PBKS vs DC: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್; RCB ತಂಡಕ್ಕೆ ಅನುಕೂಲ!
ಜೈಪುರದ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಪ್ಲೇಆಫ್ ತಲುಪುವ ಅವಕಾಶ ಕೈಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಪಂದ್ಯವನ್ನು ಗೆದ್ದು ಐಪಿಎಲ್ 2025 ಆವೃತ್ತಿಯ ಅಭಿಯಾನವನ್ನು ಕೊನೆಗೊಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ್ದು ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯಲು 4 ತಂಡಗಳಿಗೂ ಇನ್ನೂ ಅವಕಾಶ ಸಿಕ್ಕಂತಾಗಿದೆ.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 206 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕ ಶ್ರೇಯಸ್ ಅಯ್ಯರ್ 34 ಎಸೆತಗಳಲ್ಲಿ 53 ರನ್ ಗಳಿಸಿದರೆ, ಮಾರ್ಕಸ್ ಸ್ಟೊಯಿನಿಸ್ 16 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 44 ರನ್ ಗಳಿಸಿದರು. ಜೋಶ್ ಇಂಗ್ಲಿಸ್ 12 ಎಸೆತಗಳಲ್ಲಿ 32 ರನ್ ಗಳಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಮುಸ್ತಾಫಿಜುರ್ ರೆಹಮಾನ್ 3 ವಿಕೆಟ್ ಪಡೆದರೆ, ವಿಪ್ರಜ್ ನಿಗಮ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಮುಕೇಶ್ ಕುಮಾರ್ 1 ವಿಕೆಟ್ ಪಡೆದುಕೊಂಡರು.
ಕರುಣ್, ರಿಜ್ವಿ ಅಮೋಘ ಬ್ಯಾಟಿಂಗ್
207 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಿತು. ಕೆಎಲ್ ರಾಹುಲ್ 21 ಎಸೆತಗಳಲ್ಲಿ 35 ರನ್ ಗಳಿಸಿದರೆ, ಫಾಫ್ ಡುಪ್ಲೆಸಿಸ್ 15 ಎಸೆತಗಳಲ್ಲಿ 23 ರನ್ ಗಳಿಸಿದರು. ಬಳಿಕ ಬಂದ ಕರುಣ್ ನಾಯರ್ 27 ಎಸೆತಗಳಲ್ಲಿ 44 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ರನ್ ಗಳಿಸುವ ವೇಗ ಕಡಿಮೆಯಾಗದಂತೆ ನೋಡಿಕೊಂಡರು. ಸೆದಿಕುಲ್ಲಾ ಅಟಲ್ 16 ಎಸೆತಗಳಲ್ಲಿ 22 ರನ್ ಗಳಿಸಿದರೆ. ಸಲ್ಮಾನ್ ರಿಜ್ವಿ ಅಬ್ಬರಿಸಿದರು.
25 ಎಸೆತಗಳಲ್ಲಿ 3 ಬೌಂಡರಿ 5 ಭರ್ಜರಿ ಸಿಕ್ಸರ್ ಸಹಿತ ಅಜೇಯ 58 ರನ್ ಗಳಿಸಿದ ಅವರ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು. ಟ್ರಿಸ್ಟನ್ ಸ್ಟಬ್ಸ್ 14 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಆರ್ ಸಿಬಿ ತಂಡಕ್ಕೆ ವರದಾನವಾಗಿದೆ. ಒಂದು ವೇಳೆ ಆರ್ ಸಿಬಿ ಎಲ್‌ಎಸ್‌ಜಿ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದರೆ ಪಂಜಾಬ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ ರನ್‌ರೇಟ್ ಲೆಕ್ಕಾಚಾರದಲ್ಲಿ ಆರ್ ಸಿಬಿ ಎರಡನೇ ಸ್ಥಾನ ಪಡೆಯಬಹದು. ಭಾನುವಾರ ಸಿಎಸ್‌ಕೆ ವಿರುದ್ಧ ಗುಜರಾತ್ ಟೈಟನ್ಸ್ ಸೋತರೆ ಆರ್ ಸಿಬಿ ಮೊದಲ ಸ್ಥಾನಕ್ಕೂ ಬರಬಹುದು.












Click it and Unblock the Notifications