D Gukesh: ವಿಶ್ವ ಚೆಸ್ ಚಾಂಪಿಯನ್ ಡಿ ಗುಕೇಶ್ ನಮ್ಮವ! ತಮಿಳರು - ತೆಲುಗರ ನಡುವೆ ಜಗಳ ಜೋರು
ಗುಕೇಶ್ ದೊಮ್ಮರಾಜು, ಡಿ ಗುಕೇಶ್ ಇಡೀ ವಿಶ್ವಕ್ಕೆ ಚಿರಪರಿಚಿತ. ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಗೆದ್ದು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಇತಿಹಾಸ ನಿರ್ಮಿಸಿದ ಭಾರತೀಯ. ಡಿ ಗುಕೇಶ್ ಸಾಧನೆಗೆ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ವಿಶ್ವನಾಥನ್ ಆನಂದ್ ಬಳಿಕ ವಿಶ್ವ ಚೆಸ್ ಚಾಂಪಿಯನ್ ಆದ ಎರಡನೇ ಭಾರತೀಯ ಆಟಗಾರನಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ ಡಿ ಗುಕೇಶ್ ನಮ್ಮವ ಎಂದು ಇದೀಗ ತಮಿಳು ಮತ್ತು ತೆಲುಗು ಭಾಷಿಕರ ನಡುವೆ ಜಗಳ ಶುರುವಾಗಿದೆ!
ಡಿ ಗುಕೇಶ್ ಮೂಲತಃ ತೆಲುಗು ಭಾಷಿಕರಾದರೂ ಚೆನ್ನೈನಲ್ಲಿ ನೆಲೆಸಿದ್ದಾರೆ. ಡಿ ಗುಕೇಶ್ ಬಾಲ್ಯ, ಓದು, ಜೀವನ, ಸಾಧನೆ ಎಲ್ಲವೂ ಚೆನ್ನೈನಲ್ಲೇ ಆಗಿದೆ. ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲ್ಲುತ್ತಿದ್ದಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಈತ ತೆಲುಗು ಹುಡುಗ ನಮ್ಮವ ಎಂದು ಹೇಳಿಕೊಂಡಿರುವುದು ತಮಿಳು ಭಾಷಿಕರ ಕೋಪಕ್ಕೆ ಕಾರಣವಾಗಿದೆ.

ಸಾಮಾನ್ಯ ಜನ ಮಾತ್ರವಲ್ಲ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಕೂಡ ಡಿ ಗುಕೇಶ್‌ಗೆ ಅಭಿನಂದನೆ ಸಲ್ಲಿಸುವ ಟ್ವೀಟ್‌ನಲ್ಲಿ, ನಮ್ಮ ತೆಲುಗು ಹುಡುಗ ಎಂದು ಕರೆದಿದ್ದಾರೆ. ಇದಕ್ಕೆ ಅನೇಕ ತಮಿಳು ಭಾಷಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಆತ ತಮಿಳು ಹುಡುಗ ಎಂದು ತಿರುಗೇಟು ನೀಡಿದ್ದಾರೆ.
ಡಿ ಗುಕೇಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ತಮಿಳು ನಾಡು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದು, 18ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಕ್ಕೆ ಅಭಿನಂದನೆಗಳು, ನಿನ್ನ ಸಾಧನೆಯು ಭಾರತ ಶ್ರೀಮಂತ ಚೆಸ್ ಪರಂಪರೆಯನ್ನು ಮುಂದುವರೆಸುತ್ತದೆ. ಮತ್ತೊಬ್ಬ ವಿಶ್ವ ದರ್ಜೆಯ ಚಾಂಪಿಯನ್ ಅನ್ನು ನೀಡುವ ಮೂಲಕ ಚೆನ್ನೈ ಚೆಸ್‌ನ ಜಾಗತಿಕ ರಾಜಧಾನಿಯಾಗಿದೆ. ಇಡೀ ತಮಿಳುನಾಡು ನಿನ್ನ ಸಾಧನೆಗೆ ಹೆಮ್ಮೆ ಪಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿ ಮುಕೇಶ್ ಹೇಳಿದ್ದೇನು?
ವಿಶ್ವ ಚೆಸ್ ಚಾಂಪಿಯನ್ ಆದ ಬಳಿಕ ಪ್ರತಿಕ್ರಿಯೆ ನೀಡಿರುವ ಡಿ. ಗುಕೇಶ್ ನನ್ನ ಸಾಧನೆಗೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದ ತಮಿಳುನಾಡು ಸರ್ಕಾರ ಮತ್ತು ಜನತೆಗೆ ಧನ್ಯವಾದ ಎಂದಿದ್ದಾರೆ. ತಮಗೆ ಅಭಿನಂದನೆ ಸಲ್ಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು, ಇದೊಂದು ಖುಷಿಯ ಕ್ಷಣ ಎಂದು ಹೇಳಿದ್ದಾರೆ.
ಗುಕೇಶ್ 2006, ಮೇ 29ರಂದು ಚೆನ್ನೈನಲ್ಲಿ ತೆಲುಗು ಭಾಷಿಕ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ರಜನಿಕಾಂತ್ ಇಎನ್‌ಟಿ ವೈದ್ಯರಾಗಿದ್ದು, ತಾಯಿ ಪದ್ಮ ಮೈಕ್ರೋಬಯಾಲಿಜಿಸ್ಟ್ ಆಗಿದ್ದಾರೆ. ತಮ್ಮ 7ನೇ ವರ್ಷದಲ್ಲಿ ಚೆಸ್ ಆಡಲು ಆರಂಭಿಸಿದ ಗುಕೇಶ್ ಇಂದು ವಿಶ್ವ ಚಾಂಪಿಯನ್ ಆಗಿದ್ದಾರೆ.












Click it and Unblock the Notifications