CSK New Head Coach: ಸಿಎಸ್‌ಕೆಗೆ ನೂತನ ಹೆಡ್ ಕೋಚ್ ಆಗಿ ಜಹೀರ್ ಖಾನ್ ನೇಮಕ
CSK New Head Coach Zaheer Khan: ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಸಿಎಸ್‌ಕೆಗೆ ನೂತನ ಮುಖ್ಯ ತರಬೇತುದಾರರಾಗಿ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಜಹೀರ್ ಖಾನ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೀರ್ಘಕಾಲದಿಂದ ತಂಡದ ಮುಖ್ಯ ತರಬೇತುದಾರರಾಗಿದ್ದ ಸ್ಟೀಫನ್ ಫ್ಲೆಮಿಂಗ್ ಅವರು ಸ್ಥಾನದಿಂದ ನಿರ್ಗಮಿಸಿದ್ದು, ಇದೀಗ ಭಾರತದ ಮಾಜಿ ವೇಗಿ ಜಹೀರ್ ಖಾನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ನೂತನ ಹೆಡ್ ಕೋಚ್ ಆಗಿ ನೇಮಕ ಮಾಡಿದೆ.

ಸ್ಟೀಫನ್ ಫ್ಲೆಮಿಂಗ್ ಸಾಧನೆ
2009ರಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಾರಥ್ಯ ವಹಿಸಿದ್ದ ನ್ಯೂಜಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಕೋಚ್ ಆಗಿ ಸೇವೆ ಸಲ್ಲಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಮಾಜಿ ನಾಯಕ ಎಂ.ಎಸ್.ಧೋನಿ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್‌ಕೆ 5 ಬಾರಿ ಐಪಿಎಲ್ ಟ್ರೋಫಿ ಹಾಗೂ 2 ಬಾರಿ ಚಾಂಪಿಯನ್ಸ್ ಲೀಗ್ ಟಿ20 ಟ್ರೋಫಿಗಳನ್ನು ಗೆದ್ದು ಬೀಗಿತ್ತು. ಅವರ ನಿರ್ಗಮನವು ಸಿಎಸ್‌ಕೆ ಇತಿಹಾಸದ ಒಂದು ಪ್ರಮುಖ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ.
ಸಿಎಸ್‌ಕೆಗೆ ನೂತನ ಹೆಡ್ ಕೋಚ್
ಭಾರತದ ಸರ್ವಶ್ರೇಷ್ಠ ಎಡಗೈ ವೇಗಿಗಳಲ್ಲಿ ಒಬ್ಬರಾದ ಜಹೀರ್ ಖಾನ್ ಅವರಿಗೆ ಐಪಿಎಲ್‌ನಲ್ಲಿ ಅಪಾರ ಅನುಭವವಿದೆ. ಆಟಗಾರರಾಗಿ ಸಿಎಸ್‌ಕೆ ವಿರುದ್ಧ ಆಡಿದ ಅನುಭವ ಹೊಂದಿರುವ ಜಹೀರ್, ನಿವೃತ್ತಿಯ ನಂತರ ಮುಂಬೈ ಇಂಡಿಯನ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಮತ್ತು ಮಾರ್ಗದರ್ಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಪ್ರಭಾವಿ ತಂಡದ ಮುಖ್ಯ ತರಬೇತುದಾರ ಹುದ್ದೆಗೆ ಆಯ್ಕೆಯಾಗಿರುವುದು ಅವರ ತರಬೇತಿ ವೃತ್ತಿಜೀವನದ ದೊಡ್ಡ ಮೈಲಿಗಲ್ಲಾಗಿದೆ.
ಜಹೀರ್ ಆಗಮನದಿಂದ ಸಿಎಸ್‌ಕೆಗೆ ಏನಲ್ಲಾ ಲಾಭ?
