ, ಈ ಶತಕವು ಅವರ ವೃತ್ತಿಜೀವನದ ಪ್ರಮುಖ ಮೈಲಿಗಲ್ಲಾಗಿದೆ ಎಂದರೆ ತಪ್ಪಾಗಲಾರದು.


Click it and Unblock the Notifications