ಜಹೀರ್ ಖಾನ್ ಅವರ ಬೌಲಿಂಗ್ ತಂತ್ರಗಳು ಮತ್ತು ಯುವ ವೇಗಿಗಳನ್ನು ತೀಡಿ ತಿದ್ದುವ ಕೌಶಲ ಸಿಎಸ್‌ಕೆಯ ಬೌಲಿಂಗ್ ವಿಭಾಗಕ್ಕೆ ಹೊಸ ಶಕ್ತಿ ನೀಡಲಿದೆ. ದೇಶೀಯ ಹಾಗೂ ಭಾರತೀಯ ಯುವ ಆಟಗಾರರ ಸಾಮರ್ಥ್ಯ ಮತ್ತು ಮನಸ್ಥಿತಿಯನ್ನು ಅವರು ಹತ್ತಿರದಿಂದ ಬಲ್ಲವರಾಗಿದ್ದು, ತಂಡದ ಸಮತೋಲನ ಕಾಯ್ದುಕೊಳ್ಳಲು ನೆರವಾಗಲಿದ್ದಾರೆ. ಆಧುನಿಕ ಟಿ20 ಕ್ರಿಕೆಟ್‌ಗೆ ತಕ್ಕಂತೆ ಸಿಎಸ್‌ಕೆಯ ಶೈಲಿಯನ್ನು ಬದಲಾಯಿಸಲು ಹಾಗೂ ಹೊಸ ಕಾರ್ಯತಂತ್ರಗಳನ್ನು ರೂಪಿಸಲು ಅವರ ಅನುಭವ ತುಂಬಾ ಸಹಾಯಕ ಆಗಲಿದೆ.
ಕಳೆದ ಕೆಲವು ಆವೃತ್ತಿಗಳಲ್ಲಿ ಸಿಎಸ್‌ಕೆ ಪ್ರದರ್ಶನದಲ್ಲಿ ಏರಿಳಿತ ಕಂಡಿದ್ದರಿಂದ, ಮುಂಬರುವ ಆವೃತ್ತಿಗೆ ಮುನ್ನ ಹೊಸ ದೃಷ್ಟಿಕೋನವನ್ನು ತರಲು ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಜಹೀರ್ ಖಾನ್ ಮತ್ತು ತಂಡದ ನಾಯಕತ್ವ ವಹಿಸಿಕೊಳ್ಳುವ ಯುವ ಆಟಗಾರರ ಸಿಎಸ್‌ಕೆಗೆ ಮತ್ತೊಮ್ಮೆ ಹೊಸ ಮೆರುಗು ನೀಡುವ ನಿರೀಕ್ಷೆಯಿದೆ. ಫ್ಲೆಮಿಂಗ್ ನಿರ್ಮಿಸಿದ ಯಶಸ್ವಿ ಅಡಿಪಾಯದ ಮೇಲೆ ಜಹೀರ್ ಖಾನ್ ಸಿಎಸ್‌ಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.
ಜಹೀರ್ ಖಾನ್ ತಮ್ಮ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಐಪಿಎಲ್ ಫ್ರಾಂಚೈಸಿಯೊಂದರ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಲಿದ್ದಾರೆ. ಆದರೆ ಈ ಮಟ್ಟದಲ್ಲಿ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. 2018ರಿಂದ 2022ರ ವರೆಗೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕ್ರಿಕೆಟ್ ಆಪರೇಷನ್ಸ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಜಹೀರ್, ಬಳಿಕ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್ ಡೆವಲಪ್‌ಮೆಂಟ್ ಹುದ್ದೆಗೂ ಬಡ್ತಿ ಪಡೆದಿದ್ದರು. 2025ರ ಐಪಿಎಲ್ ಆವೃತ್ತಿಯಲ್ಲಿ ಅವರು ಎಲ್‌ಎಸ್‌ಜಿ ತಂಡದೊಂದಿಗೆ ಸಹ ಕೆಲಸ ಮಾಡಿದ್ದರು.


Click it and Unblock the Notifications
